ನ್ಯೂಸ್

ಆತ ಬ್ರಾಹ್ಮಣನಾಗಿದ್ದರಿಂದಲೇ ಇಷ್ಟೆಲ್ಲ ಚರ್ಚೆ; ವಿಕಾಸ್​ ದುಬೆ ಎನ್​ಕೌಂಟರ್​ಗೆ ಕಾಂಗ್ರೆಸ್​ ಹೊಸ ವ್ಯಾಖ್ಯಾನ

ಮುಂಬೈ: ಎಂಟು ಪೊಲೀಸರನ್ನು ಕೊಂದ ಗ್ಯಾಂಗ್​ಸ್ಟರ್​ ವಿಕಾಸ್​ ದುಬೆ ಪೊಲೀಸ್​ ಎನ್​ಕೌಂಟರ್​ಗೆ ಬಲಿಯಾಗಿದ್ದಾನೆ. ಪೊಲೀಸರು ಕಾರ್ಯಾಚರಣೆ ಬಗ್ಗೆ ದೇಶಾದ್ಯಂತ ಭಾರಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.

ವಿಕಾಸ್​ ದುಬೆ ಹತ್ಯೆ ಇಷ್ಟೊಂದು ಚರ್ಚೆ ಹಾಗೂ ಕೋಲಾಹಲ ಮೂಡಿಸಿದ್ದು ಏಕೆ ಗೊತ್ತೆ? ಆತ ಬ್ರಹ್ಮಣನಾಗಿರುವುದು....!

ಇದು ಕಾಂಗ್ರೆಸ್​ ಸಂಸದ ಹುಸೇನ್​ ದಳವಾಯಿ ಕಂಡುಕೊಂಡಿರುವ ಸತ್ಯ. ಅವರ ಪ್ರಕಾರ ವಿಕಾಸ್​ ದುಬೆ ಬ್ರಾಹ್ಮಣ ಜಾತಿಗೆ ಸೇರಿದವನಾದ ಕಾರಣ ರಾಷ್ಟ್ರವ್ಯಾಪಿ ಆತನ ಹತ್ಯೆ ತಲ್ಲಣಗಳನ್ನು ಮೂಡಿಸಿದೆ. ಈವರೆಗಿನ ಪ್ರಮುಖ ಎನ್​ಕೌಂಟರ್​ಗಳಲ್ಲಿ ದಲಿತರು ಹಾಗೂ ಮುಸ್ಲಿಮರು ಹತ್ಯೆಗೀಡಾಗಿದ್ದಾರೆ ಎಂದು ಹೇಳಿದ್ದಾರೆ.

ದುಬೆ ಹತ್ಯೆ ಪರಿಣಾಮ ಏನಾಗಿದೆ ಎಂದರೆ, ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕುರ್ಚಿಯಿಂದ ಕೆಳಗಿಳಿಯಬೇಕಾದ ಸನ್ನಿವೇಶ ಎದುರಾಗಿದೆ ಎಂದು ಅವರು ಸುದ್ದಿಸಂಸ್ಥೆಯೊಂದಕ್ಕೆ ನೀಡಿದ ಹೇಳಿಕೆಯಲ್ಲಿ ವ್ಯಾಖ್ಯಾನಿಸಿದ್ದಾರೆ.

ಉತ್ತರಪ್ರದೇಶದ ಕಾನ್ಪುರ ಭಿಕ್ರೂ ಗ್ರಾಮದಲ್ಲಿ ಎಂಟು ಪೊಲೀಸರನ್ನು ಕೊಂದಿದ್ದ ವಿಕಾಸ್​ ದುಬೆ ಮಧ್ಯಪ್ರದೇಶದ ಉಜ್ಜೈನ್​ ಮಹಾಕಾಲ ಮಂದಿರದಲ್ಲಿ ಸೆರೆಯಾಗಿದ್ದ. ಆತನನ್ನು ಅಲ್ಲಿಂದ ಕಾನ್ಪುರಕ್ಕೆ ಕರೆತರುವಾಗ ವಾಹನ ಪಲ್ಟಿಯಾಗಿತ್ತು. ಆಗ ಪೊಲೀಸರ ಬಂದೂ ಕಸಿದುಕೊಂಡು ಪರಾರಿಯಾಗಲು ಯತ್ನಿಸಿದ ದುಬೆಯನ್ನು ಗುಂಡು ಹಾರಿಸಿ ಕೊಲ್ಲಲಾಗಿತ್ತು.