ನ್ಯೂಸ್

BBKS10: ವಿಶೇಷ ಅಧಿಕಾರಕ್ಕೆ ನಮ್ರತಾ ಹೆಸರೇಳಿದ ಸ್ನೇಹಿತ್​; ಕೊಟ್ಟ ಕಾರಣ 'ನನಗೆ ಅವರು ತುಂಬ ಇಷ್ಟ'!

ಬೆಂಗಳೂರು: ಬಿಗ್ ಬಾಸ್​ ಸೀಸನ್​ 10 ಇದೀಗ 11ನೇ ವಾರಕ್ಕೆ ಕಾಲಿಟ್ಟಿದ್ದು, ಸೂಪರ್ ಸಂಡೆ ವಿತ್ ಸುದೀಪ ಸಂಚಿಕೆಯಲ್ಲಿ ಬಿಗ್ ಮನೆಯಲ್ಲಿ ಎರಡು ಬಾರಿ ಕ್ಯಾಪ್ಟನ್ ಆಗಿದ್ದ ಸ್ನೇಹಿತ್​ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ. ವೈಲ್ಡ್​ ಕಾರ್ಡ್​ ಎಂಟ್ರಿಯಲ್ಲಿ ಬಂದ ಅವಿನಾಶ್ ಜತೆಗೆ ಅಂತಿಮ ಹಣಾಹಣಿಯಲ್ಲಿ ಸೇವ್​ ಆಗಲು ಪೈಪೋಟಿ ನಡೆಸಿದ ಸ್ನೇಹಿತ್​, ಕಡೆಯಲ್ಲಿ ಉಳಿದುಕೊಳ್ಳಲು ವಿಫಲಗೊಂಡು, ಮನೆಯಿಂದ ಹೊರ ನಡೆದಿದ್ದಾರೆ.

ಬಿಗ್ ಬಾಸ್​ ಮನೆಯ 9ನೇ ವಾರದಲ್ಲಿ ಎಲಿಮಿನೇಟ್​ ಆದ ಸ್ನೇಹಿತ್, ಮೊದಲ ವಾರವೇ ಕ್ಯಾಪ್ಟನ್ ಆಗಿ ಇತರೆ ಸ್ಪರ್ಧಿಗಳೊಡನೆ ಮಿಂಚಿದರು. ತದನಂತರದಲ್ಲಿ ಹಲವಾರು ಟಾಸ್ಕ್​ಗಳನ್ನು ಉತ್ತಮವಾಗಿ ಮಾಡಿದ ಸ್ನೇಹಿತ್​, ಒಂದಷ್ಟು ಜಗಳ, ವೈಮನಸ್ಸಿನ ಮಧ್ಯೆ ಸತತ 9 ವಾರಗಳ ಕಾಲ ಯಶಸ್ವಿಯಾಗಿ ಸಾಗಿದರು. ತಮ್ಮ ಸ್ನೇಹ ಬಳಗದಲ್ಲಿರುವ ವಿನಯ್, ಮೈಕಲ್, ನಮ್ರತಾ ಅವರೊಂದಿಗೆ ಹೆಚ್ಚು ಸಮಯ ಕಳೆದು, ಇಂದು ಹೊರಬಂದಿದ್ದಾರೆ.

ಎರಡು ವಾರ ಕ್ಯಾಪ್ಟನ್ ಪಟ್ಟ ಪಡೆದ ಸ್ನೇಹಿತ್​, ಮನೆಯಲ್ಲಿ ಹೆಚ್ಚಿನ ಅವಧಿ ನಮ್ರತಾ ಅವರೊಟ್ಟಿಗೆ ಕಳೆದಿದ್ದು, ನನಗೆ ಒಬ್ಬ ಒಳ್ಳೆ ಸ್ನೇಹಿತೆ ಸಿಕ್ಕಿದ್ದಾರೆ ಎಂದು ಈ ಹಿಂದೆ ಅನೇಕ ಬಾರಿ ಹೇಳಿದ್ದಾರೆ. ನಮ್ರತಾ ಜತೆಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದ ಸ್ನೇಹಿತ್, ನನಗೆ ನಮ್ರತಾ ಅಂದ್ರೆ ತುಂಬ ಇಷ್ಟ ಎಂದು ಹೇಳುತ್ತಿದ್ದರು. ಮನೆಯಿಂದ ಹೊರಬರುವ ಮುನ್ನ ಬಿಗ್​ಬಾಸ್​ ಮುಂದಿನ ವಾರ ನೀವು ಸೂಚಿಸುವ ಒಬ್ಬ ವ್ಯಕ್ತಿಗೆ ವಿಶೇಷ ಅಧಿಕಾರ ಸಿಗಲಿದೆ ಎಂದು ಹೇಳಿದ ಕೂಡಲೇ ಹೆಚ್ಚು ಸಮಯ ತೆಗೆದುಕೊಳ್ಳದ ಸ್ನೇಹಿತ್, ನಮ್ರತಾ ಎಂದು ಹೆಸರಿಸಿದರು.

ನಮ್ರತಾ ಹೆಸರು ಹೇಳಲು ಸೂಕ್ತ ಕಾರಣಗಳನ್ನು ನೀಡಿ ಎಂದಾಗ, 'ಸೂಕ್ತ ಏನಿಲ್ಲ ಬಿಗ್​ಬಾಸ್​, ನನಗೆ ಅವರು ತುಂಬ ಇಷ್ಟ' ಎಂದು ಹೇಳಿದರು. ಸದ್ಯ 11ನೇ ವಾರಕ್ಕೆ ಎಂಟ್ರಿ ಕೊಟ್ಟಿರುವ ಉಳಿದ ಇತರೆ ಸ್ಪರ್ಧಿಗಳು ಯಾವ ರೀತಿ ಆಡಲಿದ್ದಾರೆ? ಯಾವ ಬಗೆಯ ಟಾಸ್ಕ್​ ಎದುರಿಸಲಿದ್ದಾರೆ? ಎಂಬುದನ್ನು ಕಾದು ನೋಡಬೇಕು.