ನ್ಯೂಸ್

BBKS10: ನಾಮಿನೇಷನ್​ ಪಟ್ಟಿಯಲ್ಲಿ ಐವರು! ಯಾರ ಆಟಕ್ಕೆ ಬೀಳಲಿದೆ ಬ್ರೇಕ್?

ಮೋಹನ್​ ಶೆಟ್ಟಿ

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 13ನೇ ವಾರಾಂತ್ಯಕ್ಕೆ ತಲುಪಿದ್ದು, ವಾರದ ಕಥೆ ಕಿಚ್ಚ ಜತೆ ಸಂಚಿಕೆಯಲ್ಲಿ ಸುದೀಪ್ ಅವರ ಆಗಮನಕ್ಕಾಗಿ ಎದುರುನೋಡುತ್ತಿದ್ದಾರೆ. ಸತತ ಪ್ರಯತ್ನಗಳು, ಟಾಸ್ಕ್​ನಲ್ಲಿ ಬಿರುಸಿನ ಹಣಾಹಣಿ ನಡೆಸುವ ಮೂಲಕ ಫಿನಾಲೆ ಹಂತಕ್ಕೆ ಸಮೀಪದಲ್ಲಿರುವ ಎಂಟು ಸ್ಪರ್ಧಿಗಳ ಪೈಕಿ ಈ ವಾರ ಮನೆಯಿಂದ ಎಲಿಮಿನೇಟ್​ ಆಗಿ ಹೊರಹೋಗಲು ಐವರು ನಾಮಿನೇಷನ್​ ಪಟ್ಟಿಯಲ್ಲಿದ್ದಾರೆ.

ಈ ವಾರದ ಆರಂಭದಲ್ಲೇ ಮನೆಮಂದಿಗೆ ಶಾಕ್ ಕೊಟ್ಟ ಬಿಗ್ ಬಾಸ್​, ಸೀಸನ್​ 10ರ ವಿಜೇತರಿಗೆ ಸಿಗುವ 50 ಲಕ್ಷ ರೂ. ಹಣದಲ್ಲಿ ಕಡಿತಗೊಂಡಿದ್ದು, ಅದನ್ನು ನೀವೆಲ್ಲರೂ ತಂಡವಾಗಿ ಟಾಸ್ಕ್ ಆಡುವ ಮೂಲಕ ಸಂಪಾದಿಸಬೇಕು ಎಂದಿದ್ದರು. ಅದರಂತೆಯೇ ಪ್ರತಿ ಚಟುವಟಿಕೆಯಲ್ಲೂ ತಮ್ಮ ತಮ್ಮ ಆಯ್ಕೆಯ ಅನುಸಾರ ತಂಡವಾಗಿ ಆಡಿದ ಸ್ಪರ್ಧಿಗಳು 40 ಲಕ್ಷ ರೂ. ಗಳಿಸುವಲ್ಲಿ ಮಾತ್ರ ಯಶಸ್ವಿಯಾದರು.

ಇದೀಗ ಫಿನಾಲೆಗೆ ಎರಡೇ ವಾರಗಳಷ್ಟೇ ಬಾಕಿ ಉಳಿದಿದ್ದು, ಈ ಹಂತದಲ್ಲಿ ಎಲಿಮಿನೇಟ್​ ಆಗಿ ಮನೆಯಿಂದ ಹೊರಹೋಗುವುದು ಕಷ್ಟಕರ ಎಂಬುದು ಸದ್ಯ ಸ್ಪರ್ಧಿಗಳ ಮನದಲ್ಲಿ ಓಡುತ್ತಿರುವ ಮಾತಾಗಿದೆ. ನಾಮಿನೇಷನ್​ ಪಟ್ಟಿಯಲ್ಲಿ ವರ್ತೂರು ಸಂತೋಷ್, ತುಕಾಲಿ ಸಂತೋಷ್, ಕಾರ್ತಿಕ್, ಮೈಕಲ್ ಮತ್ತು ಪ್ರತಾಪ್ ಇದ್ದಾರೆ. ಈ ಐವರಲ್ಲಿ ಇಂದು ಯಾರು ಮನೆಯಿಂದ ಹೊರನಡೆಯಲಿದ್ದಾರೆ ಎಂಬುದನ್ನು ಇಂದಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.