ನ್ಯೂಸ್

BBKS10: ನನ್ನ ಲೈಫ್​ನಲ್ಲಿ ಗೇಮ್​ ಚೇಂಜರ್​ ಆಗಿ ಕೆಲಸ ಮಾಡಿದ್ರು ಸುದೀಪ್​ ಸರ್​: ಡ್ರೋನ್​ ಪ್ರತಾಪ್​

ಬೆಂಗಳೂರು: ಬಿಗ್​ ಬಾಸ್​ ಕನ್ನಡ ಸೀಸನ್​ 10 ಶುರುವಾದ ಮೊದಲ ದಿನದಿಂದಲೂ ಹಲವು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸದ್ಯ ಜಗಳ, ಮನಸ್ತಾಪಗಳಿಂದ ಕೊಂಚ ದೂರ ಉಳಿದಿರುವ ಸ್ಪರ್ಧಿಗಳು ಟಾಸ್ಕ್​ ಸೇರಿದಂತೆ ಮನೆಯ ಸದಸ್ಯರೊಡನೆ ಮಾತು, ಹರಟೆಯಲ್ಲಿ ಭಾಗಿಯಾಗಿದ್ದಾರೆ. ಇದರ ಬೆನ್ನಲ್ಲೇ ಬೃಂದಾವನ ತಂಡದೊಂದಿಗೆ ಮೋಜು-ಮಸ್ತಿ ಮಾಡಿದ ಸ್ಪರ್ಧಿಗಳು ಹಾಡು, ಡ್ಯಾನ್ಸ್​, ಕಾಮಿಡಿ, ಮಿಮಿಕ್ರಿ ಮಾಡಿ ಭರಪೂರ ಮನರಂಜನೆಗೆ ಕಾರಣರಾದರು.

ಶುಕ್ರವಾರ ಬಿಗ್ ಬಾಸ್​ ಮನೆಗೆ 36 ಕಲಾವಿದರುನ್ನು ಒಳಗೊಂಡ ಬೃಂದಾವನ ತಂಡ ಎಂಟ್ರಿ ಕೊಟ್ಟಿತು. ಅತಿಥಿಯಾಗಿ ಬಂದ ಕಲಾವಿದರ ದಂಡನ್ನು ಸ್ವಾಗತಿಸಿದ ಸದಸ್ಯರು, ಅವರ ಮನರಂಜನೆಗಾಗಿ ಕಾರ್ತಿಕ್​ ಮೆಲೋಡಿ ಹಾಡನ್ನು ಹಾಡಿದರು. ಹುಡುಗರ ತಂಡದಿಂದ ಒಂದು ನೃತ್ಯ ಜತೆಗೆ ಹುಡುಗಿಯರ ತಂಡದಿಂದ ಒಂದು ನೃತ್ಯ ಏರ್ಪಡಿಸಲಾಗಿತ್ತು. ಸಾಂಗ್​-ಡ್ಯಾನ್ಸ್​ ಮಧ್ಯೆ ತುಕಾಲಿ ಸಂತೋಷ್​ ಮಾಡಿದ ಮಿಮಿಕ್ರಿಗೆ ಬೃಂದಾವನ ಟೀಂ ಹೊಟ್ಟೆ ಹುಣ್ಣಾಗುವಂತೆ ನಕ್ಕರು.

ಗೌರೀಶ್​ ಅಕ್ಕಿ ಅವರ ನ್ಯೂಸ್​ ವರದಿ ನಂತರ ಬಂದದ್ದೇ ಮಾಡಿದ್ದು ಅಸಲಿ ಜಾದು. ಮನೆಯಲ್ಲಿ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಡ್ರೋನ್​ ಪ್ರತಾಪ್​ ಮೊದಲ ವಾರದ ಕಥೆಯಲ್ಲಿ ಕಿಚ್ಚ ಸುದೀಪ್​ ಅವರ ಎದುರು 'ಎದೆಯಲ್ಲಿ ಗಿಟ್ಟಾರು'... ಹಾಡಿಗೆ ಕುಣಿದು ಕುಪ್ಪಳಿಸಿದ್ದರು. ಅದೇ ಹಾಡಿಗೆ ಮನೆಗೆ ಬಂದ ಅತಿಥಿಗಳ ಕೋರಿಕೆ ಮೇರೆಗೆ ಮನಬಿಚ್ಚಿ ನೃತ್ಯ ಮಾಡಿದರು.

ಪ್ರತಾಪ್​ ಅವರ ಡ್ಯಾನ್ಸ್​ ಪ್ರತಾಪಕ್ಕೆ ಫಿದಾ ಆದ ಅತಿಥಿಗಳು ಮತ್ತು ಸ್ಪರ್ಧಿಗಳು ಶಿಳ್ಳೆ, ಚಪ್ಪಾಳೆ ಹೊಡೆದು ಪ್ರೋತ್ಸಾಹಿಸಿದರು. ಈ ವೇಳೆ ಬಹಿರಂಗವಾಗಿ ಮಾತನಾಡಿದ ಪ್ರತಾಪ್​, "ನಾನು ಬಿಗ್​ ಬಾಸ್​ಗೆ ಬರಬೇಕೋ ಬೇಡವೋ ಎಂಬ ಯೋಚನೆಯಲ್ಲೇ ಇದ್ದೆ. ತದನಂತರ ಮನೆಗೆ ಬಂದ ಮೊದಲ ವಾರ ಹೇಗಿರುತ್ತೆ, ಏನು ಕಥೆ ಎಂದು ಅಂದುಕೊಳ್ಳುತ್ತಿದ್ದೆ. ಆದ್ರೆ, ಮೊದಲ ವಾರ ಸುದೀಪ್​ ಸರ್​ ಬಂದು ಆ ಗೊಂದಲಗಳನ್ನು ನನ್ನಿಂದ ದೂರ ಮಾಡಿದರು. ಒಂದು ಗೇಮ್​ ಚೇಂಜರ್​ ಆಗಿ ನನ್ನ ಲೈಫ್​ನಲ್ಲಿ ಕೆಲಸ ಮಾಡಿದ್ರು" ಎಂದು ಪ್ರತಾಪ್ ಹೇಳಿದರು.