BBK12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ ಐದು ವಾರಗಳು ಕಳೆದಿದ್ದು, ಮೊದಲ ಗ್ರ್ಯಾಂಡ್ ಫಿನಾಲೆ ಕೂಡ ಮುಗಿದುಹೋಗಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ನೋಡುಗರಿಗೆ ಖುಷಿ ನೀಡಿದ್ದೇ ಆದರೂ ನಿನ್ನೆ (ಅ.01) ನಡೆದ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಅವರ ಪಂಚಾಯಿತಿಯಿಂದ ಒಂದಷ್ಟು ವೀಕ್ಷಕರಿಗೆ ತೀವ್ರ ಅಸಮಾಧಾನ ಮೂಡಿದೆ.
12ನೇ ಸೀಸನ್ನ ಬಿಗ್ ಬಾಸ್ ಸಖತ್ ಟ್ವಿಸ್ಟ್ಗಳಿಂದ ಕೂಡಿರುವುದು ಸದ್ಯ ಗೊಂದಲ ಹಾಗೂ ಕುತೂಹಲಕ್ಕೆ ಕಾರಣವಾಗಿದೆ. ಮನೆಯೊಳಗೆ ಮೊದಲ ಫಿನಾಲೆ ಆಗ್ತಿದ್ದಂತೆ ರಿಷಾ, ರಘು ಮತ್ತು ಸೂರಜ್ ಸಿಂಗ್ ಮೂವರು ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಎಂಟ್ರಿಕೊಟ್ಟಿರುವುದು ಆಟದ ದಿಕ್ಕನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ದಿದೆ. ಇದು ವೀಕ್ಷಕರ ಗಮನವನ್ನು ಸೆಳೆದಿದೆ. ಆದರೆ, ಯಾರೇ ಬಂದರೂ ಯಾರೇ ಹೋದರೂ ಮನೆಯಲ್ಲಿ ರಕ್ಷಿತಾ, ಕಾವ್ಯ ಮತ್ತು ಅಶ್ವಿನಿ ಮಧ್ಯೆ ನಡೆಯುತ್ತಿರುವ ಜಟಾಪಟಿಗಳು ಸದ್ಯ ನೋಡುಗರನ್ನು ಅಕ್ಷರಶಃ ಬೇಸರಕ್ಕೆ ದೂಡಿದೆ.
ಆರಂಭದಲ್ಲಿ ರಕ್ಷಿತಾ ಶೆಟ್ಟಿ ಬಗ್ಗೆ ಕೀಳಾಗಿ ಮಾತಾಡಿದ್ದಲ್ಲದೇ, ತಮ್ಮ ತಪ್ಪಿನ ಅರಿವನ್ನು ಎಲ್ಲಿಯೂ ಮಾತನಾಡದೆ ಇದ್ದದ್ದಕ್ಕೆ ಅಶ್ವಿನಿ ಗೌಡ ಮತ್ತು ಜಾಹ್ನವಿ ವಿರುದ್ಧ ನೋಡುಗರು ತಿರುಗಿ ಬಿದ್ದಿದ್ದರು. ಅಲ್ಲಿಂದ ರಕ್ಷಿತಾ ಬಗ್ಗೆ ಅಲ್ಲಲ್ಲಿ ಟಾಂಗ್ ಕೊಡುತ್ತಲೇ ಬಂದಿರುವ ಅಶ್ವಿನಿ ಅವರ ನಡೆಗೆ ಹಲವರು ಜಾಲತಾಣಗಳಲ್ಲಿ ಟೀಕೆಗಳನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ಅಂತೆಯೇ, ಈ ವಾರ ಕೂಡ ಮನೆಯಲ್ಲಿ 'ಬಿಗ್' ಜಟಾಪಟಿಗಳೇ ನಡೆಯಿತು. ಕಾವ್ಯ ಮತ್ತು ಅಶ್ವಿನಿ ಏಕವಚನದಲ್ಲಿ ಮಾತಿನ ಸಮರ ಸಾರಿದರೆ, ಅತ್ತ ಆಟದ ವೇಳೆ ರಕ್ಷಿತಾ ಬಟ್ಟೆ ಎಳೆದದ್ದು, ಕ್ಯಾಪ್ಟನ್ ಮಾತಿಗೆ ಲೆಕ್ಕಿಸದ ಸ್ಪಂದನ ಮತ್ತು ರಾಶಿಕಾ ನಡೆ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.
ಮತ್ತೊಂದೆಡೆ, ಒಮ್ಮತದಿಂದ ಒಬ್ಬರನ್ನು ಸ್ಟೂಡೆಂಟ್ ಆಫ್ ದಿ ವೀಕ್ಗೆ ಆಯ್ಕೆ ಮಾಡಿ ಎಂಬ ವಿಚಾರದಲ್ಲಿ ಗಿಲ್ಲಿ ತೆಗೆದುಕೊಂಡ ನಿರ್ಧಾರ ಕೆಲವರಿಗೆ ಸರಿ ಅನಿಸಿದರೆ, ಇನ್ನೂ ಕೆಲವರಿಗೆ ಸರಿಯಲ್ಲ ಅನಿಸಿತು. ಈ ಎಲ್ಲ ವಿಚಾರಗಳು ಶನಿವಾರದ ಕಿಚ್ಚನ ಪಂಚಾಯಿತಿಯಲ್ಲಿ ಚರ್ಚೆಯಾಗಲಿದೆ, ಸುದೀಪ್ ಅವರು ಹೇಗೆ ಕ್ಲಾಸ್ ತಗೋತಾರೆ? ಯಾರದ್ದು ತಪ್ಪು-ಸರಿ ಎಂದು ಹೇಳ್ತಾರೆ ಎಂದು ವೀಕ್ಷಕರು ಅಪಾರ ನಿರೀಕ್ಷೆಯಲ್ಲಿದ್ದರು. ಆದರೆ, ಸುದೀಪ್ ಅವರಿಂದ ಅವರು (ನೋಡುಗರು) ನಿರೀಕ್ಷಿಸಿದ ಉತ್ತರ ಮತ್ತು ಪ್ರತ್ಯೇಕ ವಿಷಯಗಳು ಚರ್ಚೆಯಾಗದ ಹಿನ್ನೆಲೆ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬೇಸರ ಹೊರಹಾಕಿದ್ದಾರೆ.
ಫೇಸ್ಬುಕ್ ಬಳಕೆದಾರ ಮಂಜೇಗೌಡ ಕೆ ಮಲ್ಲೇನಹಳ್ಳಿ ಎಂಬುವರು, "ಕಿಚ್ಚ ಸುದೀಪ್ ಅವರೇ, ನ್ಯಾಯ ಪಂಚಾಯ್ತಿಯಲ್ಲಿ ಸ್ವಲ್ಪ ಕನ್ಫ್ಯೂಸ್ ಮಾಡಿದ್ರಿ ಅನ್ನಿಸ್ತು. ರಕ್ಷಿತಾ ಟೀ ಶರ್ಟ್ ಮೇಲೆ ಬಂದಿದ್ದೂ ಸತ್ಯ. ಪ್ರಿನ್ಸಿಪಾಲ್ ಆಗಿದ್ದ ರಘು ಆಟ ಸ್ಟಾಪ್ ಮಾಡಿ, ನಾನೂ ಈ ಆಟವನ್ನ ಕನ್ಸಿಡರ್ ಮಾಡಲ್ಲ ಅಂದಿದ್ದೂ ಸತ್ಯ. ರಕ್ಷಿತಾ ಮೇಲೆ ಮಲಗಿದ್ದ ರಾಶಿಕಾ ಬಿಡಲ್ಲ ಅಂದಿದ್ದೂ ಸತ್ಯ. ಜೊತೆಯಲ್ಲಿದ್ದ ಸ್ಪಂದನ ಸಾಥ್ ಕೊಟ್ಟಿದ್ದು ಸತ್ಯ. ಆದರೆ ನೀವು ಯಾರದ್ದೂ ತಪ್ಪಿಲ್ಲ ಅನ್ನೋ ತರ ತೇಪೆ ಸಾರಿಸಿ, ರಕ್ಷಿತಾ ಪರ ನಿಂತವರೇ ತಪ್ಪು ಮಾಡಿ ಬಿಟ್ಟರು ಅನ್ನೋ ತರ ಬಿಂಬಿಸಿದ್ರಿ" ಎಂದಿದ್ದಾರೆ.
"ಕುಸ್ತಿ ನಡೆಯುವಾಗ ಪೈಲ್ವಾನ್ ಇರ್ತಾನೆ. ಅವನು ನಿಲ್ಲಿಸಿ ಅಂದಾಗ ನಿಲ್ಲಿಸಬೇಕು. ಇಲ್ಲದಿದ್ರೆ ಮುಖದ ಮೇಲೆ ಹೊಡೆದು ಬಿಡುಸ್ತಾನೆ. ಆದರೆ ಇಲ್ಲಿ ಮ್ಯಾಚ್ ರೆಫ್ರಿ ಆಗಿದ್ದ ರಘು ಹೇಳಿದ್ರೂ ಯಾರೂ ಕೇಳಲಿಲ್ಲ ನಿಜ. ಆದರೆ ಮೇಲಿದ್ದವರು ಬಿಡಬೇಕಿತ್ತೋ? ಕೆಳಗೆ ಬಿದ್ದಿದ್ದ ರಕ್ಷಿತಾ ಶೆಟ್ಟಿ ಬಿಡಬೇಕಿತ್ತೋ? ಏನನ್ನೋ ಮಾಡಲು ಹೋಗಿ ಮೂವರೂ ತಪ್ಪು ಮಾಡಿದ್ದಾರೆ ಅಂತ ರಾಶಿಕಾ, ಸ್ಪಂದನ ಪರ ಬ್ಯಾಟ್ ಮಾಡಿದ್ರಿ ಅನಿಸಿತು. ಹಾಗೆ ಗಿಲ್ಲಿ ದನಿ ಎತ್ತಿದ್ದನ್ನು ನೀವು ಹೆಮ್ಮೆಯಿಂದ ಹೇಳ್ಬೇಕಿತ್ತು. ಜತೆಗೆ ಪ್ರಿನ್ಸಿಪಾಲ್ ಹೇಳಿದಾಗ ಬಿಡಬೇಕಿತ್ತು ಅನ್ನೋದನ್ನೇ ನೀವು ಆಟಗಾರರಿಗೆ ಹೇಳಲಿಲ್ಲ. ಪಂಚಾಯ್ತಿ ಇಷ್ಟ ಆಗಲಿಲ್ಲ. ಸಾಧ್ಯ ಆದರೆ ಮುಂದೆ ಕರೆಕ್ಟ್ ಮಾಡ್ಕೊಳಿ" ಎಂದು ತಮ್ಮ ಪುಟದಲ್ಲಿ ಬರೆದುಕೊಂಡಿದ್ದಾರೆ.