ನ್ಯೂಸ್

BBKS10: 'ನನಗೆ ಇವರೇ ಗೆಲ್ಲಬೇಕು'; ಅಸ್ತಿಕ್ ಅವಿನಾಶ್‌ ಪ್ರಕಾರ 10ನೇ ಸೀಸನ್​ ವಿನ್ನರ್ ಯಾರು?

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 12ನೇ ವಾರಕ್ಕೆ ಹೆಜ್ಜೆಯಿಟ್ಟಿದ್ದು, 11ನೇ ವಾರದ ಶಾಕಿಂಗ್ ಎಲಿಮಿನೇಷನ್​ನಲ್ಲಿ ಮನೆಯೊಳಗೆ ಮಾವುತ ಎಂದೇ ಗುರುತಿಸಿಕೊಂಡಿದ್ದ ಅಸ್ತಿಕ್ ಅವಿನಾಶ್ ಶೆಟ್ಟಿ ಬಿಗ್ ಮನೆಯಿಂದ ಹೊರಬಂದರು. ಬಿಗ್ ಮನೆಯಿಂದ ಔಟ್ ಆದ ಅವಿನಾಶ್​, ತಮ್ಮ ಬಿಗ್​ಬಾಸ್​ ಪಯಣ, ಒಳಗಿನ ಅನುಭವಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಆನೆಯನ್ನ ಪಳಗಿಸೋಕೆ ಒಬ್ಬ ಮಾವುತ ಬೇಕು ಅಂತ ಆಡ್ ನೋಡ್ದೆ. ಹಾಗಾಗಿ ಬಂದೆ...ಇದು ಅಸ್ತಿಕ್ ಅವಿನಾಶ್‌ ಶೆಟ್ಟಿ ವೈಲ್ಡ್‌ ಕಾರ್ಡ್‌ ಮೂಲಕ ಈ ಸಲದ ಬಿಗ್‌ಬಾಸ್‌ ಮನೆಯೊಳಗೆ ಹೋದಾಗ ಆಡಿದ ಮಾತು. ಅವರ ಸ್ಟೈಲ್‌, ಕಾನ್ಫಿಡೆನ್ಸ್‌, ಮಾತು ಎಲ್ಲವೂ ಅವರು ಮನೆಯೊಳಗೆ ಮಿಂಚಲಿದ್ದಾರೆ ಎಂಬುದನ್ನು ದೃಢೀಕರಿಸುವ ಹಾಗೆಯೆ ಇತ್ತು. ಆದರೆ ಅವಿನಾಶ್ ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೆ ಮುಟ್ಟಲು ಸಾಧ್ಯಾಗಲಿಲ್ಲ.

ಮೈಕಲ್‌ ಮತ್ತು ಅವಿನಾಶ್‌ ಭಾನುವಾರದ ಸಂಚಿಕೆಯ ಕಡೆಯಲ್ಲಿ ಕಾರಿನಲ್ಲಿ ಕೂತು ಮನೆಯಿಂದ ಹೊರಗೆ ಹೋದಾಗ, ಈ ವಾರ ಡಬಲ್‌ ಎಲಿಮಿನೇಷನ್‌ ಆಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದ್ರೆ, ಈ ನಿರೀಕ್ಷೆ ಸುಳ್ಳಾಗಿ ಬಿಗ್‌ಬಾಸ್‌ ಸೋಮವಾರದ ಸಂಚಿಕೆಯಲ್ಲಿ ಹೊಸದೊಂದು ಟ್ವಿಸ್ಟ್ ನೀಡಿದರು. ಮೈಕಲ್ ಮತ್ತೆ ಮನೆಯೊಳಗೆ ಎಂಟ್ರಿ ಕೊಟ್ಟಿದ್ದಾರೆ. ಅವಿನಾಶ್ ಒಬ್ಬರೇ ಎಲಿಮಿನೇಟ್ ಆಗಿ, ಹೊರ ಬಂದಿದ್ದಾರೆ.

"ವೈಲ್ಡ್ ಕಾರ್ಡ್‌ ಕಂಟೆಸ್ಟೆಂಟ್ ಅಂದ ಕೂಡಲೇ ನಿರೀಕ್ಷೆ ಹೆಚ್ಚೇ ಇರುತ್ತದೆ. ಆ ನಿರೀಕ್ಷೆಯನ್ನು ಪೂರೈಸುವ ಹಾದಿಯಲ್ಲಿಯೇ ನಾನು ಇದ್ದೆ. ಒಂದು ವಾರ ಗ್ರೇಸ್ ಟೈಮ್ ಕೂಡ ಇತ್ತು. ನಾನು ಹೋದ ಮೊದಲ ವಾರ ಎಲಿಮಿನೇಷನ್ ಇರಲಿಲ್ಲ. ಆದರೆ ಅದನ್ನು ನಾನು ಸದುಪಯೋಗಪಡಿಸಿಕೊಳ್ಳುವಲ್ಲಿ ಎಡವಿದೆ ಅನಿಸುತ್ತದೆ. ಆದರೆ ಗೇಮ್‌ನಲ್ಲಿ ನನ್ನತನವನ್ನು ಬಿಟ್ಟುಕೊಡಲಿಲ್ಲ" ಎಂದಿದ್ದಾರೆ ಅವಿನಾಶ್​.

"ನಾನು ಒಳಗೆ ಹೋದಾಗ ವಿನಯ್, ತನಿಷಾ, ಕಾರ್ತಿಕ್‌ ಎಲ್ಲರ ಬಗ್ಗೆಯೂ ಕೆಲವು ಪೂರ್ವನಿರ್ಧರಿತ ಅಭಿಪ್ರಾಯಗಳಿದ್ದವು. ಎಲ್ಲರಿಗಿಂತ ಕಡಿಮೆ ಪರಿಚಯ ಇದ್ದಿದ್ದು ವರ್ತೂರ್ ಸಂತೋಷ್ ಮತ್ತು ತುಕಾಲಿ ಅವರ ವ್ಯಕ್ತಿತ್ವ. 50 ದಿನಗಳ ನಂತರ ಮನೆಗೆ ಹೋದಾಗ ಬೇರೆ ರೀತಿಯೇ ಸ್ಪಂದನ ಸಿಕ್ತಾ ಬಂತು. ಯಾರಿವನು? ಯಾಕೆ ಬಂದಿದ್ದಾನೆ? ಅನ್ನುವ ರೀತಿಯಲ್ಲಿಯೇ ನೋಡಿದರು. ನಾನಾಗೆ ಹೋಗಿ ಮಾತಾಡಲು ಯತ್ನಿಸಿದರೂ ರೆಸ್ಪಾನ್ಸ್ ಚೆನ್ನಾಗಿರಲಿಲ್ಲ. ಆದ್ರೆ, ವರ್ತೂರು ಸಂತೋಷ್ ಮತ್ತು ತುಕಾಲಿ ತುಂಬಾನೇ ಸ್ನೇಹದಿಂದ ನೋಡಿಕೊಂಡರು. ನಮ್ಮ ಅಭಿಪ್ರಾಯಗಳು ಮ್ಯಾಚ್ ಆಗುತ್ತಿದ್ದವು" ಎಂದರು.

"ನನಗೆ ವರ್ತೂರ್ ಸಂತೋಷ್ ತುಂಬ ಜೆನ್ಯೂನ್‌ ಮನುಷ್ಯ ಅನಿಸ್ತಾರೆ. ವಿನಯ್ ಸ್ವಲ್ಪ ಫೇಕ್ ಮಾಡ್ತಿದ್ದಾರೆ ಅನಿಸುತ್ತಿದೆ. ತನಿಷಾ ಕೂಡ ಸ್ವಲ್ಪ ಫೇಕ್ ಮಾಡುತ್ತಿದ್ದಾರೆ. ವರ್ತೂರ್ ಸಂತೋಷ್ ಖಂಡಿತ ಅಂತಿಮ ಹಂತಕ್ಕೆ ಹೋಗುತ್ತಾರೆ. ಅವರ ಜತೆಗೆ ಪ್ರತಾಪ್ ಕೂಡ ಬರಬಹುದು. ಪ್ರತಾಪ್‌ಗೆ ಅಲ್ಲಿನ ಸಂದರ್ಭವನ್ನು ಬಳಸಿಕೊಳ್ಳುವುದು ಹೇಗೆ ಎಂಬುದು ತುಂಬ ಚೆನ್ನಾಗಿ ಗೊತ್ತಿದೆ. ನನಗೆ ವೈಯಕ್ತಿಕವಾಗಿ ವರ್ತೂರ್ ಸಂತೋಷ್ ಗೆಲ್ಲಬೇಕು ಎಂಬ ಆಸೆಯಿದೆ" ಎಂದರು.