ನ್ಯೂಸ್

BBKS10: 'ಮುಂದಿನ ವಾರ ನನ್ನ ಜಾಗದಲ್ಲಿ…..': ಅವಿನಾಶ್​ ಸೂಚಿಸಿದ ಹೆಸರು ಯಾರದ್ದು?

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 12ನೇ ವಾರಕ್ಕೆ ಹೆಜ್ಜೆಯಿಟ್ಟಿದ್ದು, 11ನೇ ವಾರದ ಶಾಕಿಂಗ್ ಎಲಿಮಿನೇಷನ್​ನಲ್ಲಿ ಮನೆಯೊಳಗೆ ಮಾವುತ ಎಂದೇ ಗುರುತಿಸಿಕೊಂಡಿದ್ದ ಅಸ್ತಿಕ್ ಅವಿನಾಶ್ ಶೆಟ್ಟಿ ಬಿಗ್ ಮನೆಯಿಂದ ಹೊರಬಂದರು. ಬಿಗ್ ಮನೆಯಿಂದ ಔಟ್ ಆದ ಅವಿನಾಶ್​, ತಮ್ಮ ಬಿಗ್​ಬಾಸ್​ ಪಯಣ, ಒಳಗಿನ ಅನುಭವಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.

ಆನೆಯನ್ನ ಪಳಗಿಸೋಕೆ ಒಬ್ಬ ಮಾವುತ ಬೇಕು ಅಂತ ಆ್ಯಡ್ ನೋಡ್ದೆ. ಹಾಗಾಗಿ ಬಂದೆ. ಇದು ಅಸ್ತಿಕ್ ಅವಿನಾಶ್‌ ಶೆಟ್ಟಿ ವೈಲ್ಡ್‌ ಕಾರ್ಡ್‌ ಮೂಲಕ ಈ ಸಲದ ಬಿಗ್‌ಬಾಸ್‌ ಮನೆಯೊಳಗೆ ಹೋದಾಗ ಆಡಿದ ಮಾತು. ಅವರ ಸ್ಟೈಲ್‌, ಕಾನ್ಫಿಡೆನ್ಸ್‌, ಮಾತು ಎಲ್ಲವೂ ಅವರು ಮನೆಯೊಳಗೆ ಮಿಂಚಲಿದ್ದಾರೆ ಎಂಬುದನ್ನು ದೃಢೀಕರಿಸುವ ಹಾಗೆಯೆ ಇತ್ತು. ಆದ್ರೆ, ಅವಿನಾಶ್ ಪ್ರೇಕ್ಷಕರ ನಿರೀಕ್ಷೆಯ ಮಟ್ಟಕ್ಕೆ ಮುಟ್ಟಲು ಸಾಧ್ಯಾವಾಗಿಲ್ಲ. ಹಾಗಾಗಿಯೇ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ. ಬ್ಯಾಕ್‌ ಟು ಬ್ಯಾಕ್‌ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಮನೆಯಿಂದ ಹೊರಗೆ ಬರುವುದರ ಮೂಲಕ, ಅರ್ಧದಲ್ಲಿ ಎಂಟ್ರಿ ಕೊಟ್ಟು ಮನೆಯೊಳಗೆ ಜಾಗ ಗಿಟ್ಟಿಸುವುದು ಸುಲಭದ ಮಾತಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಮಾಡಿದ್ದಾರೆ.

ಮೈಕಲ್‌ ಮತ್ತು ಅವಿನಾಶ್‌ ಭಾನುವಾರದ ಸಂಚಿಕೆಯ ಕಡೆಯಲ್ಲಿ ಕಾರಿನಲ್ಲಿ ಕೂತು ಮನೆಯಿಂದ ಹೊರಗೆ ಹೋದಾಗ, ಈ ವಾರ ಡಬಲ್‌ ಎಲಿಮಿನೇಷನ್‌ ಆಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಈ ನಿರೀಕ್ಷೆ ಸುಳ್ಳಾಗಿ ಬಿಗ್‌ಬಾಸ್‌ ಸೋಮವಾರದ ಸಂಚಿಕೆಯಲ್ಲಿ ಹೊಸದೊಂದು ಟ್ವಿಸ್ಟ್ ನೀಡಿದರು. ಮೈಕಲ್ ಮತ್ತೆ ಮನೆಯೊಳಗೆ ಬಂದಿದ್ದಾರೆ. ಅವಿನಾಶ್ ಒಬ್ಬರೇ ಎಲಿಮಿನೇಟ್ ಆಗಿ, ಮನೆಯಿಂದ ಹೊರಗೆ ಬಂದಿದ್ದಾರೆ.

ತಮ್ಮ ಬಿಗ್ ಬಾಸ್ ಜರ್ನಿ ಬಗ್ಗೆ ಮಾತಾಡಿದ ಅವಿನಾಶ್, "ಎಲ್ಲರಿಗೂ ನಮಸ್ಕಾರ, ನಾನು ಅಸ್ತಿಕ್ ಅವಿನಾಶ್ ಶೆಟ್ಟಿ. ಈಗತಾನೆ ಬಿಗ್‌ಬಾಸ್ ಮನೆಯಿಂದ ಹೊರಗೆ ಬಂದಿದ್ದೀನಿ. ತುಂಬಾನೇ ಫೀಲಿಂಗ್ಸ್‌ ಇವೆ. ವೈಲ್ಡ್‌ಕಾರ್ಡ್‌ ಕಂಟೆಸ್ಟೆಂಟ್ ಆಗಿ ನಾಲ್ಕು ವಾರ ಇದ್ದೆ. ನನ್ನ ಬೆಸ್ಟ್ ಕೊಡಲು ಟ್ರೈ ಮಾಡಿದೆ. ಫಿನಾಲೆಯ ಸಮೀಪಕ್ಕೆ ಹೋಗಿ ಹೊರಗೆ ಬಂದಿದ್ದೀನಿ. ಹಾಗಾಗಿ ಸ್ವಲ್ಪ ದುಃಖವಾಗ್ತಿದೆ. ನಾನು ನಿರೀಕ್ಷೆ ಮಾಡಿರಲಿಲ್ಲ. ಸೇವ್‌ ಆಗ್ತೀನಿ ಅಂತಾನೇ ಅಂದ್ಕೊಂಡಿದ್ದೆ. ಆದರೆ ಹಣೆಬರಹ ಏನೂ ಮಾಡಕ್ಕಾಗಲ್ಲ" ಎಂದಿದ್ದಾರೆ.

"ನಾನು ಹೋದ ಮೊದಲ ವಾರ ಕ್ಯಾಪ್ಟನ್ಸಿ ಟಾಸ್ಕ್ ಆಡಿದೆ, ಆದ್ರೆ, ಗೆದ್ದಿಲ್ಲ. ಸೆಕೆಂಡ್ ವೀಕ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಟಾಪ್‌ ನಾಲ್ಕು ಸ್ಪರ್ಧಿಗಳಲ್ಲಿ ನಾನಿದ್ದೆ. ನನ್ನ ಶಕ್ತಿಮೀರಿ ಪ್ರದರ್ಶನ ಕೊಟ್ಟಿದೀನಿ. ಈ ವಾರ ಎಲ್ಲ ವಿಚಾರದಲ್ಲಿಯೂ ಮುಂದಿದ್ದೆ. ಆದರೆ ಸಂಗೀತಾ ನನ್ನನ್ನು ಅರ್ಥಮಾಡಿಕೊಳ್ಳಲಿಲ್ಲ. ನಾನು ಸಂಗೀತಾಗೆ ಎಲ್ಲಿಯೂ ತಪ್ಪು ಆಪಾದನೆ ಮಾಡಿಲ್ಲ. ಹಾಗಾಗಿ ಸಂಗೀತಾ ಅವರಿಗೆ ತಪ್ಪು ಅರ್ಥ ಮಾಡಿಕೊಳ್ಳಲು ಕಾರಣಗಳೇ ಇರಲಿಲ್ಲ. ಅವರು ಮತ್ತೆ ತಂಡವನ್ನು ಹೊಂದಿಸುವಾಗ ನನ್ನನ್ನು ತೆಗೆದುಕೊಳ್ಳಲಿಲ್ಲ. ಹಾಗಾಗಿ ತನಿಷಾ ತಂಡ ಸೇರಿಕೊಂಡೆ. ಅಲ್ಲಿಯೂ ನನ್ನ ಪ್ರಯತ್ನ ಮುಂದುವರಿಸಿದೆ. ಕ್ಯಾಪ್ಟನ್ಸಿ ಟಾಸ್ಕ್ ಆಡಲು ಕೊನೆಕ್ಷಣದವರೆಗೂ ಟ್ರೈ ಮಾಡಿದ್ದೀನಿ" ಎಂದರು.

"ವರ್ತೂರ್ ಸಂತೋಷ್ ಖಂಡಿತ ಅಂತಿಮ ಹಂತಕ್ಕೆ ಹೋಗುತ್ತಾರೆ. ಅವರ ಜತೆಗೆ ಪ್ರತಾಪ್ ಕೂಡ ಬರಬಹುದು. ಪ್ರತಾಪ್‌ ಅಲ್ಲಿನ ಸಂದರ್ಭವನ್ನು ಬಳಸಿಕೊಳ್ಳುವುದು ಹೇಗೆ ಎಂಬುದನ್ನು ತುಂಬ ಚೆನ್ನಾಗಿ ಅರಿತಿದ್ದಾರೆ. ಸಂಗೀತಾ ಕೂಡ ಟಾಪ್‌ 5ನಲ್ಲಿ ಇರುತ್ತಾರೆ. ಆದರೂ ಅವರಿಗೆ ಟಾಸ್ಕ್‌ನಲ್ಲಿ ಕಮ್‌ಬ್ಯಾಕ್‌ ಮಾಡುವ ರೀತಿಯಿಂದಲೇ ಫೈನಲ್‌ಗೆ ಹೋಗುತ್ತಾರೆ ಅನಿಸುತ್ತದೆ. ಕಾರ್ತೀಕ್ ಕೂಡ ತುಂಬ ಪ್ರಬಲ ಸ್ಪರ್ಧಿ. ತುಕಾಲಿ ಬಹಳ ಬುದ್ಧಿವಂತ. ಅಷ್ಟೇ ಸ್ವಯಂಕೇಂದ್ರಿತ ಮನುಷ್ಯ. ನನಗೆ ವೈಯಕ್ತಿಕವಾಗಿ ವರ್ತೂರ್ ಸಂತೋಷ್ ಗೆಲ್ಲಬೇಕು ಎಂಬ ಆಸೆಯಿದೆ. ಮುಂದಿನ ವಾರ ನನ್ನ ಜಾಗದಲ್ಲಿ ಸಿರಿ ಇರುತ್ತಾರೆ ಅನಿಸ್ತಿದೆ" ಎಂದು ಅವಿನಾಶ್ ಹೇಳಿದ್ದಾರೆ.