ನ್ಯೂಸ್

BBKS10: 'ಬಿಗ್'​ ಮನೆಯೊಳಗೆ ಬಿಕ್ಕಿ ಬಿಕ್ಕಿ ಅತ್ತ ಪ್ರತಾಪ್​!

ಬೆಂಗಳೂರು: ಬಿಗ್​ ಬಾಸ್​ ಸೀಸನ್​ 10 ಇದೀಗ ಆರನೇ ವಾರಕ್ಕೆ ಕಾಲಿಟ್ಟಿದ್ದು, ಸ್ಪರ್ಧಿಗಳ ಮಧ್ಯೆ ಪೈಪೋಟಿಗಳು ಮತ್ತಷ್ಟು ಬಿಗಿಯಾಗುತ್ತಿದೆ. ಒಂದೆಡೆ ಮನೆಯಲ್ಲಿ ಉಳಿಯಲು ಇಷ್ಟವಿಲ್ಲ ಎಂದ ವರ್ತೂರು ಸಂತೋಷ್​, ತಾಯಿಯ ಅಪ್ಪುಗೆ, ಸಾಂತ್ವನದ ಮಾತುಗಳ ಕೇಳಿದ ನಂತರ ಆಟ ಮುಂದುವರಿಸಲು ನಿರ್ಧರಿಸಿದರು. ಮತ್ತೊಂದೆಡೆ ದೀಪಾವಳಿ ಹಬ್ಬದಂದು ತಮ್ಮ ಕುಟುಂಬದವರನ್ನು ನೆನಪಿಸಿಕೊಂಡು ಭಾವುಕರಾದ ಸದಸ್ಯರಿಗೆ ಇದೀಗ ಬಿಗ್​ಬಾಸ್​ ವಿಶೇಷ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದ್ದಾರೆ.

ಹಬ್ಬದ ಉಡುಗೊರೆಯಾಗಿ ಮನೆಯ ಮೂವರು ಸದಸ್ಯರಿಗೆ ಮಾತ್ರ ತಮ್ಮ ಕುಟುಂದಿಂದ ಬಂದ ಗಿಫ್ಟ್​ ಪಡೆಯಲು ಅವಕಾಶ ಕೊಡಲಾಗಿದೆ. ಈ ಪೈಕಿ ಮನೆಯ ಅಷ್ಟು ಸದಸ್ಯರಲ್ಲಿ ಯಾರು ಮೂವರಿಗಾಗಿ ತ್ಯಾಗ ಮಾಡಲಿದ್ದಾರೆ ಎಂಬುದು ಈಗ ದೊಡ್ಡ ಚರ್ಚೆಯಾಗಿ ಪರಿವರ್ತಿಸಿದೆ. "ಹಬ್ಬಕ್ಕೆ ನನಗೆ ರೆಡಿಮೇಡ್​ ಸ್ವೀಟ್ಸ್​ ಬಂತು, ನನ್ನ ತಾಯಿ ಮಾಡಿದ ಕೈ ಅಡುಗೆ ತಲುಪಿಲ್ಲ. ನನಗೆ ಅಮ್ಮ ಹೇಗಿದ್ದಾರೆ ಎಂದು ತಿಳಿದುಕೊಳ್ಳುವ ಆಸೆ" ಎಂದು ತನಿಷಾ ಕಣ್ಣೀರಿಟ್ಟರು.

ಅವಕಾಶದ ಬಗ್ಗೆ ಮಾತನಾಡಿದ ನಮ್ರತಾ, "ನಾನು ಪ್ರತಾಪ್​ಗೆ ಕೊಡಲು ಬಯಸುತ್ತೇನೆ. ಕಾರಣ, ಅವರು ತಮ್ಮ ಮನೆಯವರೊಂದಿಗೆ ಮೂರು ವರ್ಷದಿಂದ ಮಾತನಾಡಿಲ್ಲ. ಹೀಗಾಗಿ ಇದು ಪ್ರತಾಪ್​ಗೆ ಸಿಗಲಿ" ಎಂದು ಹೇಳಿದರು.

ಮನೆಯವರ ಸುದ್ದಿ ಕೇಳುತ್ತಿದ್ದಂತೆ ಭಾವುಕರಾದ ಪ್ರತಾಪ್​​, "ನನಗೂ ನನ್ನ ತಂದೆ-ತಾಯಿಯನ್ನು ನೋಡಬೇಕು, ನನಗೆ ಗೊತ್ತಾಗಬೇಕು ಅವರು ನನ್ನೊಂದಿಗೆ ಮಾತನಾಡುತ್ತಿದ್ದಾರಾ, ಇಲ್ವಾ? ಅಂತ" ಎಂದು ಬಿಕ್ಕಿ ಬಿಕ್ಕಿ ಅತ್ತರು. ಕೂಡಲೇ ಮನೆಯ ಇತರ ಸದಸ್ಯರು ಸಮಾಧಾನ ಹೇಳಿ, ಧೈರ್ಯ ತುಂಬಿದ್ದಾರೆ.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.