ನ್ಯೂಸ್

BBKS10: ಬಿಗ್ ಮನೆಯಿಂದ ಮಣ್ಣಿನ ಮಗ ಮೈಕಲ್ ಔಟ್​!

ಬೆಂಗಳೂರು: ಬಿಗ್ ಬಾಸ್ ಕನ್ನಡ​ ಸೀಸನ್​ 10ರ ಸ್ಪರ್ಧಿಗಳು ಇದೀಗ 14ನೇ ವಾರಕ್ಕೆ ಕಾಲಿಟ್ಟಿದ್ದು, 13ನೇ ವಾರಾಂತ್ಯದಲ್ಲಿ ನಾಮಿನೇಟ್ ಆಗಿದ್ದ ಐವರು ಸದಸ್ಯರ ಪೈಕಿ ಮನೆಯೊಳಗೆ ಎಲ್ಲರ ಪ್ರೀತಿಗೆ ಪಾತ್ರರಾಗಿ, ಮಣ್ಣಿನ ಮಗ ಎಂದೇ ಪಟ್ಟ ಗಳಿಸಿದ್ದ ಮೈಕಲ್ ಅಜಯ್​ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ.

ಬಿಗ್ ಬಾಸ್​ ಸೀಸನ್​ 10ರ ಗ್ರ್ಯಾಂಡ್​ ಫಿನಾಲೆಗೆ ಎರಡೇ ವಾರಗಳು ಬಾಕಿ ಉಳಿದಿದ್ದು, ಸ್ಪರ್ಧಿಗಳಲ್ಲಿ ಫೈನಲ್​ ತಲುಪುವ ಆತುರ, ಕಾತರ ಹೆಚ್ಚಿದೆ. ಫೈನಲ್​​ನಲ್ಲಿ ಟಾಪ್​ ಮೂವರಲ್ಲಿ ನಾವು ಇರಬೇಕು, ಇದ್ದು ಸೀಸನ್​ 10 ಪಟ್ಟವನ್ನು ಅಲಂಕರಿಸಬೇಕು ಎಂದು ಸೆಣಸಾಡುತ್ತಿರುವ ಸ್ಪರ್ಧಿಗಳು, ಈ ವಾರವು ಕೂಡ ಸಂಗೀತಾ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದರು.

ಹೊಸ ವರ್ಷದ ಪ್ರಾರಂಭವಾದ ಮೊದಲ ವಾರದಲ್ಲೇ ಮಾತಿನ ಸಮರ ಸಾರಿದ ಸ್ಪರ್ಧಿಗಳು ತದನಂತರದಲ್ಲಿ ಅಲ್ಲಲ್ಲಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಮುಖೇನ ಎಂದಿನಂತೆ ಆಟವನ್ನು ಉತ್ತಮ ರೀತಿಯಲ್ಲಿ ಮುಗಿಸಿದರು. ವಾರಾಂತ್ಯ ತಲುಪುವ ವೇಳೆಗೆ ಮನೆಯವರ ಆಯ್ಕೆಯ ಅನುಸಾರ ಮೈಕಲ್, ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತೋಷ್​ ಮತ್ತು ಪ್ರತಾಪ್​ ನಾಮಿನೇಟ್​ ಆಗಿದ್ದರು.

ಈ ಪೈಕಿ ಕಾರ್ತಿಕ್ ಮತ್ತು ಪ್ರತಾಪ್​ ಮೊದಲು ಸೇಫ್ ಆದ ಬಳಿಕ ತುಕಾಲಿ ಸಂತೋಷ್​ ಉಳಿದುಕೊಂಡರು. ಕಡೆಯಲ್ಲಿ ವರ್ತೂರು ಮತ್ತು ಮೈಕಲ್​ ಇಬ್ಬರಲ್ಲಿ ಮೈಕಲ್​ ಎಲಿಮಿನೇಟ್​ ಆಗುವ ಮೂಲಕ ಫಿನಾಲೆ ಓಟದಿಂದ ಹೊರಗುಳಿದಿದ್ದಾರೆ. ಮನೆಯಿಂದ ಹೊರಹೋಗುವ ಮುನ್ನ ಕನ್ನಡದಲ್ಲೇ ಮಾತನಾಡಿ, ಧನ್ಯವಾದ ತಿಳಿಸಿದ ಮೈಕಲ್​ಗೆ ಸುದೀಪ್ ಬೆನ್ನುತಟ್ಟಿ ಮುಂದಿನ ಕೆಲಸಗಳಿಗೆ ಶುಭಕೋರಿದರು.