ನ್ಯೂಸ್

BBKS10: 'ನನಗೆ ಏರುಧ್ವನಿಯಲ್ಲಿ ಮಾತಾಡ್ತೀರಾ'?; ಬಿಗ್ ಬಾಸ್ ಸೀಸನ್​ 3ರ​ ವಿಜೇತೆ ಶ್ರುತಿ ಗರಂ!

ಮೋಹನ್​ ಶೆಟ್ಟಿ

ಬೆಂಗಳೂರು: ಬಿಗ್ ಬಾಸ್​ ಕನ್ನಡ ಸೀಸನ್​ 10ರ ಸ್ಪರ್ಧಿಗಳು ಇದೀಗ 11ನೇ ವಾರದ ಅಂತ್ಯಕ್ಕೆ ಬಂದು ತಲುಪಿದ್ದು, ಎಂದಿನಂತೆ ಶನಿವಾರ ನಡೆಯಲಿರುವ ಕಿಚ್ಚನ ಪಂಚಾಯತಿಗೆ ಕ್ಷಣಗಣನೆ ಆರಂಭವಾಗಿದೆ. ಕಿಚ್ಚ ಸುದೀಪ್ ಅವರ ಎಂಟ್ರಿಗೂ ಮುನ್ನವೇ ಇದೀಗ ಮನೆಯೊಳಗೆ ಬಿಗ್ ಬಾಸ್​ ಸೀಸನ್​ 3ರ ವಿಜೇತೆ ನಟಿ ಶ್ರುತಿ ನ್ಯಾಯಾಧೀಶೆಯಾಗಿ ಆಗಮಿಸಿದ್ದಾರೆ.

ಬೆಳಗ್ಗೆ ಎಲ್ಲ ಸ್ಪರ್ಧಿಗಳೂ ನೋಡುತ್ತಿದ್ದ ಹಾಗೆಯೇ ಮನೆಯ ಮುಖ್ಯದ್ವಾರ ತೆರೆದುಕೊಂಡಿದೆ. ಬಾಗಿಲಿನಿಂದ ಕನ್ನಡ ಚಿತ್ರರಂಗದ ಹಿರಿಯ ನಟಿ, ಶ್ರುತಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಅವರನ್ನು ನೋಡುತ್ತಿದ್ದ ಹಾಗೆಯೇ ಮನೆಯ ಸದಸ್ಯರೆಲ್ಲರೂ ಅಚ್ಚರಿ ಹಾಗೂ ಖುಷಿಯಿಂದ ಕುಣಿದಾಡಿದ್ದಾರೆ. ಎಲ್ಲರೂ ಸಂತೋಷದ ಅಲೆಯಲ್ಲಿ ತೇಲುತ್ತಿರುವ ಹಾಗೆಯೇ ಕಟಕಟೆಯಲ್ಲಿ ನಿಲ್ಲುವ ಗಳಿಗೆ ಎದುರಾಗಿದೆ. ಶ್ರುತಿ ನ್ಯಾಯಾಧೀಶ ಕುರ್ಚಿಯಲ್ಲಿ ಕೂತಿದ್ದಾರೆ.

ಒಬ್ಬೊಬ್ಬ ಸ್ಪರ್ಧಿಗಳನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ಮಾಡಿದ ಶ್ರುತಿ, ವಿನಯ್ ಅವರನ್ನು ಕರೆದು ಪ್ರಶ್ನಿಸಿದರು. ‘ವಿನಯ್ ಅವರು ವಾರಾಂತ್ಯದಲ್ಲಿ ಸುದೀಪ್ ಅವರ ಎದುರಿಗೇ ಒಂದು ರೀತಿ ಇರುತ್ತಾರೆ, ವಾರವಿಡೀ ಮನೆಯ ಸದಸ್ಯರ ಜತೆಗೆ ಇನ್ನೊಂದು ರೀತಿ ಇರುತ್ತಾರೆ?’ ಎಂಬ ಪ್ರಶ್ನೆಗೆ ಸಂಗೀತಾ ತುಂಬ ಪ್ರಬಲವಾಗಿ ಹೌದು ಎಂದಿದ್ದಾರೆ. ಅಷ್ಟೇ ಅಲ್ಲ, ಇಷ್ಟು ದಿನಗಳ ಕಾಲ ವಿನಯ್ ಆಪ್ತಬಳಗದಲ್ಲಿ ಗುರುತಿಸಿಕೊಂಡಿದ್ದ ನಮ್ರತಾ ಕೂಡ, ‘ನನಗೂ ಹಾಗೇ ಅನಿಸುತ್ತದೆ ಎಂದರು.

'ವಿನಯ್ ಸುದೀಪ್ ಸರ್ ಎದುರಿಗೆ ಧ್ವನಿತಗ್ಗಿಸಿ ಮಾತಾಡುತ್ತಾರೆ’ ಎಂದು ನಮ್ರತಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ವಿನಯ್, ತಮ್ಮ ಎಂದಿನ ಉಡಾಫೆಯ ಧ್ವನಿಯಲ್ಲಿ, ‘ಇವರ ಬಳಿ ನಾಟಕ ಮಾಡ್ಕೊಂಡು ನನಗೆ ಏನೂ ಆಗ್ಬೇಕಾಗಿಲ್ಲ’ ಎಂದಿದ್ದಾರೆ. ಅವರ ಧ್ವನಿ ಬಗ್ಗೆ ಪ್ರತಿಕ್ರಿಯಿಸಿದ ಶ್ರುತಿ, ‘ನನ್ನ ಬಳಿ, ನ್ಯಾಯಾಧೀಶರ ಬಳಿಯೇ ಏರುಧ್ವನಿಯಲ್ಲಿ ಮಾತಾಡ್ತೀರಾ?’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಬಿಗ್‌ಬಾಸ್ ಮನೆಯೊಳಗೆ ಸೃಷ್ಟಿಯಾದ ಈ ನ್ಯಾಯಾಲಯದಲ್ಲಿ ಯಾರು ತಪ್ಪಿತಸ್ಥರಾಗುತ್ತಾರೆ, ಯಾರು ಬಿಡುಗಡೆಯಾಗುತ್ತಾರೆ, ಯಾರಿಗೆ ಜಾಮೀನು? ಯಾರಿಗೆ ಜೈಲು? ಎಂಬ ಪ್ರಶ್ನೆಗಳಿಗೆ ಇಂದಿನ ಕಿಚ್ಚನ ಪಂಚಾಯತಿಯಲ್ಲಿ ಗೊತ್ತಾಗಲಿದೆ.

ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗಲಿದೆ.