ನ್ಯೂಸ್

BBKS10: 'ಬೇಜಾರು ಇದ್ದೇ ಇದೆ…….'! ಮನೆಯಿಂದ ಹೊರಬಂದ ಸಿರಿ ಬಿಚ್ಚಿಟ್ರು ಕುತೂಹಲಕಾರಿ ಸಂಗತಿ

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 13ನೇ ವಾರಕ್ಕೆ ಕಾಲಿಟ್ಟಿದ್ದು, ಸಿರಿ ಅವರನ್ನು ಹೊರತುಪಡಿಸಿ ಉಳಿದ ಸದಸ್ಯರು ಹೊಸ ವರ್ಷದ ಸಂಭ್ರಮವನ್ನು ಮನೆಯೊಳಗೆ ಆಚರಿಸಿದ್ದಾರೆ. ಈ ವಾರ ಮನೆಯಿಂದ ಎಲಿಮಿನೇಟ್​ ಆಗಿ ಹೊರಬಂದ ಸಿರಿ, ತಮ್ಮ ಬಿಗ್ ಬಾಸ್​ ಪಯಣ ಹೇಗಿತ್ತು? ತಿಳಿಸದ ಅನುಭವಗಳು ಹಾಗೂ ಕೆಲವು ಕುತೂಹಲಕಾರಿ ಸಂಗತಿಗಳನ್ನು ವೀಕ್ಷಕರ ಮುಂದೆ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಮನೆಯಿಂದ ಹೊರಬಂದ ಬಳಿಕ ಮೊದಲ ಸಂದರ್ಶನದಲ್ಲಿ ಮಾತನಾಡಿದ ನಟಿ ಸಿರಿ, "ಬೇಜಾರು ಇದ್ದೇ ಇದೆ! ನಾನು ಸ್ವಲ್ಪ ಜಾಸ್ತಿನೇ ಪಾಸಿಟೀವ್ ಆಗಿ ಯೋಚನೆ ಮಾಡುವವಳು. ಹಾಗಾಗಿ ಖಂಡಿತ ಸ್ವಲ್ಪ ಬೇಜಾರು ಇದ್ದೇ ಇದೆ. ಫಿನಾಲೆಗೆ ಇಷ್ಟು ಹತ್ತಿರ ಬಂದ ಮೇಲೆ ಬಿಟ್ಟು ಹೋಗ್ತಿದ್ದೀನಲ್ವಾ ಅಂತ. ಆದರೆ ಇಷ್ಟು ವಾರ ಮನೆಯೊಳಗಿದ್ದೆ ಎಂಬುದಕ್ಕೆ ಖುಷಿಯಿದೆ. ಈ ಪ್ರಯಾಣವನ್ನು ಆ ದಿಕ್ಕಿನಿಂದ ನೋಡಿ ಖುಷಿಪಡೋಣ ಅಂದುಕೊಳ್ಳುತ್ತಿದ್ದೇನೆ" ಎಂದರು.

"ಬಿಗ್‌ಬಾಸ್ ಅಂದ್ರೆ ಕಿತ್ತಲಾಡಲೇಬೇಕು, ಎಲ್ಲರೂ ಪ್ರವೋಕ್‌ ಮಾಡ್ತಾರೆ ಎಂದೆಲ್ಲ ನಂಬಿಕೆ ಇದ್ದೇ ಇದೆ. ಆದರೆ ಹಾಗೇನಿಲ್ಲ. ಎಲ್ಲೋ ಒಂದ್ಕಡೆ ನಾನು ನನ್ನ ಕಂಫರ್ಟ್‌ ಝೋನ್‌ನಿಂದ ಹೊರಗೆ ಬರಲು ಸ್ವಲ್ಪ ಟೈಮ್ ತಗೊಂಡೆ. ಆದರೆ ನಾನು ಇರೋದೇ ಹಾಗೆ. ತಪ್ಪೆಲ್ಲಾಯ್ತು ಎಂದು ನನಗೆ ಗೊತ್ತಿಲ್ಲ. ನಾನು ನನ್ನತನವನ್ನು ಬಿಟ್ಟುಕೊಡಬಾರದು. ಅದೇ ರೀತಿ ಉತ್ತರವನ್ನೂ ಸರಿಯಾಗಿ ಕೊಡಬೇಕು ಅಂದುಕೊಂಡಿದ್ದೆ. ಅದೇ ರೀತಿ ಇದ್ದೀನಿ ಕೂಡ. ಹಾಗಾಗಿ ಆ ಸಿರಿ ಜನರಿಗೆ ಇಷ್ಟವಾಗಿದ್ದರೂ ಪ್ರತಿವಾರ ನಾಮಿನೇಟ್ ಆದ್ರೂ ಸೇವ್ ಆಗ್ತಾ ಬಂದಿದ್ದೀನಿ. ಆ ಸಿರಿ ಕೂಡ ಜನರಿಗೆ ಇಷ್ಟವಾಗಿದ್ದಾಳೆ" ಎಂದರು.

"ಹೌದು, ನಾನು ಡಿಪ್ಲೋಮೆಟಿಕ್! ನಾನು ಡಿಪ್ಲೋಮೆಟಿಕ್ ಅಂದ್ರೆ ಒಪ್ಕೋತೀನಿ. ಯಾಕಂದರೆ ನಾನು ಇರೋದೇ ಹಾಗೆ. ಈವತ್ತು ನಾನು ಹೊರಗೆ ಬಂದಾಗ, ನನಗೋಸ್ಕರ ಮನೆಯೊಳಗೆ ಇಬ್ಬರು ಮೂವರು ಕಣ್ಣೀರು ಹಾಕ್ತಿದ್ದಾರೆ ಅಂದರೆ ಅರ್ಥ ಮಾಡ್ಕೊಳ್ಳಿ. ಹಾಗೆಯೇ ಹೊರಗೆ ನನ್ನ ಅಭಿಮಾನಿಗಳಿರಬಹುದು. ನನಗೆ ಓಟ್ ಹಾಕಿರುವವರು ಇರಬಹುದು. ಅವರ ಮನಸ್ಸನ್ನು ನಾನು ಗೆದ್ದಿದೀನಿ . ಬಿಗ್‌ಬಾಸ್ ಮನೆಯೊಳಗೆ ಎಲ್ಲರೂ ನನ್ನನ್ನು ಡಿಪ್ಲೋಮೆಟಿಕ್ ಅಂದಿರಬಹುದು, ಸೇಫ್‌ ಝೋನ್ ಅಂದಿರಬಹುದು. ಆದರೆ ನಾನು ಮನೆಯಿಂದ ಹೊರಗೆ ಬರುವಾಗ ಹಾಗೆ ಹೇಳಿದವರು ಕಣ್ಣಲ್ಲೂ ನೀರು ನೋಡ್ದೆ. ಹಾಗಾಗಿ ಅವರ ಮನಸ್ಸನ್ನೂ ನಾನು ಗೆದ್ದಿದೀನಿ ಅಂದ್ಕೊಂಡಿದೀನಿ" ಎಂದು ಹೇಳಿದರು.

ಕ್ಯಾಪ್ಟನ್ಸಿ ಟಾಸ್ಕ್‌ ಕನಸು: "ಕ್ಯಾಪ್ಟನ್ಸಿ ಟಾಸ್ಕ್‌ಗೆ ನಾನು ಬಹಳ ಹತ್ತಿರ ಹೋಗಿದ್ದೆ. ಎರಡು ಸಲ ಹೋಗಿದ್ದೆ. ಆದರೆ ಕ್ಯಾಪ್ಟನ್ ಆಗಲು ಆಗಲಿಲ್ಲ. ಕ್ಯಾಪ್ಟನ್ ಬೆಡ್ ಮೇಲೆ ಮಲಗುವ ಅವಕಾಶ ಸಿಗಲಿಲ್ಲ. ಆದರೆ ಅವರಿಗೆ ಸಿಗುವ ಸೌಲಭ್ಯಗಳನ್ನೆಲ್ಲ ಕಳೆದ ವಾರಗಳಲ್ಲಿ ನಾನು ತೆಗೆದುಕೊಂಡಿದೀನಿ. ಹಾಗಾಗಿ ಸುದೀಪ್ ಅವರೇ ನನಗೆ ಮನೆಯನ್ನು ನಿಭಾಯಿಸುವ ಜವಾಬ್ದಾರಿ ಕೊಟ್ರು. ಇಮ್ಯೂನಿಟಿ ಸಿಗುತ್ತದೆ ಕ್ಯಾಪ್ಟನ್ ಆದವರಿಗೆ. ವೈಲ್ಡ್ ಕಾರ್ಡ್‌ ಎಂಟ್ರಿ ಆದವರು ಆ ವಾರ ನನ್ನನ್ನು ಸೇವ್ ಮಾಡಿ ಆ ಸೌಲಭ್ಯವೂ ಸಿಗುವಂತೆ ಮಾಡಿದರು. ಮನೆಯವರು ಫೋಟೊ ಬರುತ್ತದೆ ಕ್ಯಾಪ್ಟನ್ ಆದವರಿಗೆ. ನನಗೆ ಮನೆಯಿಂದ ಪತ್ರ ಬಂದಾಗಲೇ ನನ್ನದು ನನ್ನ ತಂದೆಯವರದ್ದು ಫೋಟೊ ಬಂದಿತ್ತು. ಹಾಗಾಗಿ, ಕ್ಯಾಪ್ಟನ್ ಆಗಿ ಸಿಗುವ ಸೌಲಭ್ಯಗಳಲ್ಲಿ ಬಹುತೇಕ ನನಗೆ ಸಿಕ್ಕಿದೆ" ಎಂದು ಹೇಳಿದರು.

"ಟಾಪ್‌ 5ನಲ್ಲಿ ಕಾರ್ತಿಕ್, ಸಂಗೀತಾ, ವಿನಯ್, ತುಕಾಲಿ ಸಂತೋಷ್ ಮತ್ತು ತನಿಷಾ ಇರಬೇಕು. ಹುಡುಗಿ ವಿನ್ನರ್ ಆದ್ರೆ ನನಗೆ ಖುಷಿಯಾಗುತ್ತದೆ. ಹಾಗೆ ನೋಡಿದ್ರೆ ಸಂಗೀತಾ ಗೆಲ್ಲಬಹುದು ಅನಿಸುತ್ತದೆ. ಆದರೆ ಈಗಿನ ಸನ್ನಿವೇಶ ನೋಡಿದ್ರೆ ಕಾರ್ತಿಕ್ ಗೆಲ್ಲಬಹುದು ಅನ್ನಿಸತ್ತದೆ. ಬೆಳಗಿನ ಹೊತ್ತಿನ ಹಾಡನ್ನು ಮತ್ತು ಮೈಕ್ ಅನ್ನೂ ಮಿಸ್ ಮಾಡ್ಕೋತೀನಿ. ನನ್ನ ಬಿಗ್‌ಬಾಸ್‌ ಪ್ರಯಾಣ ತುಂಬ ಚೆನ್ನಾಗಿತ್ತು. ಸಾಕಷ್ಟು ಏರಿಳಿತಗಳು ಇದ್ದರೂ ಇಷ್ಟು ದೂರ ಬಂದಿರುವುದು ಖುಷಿಕೊಟ್ಟಿದೆ. ಬದುಕಿನಲ್ಲಿ ಒಮ್ಮೆ ಮಾತ್ರ ಇಂಥ ಅನುಭವ ಸಿಗಲು ಸಾಧ್ಯ. ಅದು ನನಗೆ ಸಿಕ್ಕಿದೆ. ಅದಕ್ಕೆ ಖುಷಿಯಿದೆ" ಎಂದು ಸಿರಿ ಹೇಳಿಕೊಂಡಿದ್ದಾರೆ.