ನ್ಯೂಸ್

'ದೊಡ್ಮನೆ' ಮಂದಿಗೆ ಇನ್ನೂ ಅರ್ಥವಾಗಿಲ್ಲ ಅಸಲಿ ಆಟ! ಇದು ಹೀಗೆ ಮುಂದುವರಿದ್ರೆ... | BBK12

BBK12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್​ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ ಎರಡು ವಾರವೇ ಕಳೆದಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಕಿಚ್ಚ ಸುದೀಪ್ ಅವರೇ ನಡೆಸಿಕೊಡುತ್ತಿರುವುದು ಖುಷಿ ವಿಷಯ. ಮನೆಯೊಳಗೆ ಒಟ್ಟು 19 ಸ್ಪರ್ಧಿಗಳು ಎಂಟ್ರಿಕೊಟ್ಟಿದ್ದೇ ಆದರೂ ಆಟದ ಗತ್ತು, ಗಮ್ಮತ್ತು ಮಾತ್ರ ಇಂದಿಗೂ ಶುರುವಾಗಿಲ್ಲ ಎಂಬುದೇ ಸದ್ಯ ಬೇಸರದ ಸಂಗತಿ.

ಯಾವಾಗ ಅಸಲಿ ಆಟ?

ಮೊದಲನೇ ವಾರ ಒಂದು ರೀತಿ ಸಾಗಿದರೆ, ಎರಡನೇ ವಾರದಲ್ಲಿ ಒಂದಷ್ಟು ಅಡಚಣೆಗಳು ಉಂಟಾಗಿದ್ದು ವೀಕ್ಷಕರಿಗೆ ಗೊತ್ತೇ ಇದೆ. ಪರಿಸರ ನಿಯಮ ಉಲ್ಲಂಘಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್​ ಮನೆಗೆ ಬೀಗ ಜಡಿಯಲಾಗಿತ್ತು. ಆದರೆ, ಅದರಿಂದ ತಾತ್ಕಾಲಿಕ ಮುಕ್ತಿ ಪಡೆದ ಬಳಿಕ ಶೋ ಅನ್ನು ಪುನಃ ಆರಂಭಿಸಲಾಯಿತು. ಈ ವಿಚಾರವನ್ನು ಎರಡನೇ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ಆರಂಭದಲ್ಲೇ ಪ್ರಸ್ತಾಪಿಸಿದರು​. ನಂತರದಲ್ಲಿ, ಸ್ಪರ್ಧಿಗಳಿಗೆ ಕಿವಿಮಾತು ಹೇಳಿದ ಸುದೀಪ್​, ನಿಮಗ್ಯಾರಿಗೂ ಕಾರ್ಯಕ್ರಮದ ಗಾಂಭೀರ್ಯತೆಯೇ ಇನ್ನೂ ಅರ್ಥವಾಗಿಲ್ಲ ಏಕೆ? ಇಲ್ಲಿಂದ ಹೊರ ಹೋದ ಮೇಲೆ ನಾನೇನು ಮಾಡಲಿಲ್ಲ ಅಂತ ಚಿಂತಿಸಬೇಡಿ ಎಂದು ಹೇಳಿದರು. ಈ ಮೂಲಕ ಮನೆಯಲ್ಲಿ ಇನ್ನೂ ಆಟದ ಕಿಚ್ಚು ಶುರುವಾಗಿಲ್ಲ ಎಂಬುದನ್ನು ಪರೋಕ್ಷವಾಗಿ ನುಡಿದರು.

ಮನೆಯೊಳಗೆ ಬಂದು 13 ದಿನ ಕಳೆದರೂ ಅಸಲಿ ಆಟದ ಗತ್ತು, ಗಮ್ಮತ್ತು ಬಿಗ್ ಮಂದಿಗೆ ಅರ್ಥವಾಗದೆ ಇರುವುದು ನಿಜಕ್ಕೂ ಅಚ್ಚರಿಯೇ. ಈ ಹಿಂದಿನ ಸೀಸನ್​ ಸ್ಪರ್ಧಿಗಳಲ್ಲಿ ಕಂಡ ಉತ್ಸಾಹ, ಹುರುಪು, ಕಿಚ್ಚು 12ನೇ ಆವೃತ್ತಿಯ ಸದಸ್ಯರಲ್ಲಿ ಕಾಣಿಸದೆ ಇರುವುದು ಗೊಂದಲಮಯ. ಸ್ವತಃ ಸುದೀಪ್​ ಅವರೇ ಈ ವಿಚಾರವನ್ನು ಮನೆ ಮಂದಿಗೆ ಅರ್ಥ ಮಾಡಿಸಲು ಮುಂದಾಗಿದ್ದು ಗಮನಾರ್ಹ. ಅವರ ಬೆನ್ನಿಗೆ ಇವರು ನಿಲ್ಲುವುದು, ಅವರ ಸ್ಪಷ್ಟತೆಗೆ ಇವರು ಸಾಕ್ಷಿಯಾಗುವುದು, ತಪ್ಪುಗಳ ಮೇಲೆ ತಪ್ಪುಗಳ ಮಾಡುವುದು, ನಿಯಮ ಉಲ್ಲಂಘಿಸಿ ಆಗಲ್ಲ ಎನ್ನುತ ವೀಕೆಂಡ್​ಗೆ ಹೆಜ್ಜೆ ಇಡುತ್ತಿರುವುದು ಎಲ್ಲೋ ಆಟದ ಮಜಾವನ್ನು ಮಾತ್ರ ದೂರವಿಡದೆ, ವೀಕ್ಷಕರ ಮೆಚ್ಚುಗೆಯಿಂದಲೂ ದೂರ ಸರಿಯುವಂತೆ ತೋರುತ್ತಿದೆ.

ಅಲರ್ಟ್​ ಆಗಬೇಕು 'ಬಿಗ್' ಮಂದಿ!

ಈಗಾಗಲೇ ಟ್ವಿಸ್ಟ್​ಗಳ ಮೇಲೆ ಟ್ವಿಸ್ಟ್​ ನೀಡಿರುವ ಬಿಗ್ ಬಾಸ್​, ಮೂರನೇ ವಾರಕ್ಕೆ ಫಿನಾಲೆ ಇರಲಿದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಸುದೀಪ್​ ಕೂಡ ಶನಿವಾರದ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಗುಂಪು ಗುಂಪಾಗಿ ನೀವು ಮನೆಯಿಂದ ಹೊರಹೋಗಬಹುದು? ಏನು ಬೇಕಾದರೂ ಆಗಬಹುದು ಎಂಬ ಶಾಕಿಂಗ್ ಸುಳಿವುಗಳನ್ನು ನೀಡಿದ್ದಾರೆ. ಆದರೂ, ಸಣ್ಣ-ಪುಟ್ಟ ಜಗಳಗಳಿಂದ, ಮಾತಿನ ಭರಾಟೆಯಲ್ಲಿ ಮುಳುಗಿರುವ ಸ್ಪರ್ಧಿಗಳು ಕಿಚ್ಚನ ಮಾತನ್ನು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಅಕಸ್ಮಾತ್​, ತಮ್ಮ ಪ್ರತಿಭೆ, ಆಟದ ವೈಖರಿ, ಸಾಮರ್ಥ್ಯವನ್ನು ಪ್ರದರ್ಶಿಸದೆ ಹೀಗೆ ಮುಂದುವರಿದ್ರೆ, ಶೀಘ್ರವೇ ಮಾಸ್​ ಎಲಿಮಿನೇಷನ್ ಆಗಿ ಹೊರಬಂದು, ಪಶ್ಚಾತಾಪ ಪಡುವ ಸಾಧ್ಯತೆಗಳು ಹೆಚ್ಚಿವೆ ಎಂದೇ ಹೇಳಬಹುದು.