ನ್ಯೂಸ್

BBKS10: ಎದೆಯೊಳಗೆ ಗಿಟಾರಿಟ್ಟು ಕುಣಿದ 'ಡ್ರೋನ್'​; ಬಿಗ್​ ಮನೆಗೆ ಹೋದ ಬಳಿಕ ಪ್ರತಾಪ್​ನಲ್ಲಿ ಆದ ಬದಲಾವಣೆಗಳಿವು…

ಮೋಹನ್​ ಶೆಟ್ಟಿ

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್ 10ರ ವಿನ್ನರ್​ ಪಟ್ಟ ಯಾರಿಗೆ ಎಂಬ ಒಂದೇ ಒಂದು ಪ್ರಶ್ನೆ ಸದ್ಯ ವೀಕ್ಷಕರನ್ನು ಬೆಂಬಿಡದೆ ಕಾಡುತ್ತಿದ್ದು, ಯಾರಾಗಲಿದ್ದಾರೆ ಈ ಸೀಸನ್​ನ ಅಧಿಪತಿ ಎಂಬುದನ್ನು ಭಾನುವಾರದ ಸಂಚಿಕೆಯ ಅಂತಿಮ ಕ್ಷಣದವರೆಗೂ ಕಾದು ನೋಡಬೇಕಿದೆ. ಈ ಮಧ್ಯೆ ನಿನ್ನೆ ನಡೆದ ಗ್ರ್ಯಾಂಡ್ ಫಿನಾಲೆಯ ಮೊದಲ ದಿನದಂದು ಫೈನಲಿಸ್ಟ್​ ಸ್ಥಾನದಲ್ಲಿ ಕುಳಿತ್ತಿದ್ದ ಟಾಪ್ ಆರು ಸ್ಪರ್ಧಿಗಳ ಪೈಕಿ ತುಕಾಲಿ ಸಂತೋಷ್​ ಎಲಿಮಿನೇಟ್​ ಆಗಿ ಹೊರಬಂದಿದ್ದಾರೆ. ಇದೀಗ ಫಿನಾಲೆ ಹಣಾಹಣಿಯಲ್ಲಿ ಕಾರ್ತಿಕ್, ಸಂಗೀತಾ, ವಿನಯ್, ವರ್ತೂರು ಸಂತೋಷ್​ ಮತ್ತು ಪ್ರತಾಪ್ ಇದ್ದಾರೆ.

ಅದ್ದೂರಿ ಗ್ರ್ಯಾಂಡ್ ಫಿನಾಲೆಗೆ ಸಜ್ಜಾದ ಸ್ಪರ್ಧಿಗಳು, ಡ್ಯಾನ್ಸ್​ ಪ್ರಾಕ್ಟಿಸ್​ ಮಾಡಿ ವೀಕ್ಷಕರಿಗೆ ವಿಶೇಷ ಪ್ರದರ್ಶನ ನೀಡಿದರು. ಈ ವೇಳೆ ಎದೆಯೊಳಗೆ ಗಿಟಾರು ಹಾಡಿಗೆ ಕೈಯಲ್ಲಿ ಗಿಟಾರು ಹಿಡಿದು ಉತ್ಸಾಹ ಭರಿತವಾಗಿ ಡ್ಯಾನ್ಸ್​ ಮಾಡಿದ ಪ್ರತಾಪ್​ಗೆ ಶಿಳ್ಳೆ-ಚಪ್ಪಾಳೆಗಳು ಹೆಚ್ಚಾಗಿ ಕೇಳಿಬಂತು. ಸದ್ಯ ಫಿನಾಲೆ ಹಂತ ತಲುಪಿರುವ ಡ್ರೋನ್​, 100 ದಿನಗಳ ಹಿಂದೆ ಇದ್ದ ರೀತಿಗೂ ಇಂದು ಇರುವ ರೀತಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಅಸಲಿಗೆ ಪ್ರತಾಪ್​ನಲ್ಲಿ ಆದ ಬದಲಾವಣೆಗಳಿವು.

ಮನೆಯೊಳಗೆ ಬರುವ ಮುನ್ನ ಬಿಗ್​ ಬಾಸ್​ಗೆ ಹೋಗುವುದೇ ಬೇಡ ಎಂದು ನಿರ್ಧರಿಸಿದ್ದ ಪ್ರತಾಪ್​ ದೃಢವಾಗಿ ನಿರ್ಧರಿಸಿ ಎಂಟ್ರಿ ಕೊಡುತ್ತಾರೆ. ಯಾರೊಂದಿಗೂ ಹೆಚ್ಚು ಮಾತನಾಡದೆ ಮೌನದಿಂದಲೇ ಉತ್ತರಿಸಲು ಪ್ರಯತ್ನಿಸುತ್ತಿದ್ದ ಪ್ರತಾಪ್​, ಇದೀಗ ಎಲ್ಲರೊಡನೆ ಬೆರೆತು, ಆತ್ಮೀಯವಾಗಿ ಮಾತನಾಡುವ ಮನಸ್ಥಿತಿ ಹೊಂದಿದ್ದಾರೆ. ಯಾರಾದರೂ ದೂಷಿಸಿದರೆ, ದೂರಿದರೆ ಬೇಸರವಾದರೂ ಕೂಡ ಗಟ್ಟಿಯಾಗಿ ನಿಂತು ಸ್ಪಷ್ಟನೆ ಕೊಡುವುದನ್ನು ಇಂದು ಮತ್ತಷ್ಟು ಬಲವಾಗಿಸಿಕೊಂಡಿದ್ದಾರೆ.

ಹೆಚ್ಚು ಭಾವುಕರಾಗಿರುತ್ತಿದ್ದ ಪ್ರತಾಪ್​ ಇಂದು ಧೃತಿಗೆಡದೆ ಮತ್ತೊಬ್ಬರಿಗೆ ಸಾಂತ್ವನ ಹೇಳಿ, ಆತ್ಮಬಲ ಹೆಚ್ಚಿಸಿಕೊಳ್ಳುವುದನ್ನು ಕಲಿತುಕೊಂಡಿದ್ದಾರೆ. ಬಿಗ್ ಬಾಸ್​ಗೆ ಹೋದ ಪ್ರತಾಪ್​ ಅವರಲ್ಲಿ ಇಂದು ಹಲವು ಬದಲಾವಣೆಗಳು ಕಂಡುಬಂದಿದ್ದು, ಇದು ವೀಕ್ಷಕರನ್ನು ಮೆಚ್ಚುವಂತೆ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಡ್ರೋನ್ ಪ್ರತಾಪ್​ಗೆ ವ್ಯಾಪಕ ಬೆಂಬಲ ವ್ಯಕ್ತಪಡಿಸುತ್ತಿರುವ ನೆಟ್ಟಿಗರು, ಪ್ರತಾಪ್ ಗೆದ್ದು ಬರಲಿ ಎಂದು ಆಶಿಸಿದ್ದಾರೆ. ಯಾರು ಗೆಲುವಿನ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದನ್ನು ಸದ್ಯ ನಿರೀಕ್ಷಿಸಬೇಕಿದೆ.