BBK 12: ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ (Bigg Boss Kannada) ಸೀಸನ್ 12ಕ್ಕೆ ಇದೀಗ ಅದ್ಧೂರಿ ಚಾಲನೆ ಸಿಕ್ಕಿದ್ದು, ಎಂದಿನಂತೆ ಕಾರ್ಯಕ್ರಮವನ್ನು ನಟ ಸುದೀಪ್ ಅವರೇ ನಡೆಸಿಕೊಡಲಿದ್ದಾರೆ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಕಾರ್ಯಕ್ರಮದ 12ನೇ ಆವೃತ್ತಿಗೆ ಒಟ್ಟು 19 ಮಂದಿ ದೊಡ್ಮನೆಯನ್ನು ಪ್ರವೇಶಿಸಿದ್ದಾರೆ.
ನಟ ಸುಧೀ, ಮಂಜು ಭಾಷಿಣಿ, ರಕ್ಷಿತಾ, ಗಿಲ್ಲಿ ನಟ, ಚಂದ್ರಪ್ರಭಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಜನಪ್ರಿಯತೆ ಪಡೆದುಕೊಂಡ ಮುಖಗಳೇ ಈ ಬಾರಿಯ ಬಿಗ್ ಬಾಸ್ 12ಕ್ಕೆ ಎಂಟ್ರಿಕೊಟ್ಟಿದ್ದಾರೆ. 'ಬಿಗ್' ಮನೆಗೆ ಪ್ರವೇಶಿಸಿ ಇನ್ನೂ 24 ಗಂಟೆಗಳೂ ಕಳೆದಿಲ್ಲ! ಅದಾಗಲೇ ದೊಡ್ಮನೆ ಮಂದಿಗೆ ಸಖತ್ ಟ್ವಿಸ್ಟ್ ಒಂದು ಎದುರಾಗಿದೆ.
ಒಬ್ಬರನೊಬ್ಬರು ಪರಸ್ಪರ ಪರಿಚಯ ಮಾಡಿಕೊಳ್ಳುವ ಮೊದಲೇ ಬಿಗ್ ಬಾಸ್, ಮನೆ ಮಂದಿಗೆಲ್ಲ ಶಾಕ್ ಕೊಟ್ಟಿದ್ದಾರೆ. ಹಾಯ್ ಎಂದು ಹೇಳುವ ಮುನ್ನ ಒಬ್ಬರಿಗೆ ಇಂದು ಗುಡ್ಬೈ ಹೇಳುವ ಸಮಯ ಎಂದಿದ್ದಾರೆ. ಈ ಕುರಿತಂತೆ 19 ಸ್ಪರ್ಧಿಗಳು ಚರ್ಚಿಸಿ, ಒಮ್ಮತದಿಂದ ಯಾರು ಮನೆಯಿಂದ ಹೊರ ಹೋಗಬೇಕು ಎಂಬುದನ್ನು ನಿರ್ಧರಿಸಲು ಬಿಗ್ ಬಾಸ್ ಸೂಚಿಸಿದ್ದಾರೆ. ಇಂದು ಹೊರಬಂದಿರುವ ಮೊದಲ ಪ್ರೋಮೋ ಪ್ರಕಾರ, ಮನೆ ಮಂದಿಯೆಲ್ಲ ಸೇರಿ ರಕ್ಷಿತಾ ಶೆಟ್ಟಿ, ಸ್ಪಂದನಾ ಮತ್ತು ಮಲ್ಲು ನಿಪಾನಲ್ ಮೂವರಲ್ಲಿ ಒಬ್ಬರ ಹೆಸರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚಿಸುತ್ತಿರುವುದು ಕಂಡುಬಂದಿದೆ.