ನ್ಯೂಸ್

BBK11: 'ಬಿಗ್' ಫಿನಾಲೆ ವೇದಿಕೆ ಹತ್ತಿದ ಹನುಮಂತು​! ಹಳ್ಳಿ ಹೈದನ ಜತೆಗೆ ಈ ನಾಲ್ವರು ಟ್ರೋಫಿ ಸೆಣಸಾಟಕ್ಕೆ?

BBK11: ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್​ 11ರ ಆಟದ ತೆರೆಗೆ ಕೇವಲ ಎರಡು ವಾರಗಳಷ್ಟೇ ಬಾಕಿ ಉಳಿದಿದೆ. ಕಳೆದ ವಾರ ಮನೆಯಿಂದ ಚೈತ್ರಾ ಕುಂದಾಪುರ ಎಲಿನಿನೇಟ್ ಆಗಿ, ಫಿನಾಲೆ ಓಟದಿಂದ ಹೊರಬಿದ್ದಿದ್ದಾರೆ. ಈಗ ಉಳಿದ ಸ್ಪರ್ಧಿಗಳ ಮಧ್ಯೆ ಬಿರುಸಿನ ಪೈಪೋಟಿ ಶುರುವಾಗಿದೆ. ಸ್ನೇಹ, ಸಂಬಂಧವನ್ನು ಕಾಪಾಡಿಕೊಂಡು ಬಂದಿದ್ದ ಕೆಲವರು ಫಿನಾಲೆ ಜಿದ್ದಾಜಿದ್ದಿನಲ್ಲಿ ಅದನ್ನೆಲ್ಲ ಬದಿಗಿಟ್ಟು ಎದುರು-ಬದುರು ಸೆಣಸಾಡುತ್ತಿದ್ದಾರೆ. ಮೊದಲ ದಿನದಿಂದಲೂ ಸಾಕಷ್ಟು ಟ್ವಿಸ್ಟ್​, ಜಟಾಪಟಿ, ವಾಗ್ವಾದ, ಆರೋಪ-ಪ್ರತ್ಯಾರೋಪಗಳಿಂದಲೇ ಇಲ್ಲಿಯವರೆಗೆ ಸಾಗಿ ಬಂದಿರುವ ಸ್ಪರ್ಧಿಗಳು ಸದ್ಯ ಗೆಲುವಿನ ಹಂತ ತಲುಪಲು ಸನ್ನಿಹಿತದಲ್ಲಿದ್ದಾರೆ. ಬಿಗ್ ಬಾಸ್​ 11ರ ಒಟ್ಟು 20 ಘಟಾನುಘಟಿ ಸ್ಪರ್ಧಿಗಳ ಪೈಕಿ ಈಗ ಉಳಿದಿರುವುದು ತ್ರಿವಿಕ್ರಮ್​, ಉಗ್ರಂ ಮಂಜು, ರಜತ್, ಭವ್ಯ, ಮೋಕ್ಷಿತಾ, ಧನರಾಜ್​ ಮತ್ತು ಹನುಮಂತು ಮಾತ್ರ.

ಫಸ್ಟ್​ ಆಫ್​ ಆಟ

ಕಳೆದ ವಾರ ಫಿನಾಲೆ ಟಿಕೆಟ್ ಗೆದ್ದು ಇಡೀ ಮನೆಯವರ ಹುಬ್ಬೇರಿಸಿದ ಹಳ್ಳಿ ಹೈದ ಹನುಮಂತು, ಪ್ರೇಕ್ಷಕರಲ್ಲಿದ್ದ ಬಿಗ್ ಬಾಸ್ ಆಟದ ಲೆಕ್ಕಾಚಾರವನ್ನು ಬದಲಿಸದೆ ಇದೀಗ ನೇರವಾಗಿ ಗ್ರ್ಯಾಂಡ್ ಫಿನಾಲೆ ವೇದಿಕೆಯನ್ನು ಹತ್ತಿದ ಮೊದಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ. ಅಸಲಿಗೆ ಮನೆಯೊಳಗಿನ ಸ್ಪರ್ಧಿಗಳ ಲೆಕ್ಕಾಚಾರವನ್ನು ತಲೆಕೆಳಗಾಗಿಸಿರುವ ಹನುಮಂತು, ತಾನು ಯಾವತ್ತೋ ಆಟವನ್ನು ಚಾಲು ಮಾಡಿದ್ದೀನಿ. ಇವರಿಗೆಲ್ಲಾ ಇವತ್ತು ಅರಿವಾಗಿದೆ ಎಂಬುದನ್ನು ತಮ್ಮ ಮಾತು, ಆಟದ ಮೂಲಕವೇ ತೋರಿದ್ದಾರೆ. ಸದ್ಯ ಉಳಿದ ನಾಲ್ಕು ಸ್ಥಾನಕ್ಕೆ ಬಿರುಸಿನ ಪೈಪೋಟಿ ನಡೆಯುತ್ತಿದ್ದು, ತ್ರಿವಿಕ್ರಮ್, ಮಂಜು, ಧನರಾಜ್, ಮೋಕ್ಷಿತಾ, ಗೌತಮಿ ಮತ್ತು ಭವ್ಯ ಫಿನಾಲೆ ಜಿದ್ದಾಜಿದ್ದಿಯಲ್ಲಿ ತೊಡಗಿದ್ದಾರೆ.

ಸ್ನೇಹ-ಸಂಬಂಧ ದೂರ ದೂರ

ಬಿಗ್ ಬಾಸ್ ಆರಂಭವಾದ ಮೊದಲ ದಿನದಿಂದಲೂ ಆಯಾ ಸ್ಪರ್ಧಿಗಳ ಆಟವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ವೀಕ್ಷಕರು, ತಮ್ಮ ತಮ್ಮ ಅಭಿಪ್ರಾಯಗಳನ್ನು ಜಾಲತಾಣಗಳಲ್ಲಿ ವ್ಯಕ್ತಪಡಿಸುತ್ತ ಬಂದಿದ್ದಾರೆ. ಮೊದಲಾರ್ಧ ಮನೆ ಮಂದಿಯನ್ನೇ ಹಿಂದಿಕ್ಕಿ ವೀಕ್ಷಕರ ಕಣ್ಣಿನಲ್ಲಿ ಪ್ರಬಲ ಸ್ಪರ್ಧಿಗಳಾಗಿ ಗುರುತಿಸಿಕೊಂಡಿದ್ದ ತ್ರಿವಿಕ್ರಮ್ ಹಾಗೂ ಮಂಜು, ದ್ವಿತೀಯಾರ್ಧದಲ್ಲಿಯೂ ಅದೇ ಪಟ್ಟಿಯನ್ನು ಉಳಿಸಿಕೊಳ್ಳುವಲ್ಲಿ ಹಿಂದುಳಿದಿದ್ದಾರೆ. ಈ ಸಾಲಿನಲ್ಲಿ ತ್ರಿವಿಕ್ರಮ್ ಒಂದು ಹಂತ ಮುಂದಿದ್ದರೆ, ಮಂಜು ಮಾತ್ರ ಸ್ನೇಹ-ಸಂಬಂಧ ಅನ್ನೋ ಒಂದಷ್ಟು ವಿಚಾರಗಳಿಂದ ಭಾರೀ ಜಿದ್ದಾಜಿದ್ದಿಯಿಂದ ಕೊಂಚ ಹಿಂದೆ ಉಳಿದಿದ್ದಾರೆ. ಇಷ್ಟಿದ್ದರೂ ನೋಡುಗರಲ್ಲಿ ಮಂಜು ಆಟದ ವೈಖರಿ ನೆನಪಿದೆ. ಹೀಗಾಗಿ ಆ ನಾಲ್ವರ ಪೈಕಿ ಉಗ್ರಂ ಮಂಜು ಮತ್ತು ತ್ರಿವಿಕ್ರಮ್ ಹೆಸರು ಇರಲಿದೆ ಎಂಬುದು ನೆಟ್ಟಿಗರ ಅಭಿಪ್ರಾಯ, ಅನಿಸಿಕೆಗಳ ಒಂದು ಭಾಗ.

ನೇರ ಜಿದ್ದಾಜಿದ್ದಿ

ಇನ್ನೂ 50 ದಿನಗಳ ನಂತರ ಮನೆಯೊಳಗೆ ಎಂಟ್ರಿಕೊಟ್ಟ ರಜತ್​, ತನ್ನ ಖಡಕ್ ಮಾತು ಮತ್ತು ಆಟದಿಂದಲೇ ಎಲ್ಲಾ ಸ್ಪರ್ಧಿಗಳಿಗೂ ಸಖತ್ ಪೈಪೋಟಿ ಕೊಡುತ್ತ ಬಂದಿದ್ದಾರೆ. 50 ದಿನಗಳ ನಂತರ ವೈಲ್ಡ್​ ಕಾರ್ಡ್​ ಸ್ಪರ್ಧಿಯಾಗಿ ಅಖಾಡಕ್ಕಿಳಿದ ರಜತ್​, ತಾವು ಕೂಡ ಒಬ್ಬ ಪ್ರಬಲ ಸ್ಪರ್ಧಿ, ಈ ಬಾರಿಯ ಬಿಗ್ ಬಾಸ್​ 11ರ ಟ್ರೋಫಿ ಮನೆಗೆ ಎತ್ತಿಕೊಂಡು ಹೋಗುವುದು ಖಚಿತ ಎಂಬ ಭರವಸೆಯ ಮಾತುಗಳನ್ನು ಸುದೀಪ್ ಹಾಗೂ ಮನೆಯಲ್ಲಿರುವ ಇತರೆ ಸದಸ್ಯರ ಮುಂದೆಯೇ ಗಟ್ಟಿಯಾಗಿ ಹೇಳಿರುವುದು ನೋಡುಗರಲ್ಲಿ ಅಚ್ಚರಿ ಮೂಡಿಸಿದೆ. ನೇರ ನುಡಿ, ಕಿಡಿ, ಆಟದಲ್ಲಿ ಸಿಡಿಮಿಡಿ ಆಗಿರುವ ರಜತ್​ ಕೂಡ ನಾಲ್ವರಲ್ಲಿ ಒಬ್ಬರು ಎಂಬ ಮಾತುಗಳು ಕೇಳಿಬಂದಿವೆ. ಇನ್ನೂ ಈ ಮೂವರ ಜತೆಗೆ ಭವ್ಯ ಅಥವಾ ಮೋಕ್ಷಿತಾ ಹೆಸರು ಓಡಾಡುತ್ತಿದ್ದು, ಯಾರು ಎಂಬುದು ಇನ್ನೂ ಕೆಲವೇ ದಿನಗಳಲ್ಲಿ ಸ್ಪಷ್ಟವಾಗಿ ತಿಳಿಯಲಿದೆ.