ಬೆಂಗಳೂರು: ಬಿಗ್‌ಬಾಸ್ ಕನ್ನಡ ಹತ್ತನೇ ಸೀಸನ್ ಫೈನಲ್ ಹಂತಕ್ಕೆ ಇನ್ನು ಎರಡೇ ಹೆಜ್ಜೆ ಬಾಕಿ ಉಳಿದಿದ್ದು, ಈ ವೇಳೆ ಮನೆಯೊಳಗೆ ಭಾರೀ ಪೈಪೋಟಿ ಶುರುವಾಗಿದೆ. ನಿನ್ನೆ ನಡೆದ ವಾಗ್ವಾದದ ಮಧ್ಯೆ ಇಂದು ಬಿಗ್ ಬಾಸ್ ಕೊಟ್ಟ ಮತ್ತೊಂದು ಚಟುವಟಿಕೆ ಅದನ್ನು ಮತ್ತಷ್ಟು ತೀವ್ರಗೊಳಿಸಿದೆ ಎಂಬುದಕ್ಕೆ ಇಂದಿನ ಟಾಸ್ಕ್ ಸಾಕ್ಷಿಯಾಗಿದೆ.
ಎಲ್ಲ ಸದಸ್ಯರ ಎದೆಯ ಮೇಲೆ ಹೃದಯಾಕಾರದ ಬೋರ್ಡ್ ಅನ್ನು ನೇತುಹಾಕಲಾಗಿದ್ದು, ಸಂಗೀತಾ ಹೊರತುಪಡಿಸಿ ಎಲ್ಲ ಸ್ಪರ್ಧಿಗಳೂ ತಾವು ನಾಮಿನೇಷನ್ ಮಾಡಲು ಇಚ್ಛಿಸುವ ಇಬ್ಬರು ಸ್ಪರ್ಧಿಗಳ ಹೆಸರು ಹೇಳಿ ಅವರ ಕತ್ತಿನಲ್ಲಿ ತೂಗು ಹಾಕಲಾಗಿರುವ ಹೃದಯದ ಬೋರ್ಡ್‌ಗೆ ಚೂರಿ ಹಾಕಬೇಕು ಎಂದು ತಿಳಿಸಲಾಗಿತ್ತು.
ಈ ಚಟುವಟಿಕೆಯಲ್ಲಿ ಕಾರ್ತಿಕ್, ವರ್ತೂರು ಸಂತೋಷ್ ಮತ್ತು ತನಿಷಾ ಅವರ ಹೆಸರನ್ನು ಸೂಚಿಸಿ ಚೂರಿ ಹಾಕಿದ್ದಾರೆ. ತನಿಷಾ, ನಮ್ರತಾ ಅವರ ಹೆಸರು ಹೇಳಿದ್ದಾರೆ. ವಿನಯ್ ಮತ್ತು ಪ್ರತಾಪ್ ಫೈಟ್‌ನ ಪರಿಣಾಮ ಈ ಚಟುವಟಿಕೆಯಲ್ಲಿಯೂ ಎಂದಿನಂತೆ ಮುಂದುವರೆದಿದೆ. ಅವರಿಬ್ಬರು ಪರಸ್ಪರ ಜಿದ್ದಿನಿಂದಲೇ ಚೂರಿ ಹಾಕಿದ್ದಾರೆ.
ಒಟ್ಟಾರೆ ಈ ವಾರ ಯಾರೆಲ್ಲಾ ನಾಮಿನೇಟ್ ಆಗಲಿದ್ದು, ಅವರಲ್ಲಿ ಯಾರು ಸೇಫ್? ಯಾರು ಔಟ್ ಎಂಬುದನ್ನು ತಿಳಿಯಲು ಈ ವಾರಾಂತ್ಯದ ಪಂಚಾಯತಿ ಕಟ್ಟೆಗಾಗಿ ಕಾಯಬೇಕಿದೆ. ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.