ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿ ಹೀಗೊಂದು ಫ್ಲವರ್ ವರ್ಸಸ್ ಫೈಯರ್ ಟೆಸ್ಟ್ ನಡೆದಿದೆ. ಇದರ ಪರಿಣಾಮವಾಗಿ ಕೆಲವು ದಿನಗಳಿಂದ ಕೊಂಚ ಮಟ್ಟಿಗೆ ಜಗಳಗಳಿಂದ ದೂರವಿದ್ದ ವಿನಯ್ ಮತ್ತು ಸಂಗೀತಾ ಮಧ್ಯೆ ಇದೀಗ ಅದೇ ಮತ್ತೆ ಹಳೆಯ ಕಿಡಿ ಹೊತ್ತಿಕೊಂಡಿದೆ. ಇದಕ್ಕೆ ಅಸಲಿ ಕಾರಣವೇನು? ಯಾಕಾಗಿ ವಿನಯ್ ಈ ರೀತಿ ಟಾಂಗ್ ಕೊಟ್ಟರು? ಇಲ್ಲಿದೆ ಇಬ್ಬರ ನಡುವಿನ ಆ ಸಂಭಾಷಣೆ.
ಮನೆಯ ಸ್ಪರ್ಧಿಗಳಿಗೆ ಬಿಗ್‌ಬಾಸ್ ಒಂದು ಚಟುವಟಿಕೆ ನೀಡಿದ್ದಾರೆ. ಒಂದಷ್ಟು ಬಿಳಿ ಮತ್ತೊಂದಿಷ್ಟು ಕಪ್ಪು ಹೂಗಳನ್ನು ಇಡಲಾಗಿದೆ. ಒಬ್ಬೊಬ್ಬ ಸದಸ್ಯನೂ, ಮನೆಯೊಳಗೆ ತಮ್ಮ ದೃಷ್ಟಿಯಲ್ಲಿ ಅತ್ಯಂತ ಧನಾತ್ಮಕ ವ್ಯಕ್ತಿ ಯಾರು ಎಂದು ಆರಿಸಿ ಅವರಿಗೆ ಬಿಳಿ ಹೂವು ನೀಡಬೇಕು. ಹಾಗೆಯೇ ಯಾರು ಅತ್ಯಂತ ಋಣಾತ್ಮಕ ವ್ಯಕ್ತಿ ಎಂಬುದನ್ನೂ ಆರಿಸಿ ಅವರಿಗೆ ಕಪ್ಪು ಹೂವು ನೀಡಬೇಕು.
ಈ ಟಾಸ್ಕ್‌ನಲ್ಲಿ ಬಿಳಿಯ ಹೂಗಳನ್ನು ಪಡೆದುಕೊಂಡವರ ಮುಖದಲ್ಲಿ ಹೂವಿನಂಥದ್ದೇ ನಗು ಅರಳಿದರೆ, ಕಪ್ಪು ಹೂವು ಪಡೆದವರ ಕಣ್ಣುಗಳಲ್ಲಿ ಅಸಮಧಾನದ ಹೊಗೆ ಎದ್ದಿದೆ. ಅದರಲ್ಲಿಯೂ ವಿಶೇಷವಾಗಿ ಸಂಗೀತಾ, ವಿನಯ್ ಅವರಿಗೆ ಕಪ್ಪು ಹೂವು ಕೊಟ್ಟು, ‘ಮೊದಲಿಂದಾನೂ ನೆಗೆಟಿವಿಟಿಯ ರೂಟೇ ನೀವು’ ಎಂದು ಆರೋಪಿಸಿದ್ದಾರೆ. ಅದಕ್ಕೆ ಠಕ್ಕರ್ ನೀಡಿದ ವಿನಯ್, ‘ನಾನು ನೆಗೆಟಿವಿಟಿಗೆ ಬೇರು. ಆದರೆ ಬೇರು ಬಿಡಬೇಕು ಅಂದ್ರೆ ಅದಕ್ಕೊಂದು ಬೀಜ ನೆಡಬೇಕಲ್ವಾ? ಆ ಬೀಜವೇ ಸಂಗೀತಾ. ಇಲ್ಲದಿರೋ ಕಾರಣಕ್ಕೆ ಅವರು ಮೂಗು ತೂರಿಸಿ ಅದನ್ನೊಂದು ಮೊಮೆಂಟ್ ಮಾಡಿದವರು ಅವರು’ ಎಂದು ಹೇಳಿದರು.
ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ಸಂಗೀತಾ, ‘ಈವತ್ತಿಗೂ ನಾನು ಆ ಹೇಳಿಕೆಗೆ ಬದ್ಧಳಾಗಿದ್ದೀನಿ ಎಂದು ಹೇಳಿದರು. ಸದ್ಯ ಈ ವಿಷಯವಾಗಿ ಇಬ್ಬರ ನಡುವೆ ಮಾತಿನ ಸಮರವೇ ನಡೆದಿದೆ. ಇದು ಮನೆಯೊಳಗೆ ಎಷ್ಟರಮಟ್ಟಿಗೆ ಬೆಂಕಿ ಹೊತ್ತಿಸುತ್ತದೆ? ಏನು ಪರಿಣಾಮ ಉಂಟುಮಾಡುತ್ತದೆ ಎಂಬುದನ್ನು ಸದ್ಯ ಕಾದು ನೋಡಬೇಕು.
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.