ನ್ಯೂಸ್

ನಿಮ್ಮ ಫೋನ್​ನಲ್ಲಿ ಈ ಆ್ಯಪ್​ ಇದ್ದರೆ ಇಂದೇ ಡಿಲೀಟ್​ ಮಾಡಿ: ಇಲ್ಲದಿದ್ದರೆ ನಿಮಗೆ ಅಪಾಯ ಗ್ಯಾರಂಟಿ

ನವದೆಹಲಿ: ಇತ್ತೀಚೆಗೆ ಆನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿವೆ. ಅದರಲ್ಲೂ ಸುಲಭವಾಗಿ ಹಣ ಸಂಪಾದಿಸುವ ಚಟಕ್ಕೆ ಬಿದ್ದ ಕೆಲ ಕಿಡಿಗೇಡಿಗಳು ಆನ್​ಲೈನ್​ ಮೂಲಕ ಸುಲಿಗೆ, ವಂಚನೆ ಸೇರಿದಂತೆ ಅನೇಕ ಸೈಬರ್ ಅಪರಾಧಗಳನ್ನು ಎಸಗುತ್ತಿದ್ದಾರೆ. ಇದರಲ್ಲಿ ಹೆಚ್ಚಾಗಿ ಲೋನ್ ಆ್ಯಪ್​ಗಳ ಹೆಸರಿನಲ್ಲಿ ಸುಲಭವಾಗಿ ಹಾಗೂ ದೊಡ್ಡ ಮೊತ್ತದ ಸಾಲ ನೀಡುವುದಾಗಿ ಹೇಳಿ ಅಮಾಯಕರಿಂದ ಲಕ್ಷ ಲಕ್ಷ ರೂಪಾಯಿ ದೋಚುತ್ತಿದ್ದಾರೆ.

ಸಾಲ ನೀಡುವುದಲ್ಲದೆ, ಹೆಚ್ಚಿನ ಬಡ್ಡಿಗೆ ಒತ್ತಾಯಿಸಿ ಸಾಲ ಪಡೆದುಕೊಂಡವರಿಗೆ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ. ಆದರೆ, ಈ ಅಸುರಕ್ಷಿತ ಸಾಲದ ಆ್ಯಪ್ ಗಳಿಗೆ ಮೋಸ ಹೋಗಬೇಡಿ ಎಂದು ಕೇಂದ್ರ ಸರ್ಕಾರ ಹಲವು ಬಾರಿ ಎಚ್ಚರಿಕೆ ನೀಡಿರುವುದು ನಿಮಗೆಲ್ಲ ಗೊತ್ತೇ ಇದೆ. ಆದರೂ ಪ್ಲೇಸ್ಟೋರ್‌ನಲ್ಲಿ ನಕಲಿ ಅಪ್ಲಿಕೇಶನ್‌ಗಳು ಕಾಣಿಸಿಕೊಳ್ಳುತ್ತಲೇ ಇರುತ್ತದೆ. ಬಳಕೆದಾರರು ಈ ಬಗ್ಗೆ ತುಂಬಾ ಎಚ್ಚರವಹಿಸಿ, ಅಂತಹ ಆ್ಯಪ್​ಗಳನ್ನು ತಕ್ಷಣವೇ ತೆಗೆದುಹಾಕಬೇಕು ಎಂದು ಸರ್ಕಾರ ಇತ್ತೀಚೆಗೆ ಸೂಚಿಸಿದೆ.

ಸುಲಭವಾಗಿ ಸಾಲವನ್ನು ಕೊಡುವುದಾಗಿ ಹೇಳಿಕೊಳ್ಳುವ ಅನೇಕ ಅಪ್ಲಿಕೇಶನ್‌ಗಳು ಇನ್ನೂ ಪ್ಲೇಸ್ಟೋರ್‌ನಲ್ಲಿ ಲಭ್ಯವಿವೆ. ಇವುಗಳನ್ನು ನಂಬಿ ಜನರು ಮೋಸ ಹೋಗುತ್ತಿದ್ದಾರೆ ಎಂದು ಸರ್ಕಾರ ಹಲವು ಬಾರಿ ಎಚ್ಚರಿಕೆ ನೀಡಿರುವುದು ಗೊತ್ತಾಗಿದೆ. CashExpand-U ಅಂತಹ ಮೋಸದ ಅಪ್ಲಿಕೇಶನ್‌ಗಳಲ್ಲಿ ಒಂದಾಗಿದೆ. ಆನ್‌ಲೈನ್‌ನಲ್ಲಿ ಸಾಲವನ್ನು ಒದಗಿಸುವ ಈ ಅಪ್ಲಿಕೇಶನ್ ನಕಲಿ ಎಂದು ಸರ್ಕಾರ ಇತ್ತೀಚೆಗೆ ಸೂಚಿಸಿದೆ ಮತ್ತು ಬಳಕೆದಾರರು ಇದನ್ನು ತಕ್ಷಣ ಡಿಲೀಟ್​ ಮಾಡಬೇಕೆಂದು ಸೂಚನೆ ನೀಡಿದೆ.

ಕ್ಯಾಶ್ ಎಕ್ಸ್‌ಪಾಂಡ್-ಯು ಎಂಬ ಆನ್‌ಲೈನ್ ಸಾಲದ ಅಪ್ಲಿಕೇಶನ್ ನಕಲಿ ಮಾತ್ರವಲ್ಲ, ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿವೆ ಮತ್ತು ವಂಚನೆಗಳಿಂದ ತುಂಬಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಸಿದೆ. ಈ ಅಪ್ಲಿಕೇಶನ್‌ನ ಮೂಲವು ಬೇರೆ ದೇಶದ್ದಾಗಿರುವ ಕಾರಣ, ಇದರಿಂದ ಪ್ರಮುಖ ಮಾಹಿತಿ ದುರುಪಯೋಗವಾಗುವ ಸಾಧ್ಯತೆ ಇದೆ ಎಂದು ಸರ್ಕಾರ ಎಚ್ಚರಿಸಿದ್ದು, ಕೂಡಲೇ ಡಿಲೀಟ್ ಮಾಡಲು ಸೂಚನೆ ನೀಡಿದೆ. (ಏಜೆನ್ಸೀಸ್​)