ನ್ಯೂಸ್

BBKS11: ಯಾವುದೋ ಸ್ವಿಚ್‍‍ಗೆ ಇನ್ಯಾವ್ದೋ ಬಲ್ಬ್ ಆನ್? ಲಾಯರ್​ ಜಗದೀಶ್​ಗೆ ಖಡಕ್ ತಿರುಗೇಟು

ಮೋಹನ್​ ಶೆಟ್ಟಿ

ಬೆಂಗಳೂರು: ಕನ್ನಡ ಬಿಗ್​ ಬಾಸ್​ ಸೀಸನ್​ 11ರ (BBKS11) ಅದ್ಧೂರಿ ಮನೆಯೊಳಗೆ ಪ್ರವೇಶಿಸಿರುವ 17 ಘಟಾನುಘಟಿ ಸ್ಪರ್ಧಿಗಳ ಮಧ್ಯೆ ಟಾಸ್ಕ್​ ಜಟಾಪಟಿಗಿಂತಲೂ ಮಾತಿನ ಸಮರವೇ ಜೋರಾಗಿ ಸದ್ದು ಮಾಡುತ್ತಿದೆ. ನರಕ ಮತ್ತು ಸ್ವರ್ಗ ಎಂಬ ಎರಡು ಗುಂಪಾಗಿ ಒಂದೇ ಸೂರಿನಡಿ ಬದುಕುತ್ತಿರುವ 17 ಸ್ಪರ್ಧಿಗಳ ಮಧ್ಯೆ ಮೊದಲ ದಿನದಿಂದಲೂ ತನ್ನ ಮಾತಿನ ದಾಟಿಯಿಂದಲೇ ಎದುರಾಳಿಗಳನ್ನು ಕುಗ್ಗಿಸುವ ಪ್ರಯತ್ನದಲ್ಲಿ ತೊಡಗಿರುವ ಲಾಯರ್ ಜಗದೀಶ್, ಇದೀಗ ಮೊದಲ ವಾರದ ನಂತರವು ಈ ಟಾರ್ಗೆಟ್​ ಪ್ರವೃತ್ತಿಯನ್ನು ಮುಂದುವರೆಸಿದ್ದಾರೆ.

ಬಿಗ್​ಬಾಸ್​ ಸೀಸನ್​ 11ರ ಮೊದಲ ಕ್ಯಾಪ್ಟನ್ ಎಂಬ ಪಟ್ಟ ಪಡೆದಿರುವ ಹಂಸಾ, ತಮ್ಮ ನಾಯಕತ್ವವನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಕೆಲವು ನಿಯಮಗಳನ್ನು ಮುರಿದು, ಬಿಗ್​ಬಾಸ್​ ಕಣ್ಣಿಗೆ ಗುರಿಯಾಗಿರುವ ಹಂಸಾ, ಲಾಯರ್​ ಜಗದೀಶ್​ ಆರೋಪಗಳ ಸರಮಾಲೆಗೆ ಕುಗ್ಗಿ ಹೋಗಿದ್ದಾರೆ. ಪ್ರತ್ಯೇಕವಾಗಿ ಕ್ಯಾಪ್ಟನ್ ಹಂಸಾರನ್ನು ಟಾರ್ಗೆಟ್ ಮಾಡಿಕೊಂಡು ಮಾತಿನ ದಾಳಿ ನಡೆಸುತ್ತಿರುವ ಜಗದೀಶ್​, ನರಕನಿವಾಸಿಗಳಿಗೆ ಇಷ್ಟದ ತಿಂಡಿ-ಊಟ ಮಾಡಿಕೊಡಬೇಕು, ಇಷ್ಟೇ ಸಮಯಕ್ಕೆ ಕೊಡಬೇಕು ಎಂದೆಲ್ಲಾ ಬೇಡಿಕೆ ಹಾಗೂ ಒತ್ತಡ ಹೇರುತ್ತಿರುವುದು ಸದ್ಯ ಮನೆಯವರಿಗೆ ಕಿರಿಕಿರಿ ಉಂಟು ಮಾಡಿದೆ.

ಇಂದು ಕೂಡ ತಮಗೆ ಊಟ ಕೊಡಬೇಕು, ಪನ್ನಿರ್​ ಬಟರ್​ ಮಸಾಲ ಮತ್ತು ರೊಟ್ಟಿ ಬೇಕು ಎಂದು ಕ್ಯಾಪ್ಟನ್ ಹಂಸಾಗೆ ಜಗದೀಶ್​ ಡಿಮ್ಯಾಂಡ್​ ಇಟ್ಟಿದ್ದಾರೆ. ಇದನ್ನು ಖಂಡಿಸಿದ ಭವ್ಯ ಗೌಡ, ಊಟ ಮಾಡುವಾಗ ಹೀಗೆ ಕಿರಿಕಿರಿ ಮಾಡಬೇಡಿ. ನೆಮ್ಮದಿಯಿಂದ ಊಟ ತಿನ್ನಲು ಬಿಡಿ ಎಂದು ಕಿಡಿಕಾರಿದರು. ಈ ವೇಳೆ ವಾಗ್ದಾಳಿ ನಡೆಸಿದ ಲಾಯರ್ ಜಗದೀಶ್​ಗೆ ಖಡಕ್​ ಟಾಂಗ್​ ಕೊಡಲು ಭವ್ಯ ಸಿಡಿದೇಳುವ ಪ್ರೋಮೋ ಇದೀಗ ಹೊರಬಿದ್ದಿದೆ. ಅಸಲಿಗೆ ಇವರಿಬ್ಬರ ಜಗಳ ಯಾವ ಹಂತ ತಲುಪಿತು? ಇಬ್ಬರ ವಾಗ್ವಾದ ತಾರಕಕ್ಕೇರಿತಾ? ಎಂಬುದನ್ನು ಇಂದಿನ ಸಂಚಿಕೆಯಲ್ಲಿ ತಿಳಿಯಬೇಕಿದೆ.