ನ್ಯೂಸ್

VIDEO| ಪಾಕ್​ ಸೇನೆಗೆ ಇದೆಂಥಾ ದುಸ್ಥಿತಿ; ಹಣಕ್ಕಾಗಿ ಮದುವೆ ಸಮಾರಂಭದಲ್ಲಿ ಬೀಟಿಂಗ್ ರಿಟ್ರೀಟ್ ಪ್ರದರ್ಶನ

ನವದೆಹಲಿ: ಆರ್ಥಿಕ ಸಂಕಷ್ಟದಿಂದಾಗಿ ತೀವ್ರವಾಗಿ ಕಂಗೆಟ್ಟಿರುವ ಪಾಕಿಸ್ತಾನ ಜಾಗತಿಕ ವೇದಿಕೆಗಳಲ್ಲಿ ತೀವ್ರ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದು, ಅಲ್ಲಿನ ರಾಜಕಾರಣಿಗಳು, ಮಾಜಿ ಕ್ರಿಕೆಟಿಗರು ಹಾಗೂ ಸೇನೆ ಅಧಿಕಾರಿಗಳು ಭಾರತೀಯರಿಂದ ಆಗಿಂದಾಗೆ ಟ್ರೋಲ್​ ಆಗುತ್ತಿರುತ್ತಾರೆ.

ಪಂಜಾಬಿನ ಅಮೃತಸರ ಜಿಲ್ಲೆಯ ಅಟ್ಟಾರ-ವಾಘಾ ಅಂತರಾಷ್ಟ್ರೀಯ ಗಡಿ ರೇಖೆಯಲ್ಲಿ ಪ್ರತಿನಿತ್ಯ ಬೀಟಿಂಗ್​ ರಿಟ್ರೀಟ್​ ಸಮಾರಂಭವನ್ನು ಆಚರಿಸಲಾಗುತ್ತದೆ. ಭಾರತೀಯ ಗಡಿ ಭದ್ರತಾ ಪಡೆ  (BSF) ಮತ್ತು ಪಾಕಿಸ್ತಾನ ರೇಂಜರ್ ನಡೆಸುವ ಮಿಲಿಟರಿ ಅಭ್ಯಾಸವಾಗಿದೆ. ಈ ಕಾರ್ಯಕ್ರಮವನ್ನು ನೋಡಲೆಂದು ಭಾರತ ಮತ್ತು ಪಾಕಿಸ್ತಾನದ ಅನೇಕ ಜನರು ಈ ಸ್ಥಳಕ್ಕೆ ಬರುತ್ತಾರೆ. 

ಇದೀಗ ಹೊಸ ವಿಚಾರ ಒಂದರಲ್ಲಿ ಪಾಕಿಸ್ತಾನ ಸೇನೆಯ ರೇಂಜರ್ ಗುಂಪೊಂದು ಬೀಟಿಂಗ್ ರಿಟ್ರೀಟ್ ಪ್ರದರ್ಶನವನ್ನು ಮದುವೆ ಸಮಾರಂಭ ಒಂದರಲ್ಲಿ ಮಾಡಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವೈರಲ್​ ವಿಡಿಯೋ ಕುರಿತು ಕಮೆಂಟ್​ ಮಾಡಿರುವ ನೆಟ್ಟಿಗರು ಪಾಕಿಸ್ತಾನವನ್ನು ಟ್ರೋಲ್​ ಮಾಡಿದ್ದಾರೆ.

ಮೇಜರ್ ಗೌರವ್ ಆರ್ಯ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ನಿಮ್ಮ ಬಳಿ ಹಣವಿದ್ದರೆ ಮದುವೆ ಕಾರ್ಯಕ್ರಮ ಅಥವಾ ಕುಟುಂಬದ ಇತರ ಸಮಾರಂಭಗಳಲ್ಲಿ ಅಟ್ಟಾರಿ-ವಾಘಾ  ಗಡಿಯ ಬೀಟಿಂಗ್ ರಿಟ್ರೀಟ್ ಪ್ರದರ್ಶನವನ್ನು ಮಾಡಲು ಬಯಸಿದರೆ, ನೀವು ಪಾಕಿಸ್ತಾನ ರೇಂಜರ್ಗಳನ್ನು ನೇಮಿಸಿಕೊಳ್ಳಬಹುದು ಎಂದು ವಿಡಿಯೋಗೆ ಕ್ಯಾಪ್ಷನ್​ ಕೊಟ್ಟಿದ್ದಾರೆ.

ವೈರಲ್​ ಆಗಿರುವ ವಿಡಿಯೋದಲ್ಲಿ ಅಟ್ಟಾರಿ-ವಾಘಾ ಗಡಿಯಲ್ಲಿ ನಡೆಯುವ ಬೀಟಿಂಗ್ ರಿಟ್ರೀಟ್ ಸಮಾರಂಭದ ವೇಳೆ ಪಾಕಿಸ್ತಾನ ಸೇನೆಯ ಸೈನಿಕರು  ತೊಡುವ ವೇಷಭೂಷಣವನ್ನು ತೊಟ್ಟ ಪುರುಷರ ತಂಡವೊಂದನ್ನು ನೋಡಬಹುದಾಗಿದೆ. ಅದರಲ್ಲಿ ಒಬ್ಬ ವ್ಯಕ್ತಿ ವಾದ್ಯ ಮತ್ತು ಬ್ಯಾಂಡ್ ಸದ್ದಿಗೆ ರೋಷದಿಂದ ಪಾಕಿಸ್ತಾನ ಸೇನೆಯ ಬೀಟಿಂಗ್ ರಿಟ್ರೀಟ್  ಪ್ರದರ್ಶನವನ್ನು ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಡಿಸೆಂಬರ್​ 06ರಂದು ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈವರೆಗೆ 966 ವೀಕ್ಷಣೆಗೆ ಒಳಪಟ್ಟಿದ್ದು, ಮಾಡಬೇಕಾದ ಕೆಲಸಗಳನ್ನು ಬಿಟ್ಟು ಉಳಿದೆಲ್ಲಾ ಕೆಲಸವನ್ನು ಮಾಡುವ ಸೇನೆ ಮತ್ತು ಸೈನಿಕರು ಇರುವ ದೇಶವೆಂದರೆ ಅದು ಪಾಕಿಸ್ತಾನ ಮಾತ್ರ. ಪಾಕಿಸ್ತಾನಿ ಸೈನಿಕರು ಹಣಕ್ಕಾಗಿ ಜನಸಾಮಾನ್ಯರಿಗೆ ಸೆಲ್ಯೂಟ್ ಮಾಡುತ್ತಾರೆಯೇ ಎಂದು ಹಲವರು ಕಮೆಂಟ್​ ಮಾಡಿದ್ದಾರೆ.