ನ್ಯೂಸ್

ಹೆಂಡತಿ, ಮಕ್ಕಳೆದುರೇ ಇನ್​ಸ್ಪೆಕ್ಟರ್​​ನಿಂದ ಥಳಿತ; ಮನೆ ಬಾಡಿಗೆ ಕೊಡಲಾಗದ ಸಂಕಷ್ಟಕ್ಕೆ ಬೆಂಕಿ ಹಚ್ಚಿಕೊಂಡ....!

ಚೆನ್ನೈ: ಕರೊನಾ ಸಂಕಷ್ಟದಿಂದಾಗಿ ಕೆಲಸ ಇಲ್ಲದ ಕಾರಣ ವ್ಯಕ್ತಿಯೊಬ್ಬ ನಾಲ್ಕು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿರಲಿಲ್ಲ. ಬಾಡಿಗೆ ವಸೂಲಿ ಮಾಡಲು ಮನೆ ಮಾಲೀಕ ಪೊಲೀಸರ ಮೊರೆ ಹೋದ. ಮನೆಗೆ ಇನ್​ಸ್ಪೆಕ್ಟರ್​ ಹೆಂಡತಿ, ಮಕ್ಕಳ ಎದುರೇ ಆತನನ್ನು ಥಳಿಸಿದ. ಪರಿಣಾಮ ಭಾರಿ ದುರಂತವೇ ನಡೆದು ಹೋಯಿತು.

ಇಲ್ಲಿನ ಫುಳಾಲ್​ ಪ್ರದೇಶದಲ್ಲಿ ನೆಲೆಸಿದ್ದ ಶ್ರೀನಿವಾಸ್​ ಪೇಂಟಿಂಗ್​ ಮಾಡಿಕೊಂಡಿದ್ದ. ಕರೊನಾದಿಂದಾಗಿ ವಿಧಿಸಿದ್ದ ಲಾಕ್​ಡೌನ್​ ಕಾರಣ ಕೆಲಸ ಕಳೆದುಕೊಂಡಿದ್ದ. ಹೀಗಾಗಿ ನಾಲ್ಕು ತಿಂಗಳಿನಿಂದ ಆತನಿಗೆ ಸಂಪಾದನೆಯೇ ಇರಲಿಲ್ಲ. ಇದರಿಂದಾಗಿ ಮನೆ ಬಾಡಿಗೆಯನ್ನು ನೀಡಿರಲಿಲ್ಲ.

ಇದರಿಂದ ಕೆರಳಿದ ಮನೆ ಮಾಲೀಕ ರಾಜೇಂದ್ರನ್​ ಬಾಡಿಗೆ ವಸೂಲಿ ಮಾಡಿಕೊಳ್ಳಲು ಪೊಲೀಸರ ಮೊರೆ ಹೋಗಿದ್ದ. ಮನೆ ಬಳಿಗೆ ಬಂದ ಇನ್​ಸ್ಪೆಕ್ಟರ್​ ಸ್ಯಾಮ್​ ಬೆನ್ಸನ್​ ಪೇಂಟರ್​ನನ್ನು ಹೆಂಡತಿ ಮಕ್ಕಳ ಎದುರಲ್ಲೇ ಮೈಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದ.

ತನಗಾದ ಅವಮಾನವನ್ನು ಸಹಿಸಿಕೊಳ್ಳಲಾಗದೇ, ಶ್ರೀನಿವಾಸ್ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶೇ.80 ಸುಟ್ಟಗಾಯಗಳಿಂದ ಬಳಲುತ್ತಿರುವ ಶ್ರೀನಿವಾಸನನ್ನು ಕಿಲಿಪಾಕ್​ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಲಾಕಪ್​ ಡೆತ್​ ಕಾರಣದಿಂದ ತಮಿಳುನಾಡು ಪೊಲೀಸರು ತೀವ್ರ ಟೀಕೆಗೆ ಗುರಿಯಾಗಿರುವ ಬೆನ್ನಲ್ಲೇ, ಮತ್ತೊಬ್ಬ ಪೊಲೀಸ್​ ದೌರ್ಜನ್ಯ ಎಸಗಿರುವುದು ಇಲಾಖೆಗೆ ಮತ್ತೊಮ್ಮೆ ಮುಜುಗರ ಉಂಟುಮಾಡಿದೆ. ಸದ್ಯ ಸ್ಯಾಮ್​ ಬೆನ್ಸನ್​ನನ್ನು ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.