ನವದೆಹಲಿ: ಸಂಸತ್ ಆವರಣದಲ್ಲಿ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಗುರುವಾರ ನಡೆದ ಘರ್ಷಣೆಯಲ್ಲಿ ಇಬ್ಬರು ಬಿಜೆಪಿ ಸಂಸದರ ತಲೆಗೆ ಪೆಟ್ಟಾಗಿದ್ದು, ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಡಿಶಾದ ಬಾಲಸೋರ್ ಕ್ಷೇತ್ರದ ಸಂಸದ ಪ್ರತಾಪ್ ಸಾರಂಗಿ (69) ಹಾಗೂ ಉತ್ತರಪ್ರದೇಶದ ಸಂಸದ ಮುಕೇಶ್ ರಜಪೂತ್ ಗಾಯಾಳುಗಳು.
ಸಾರಂಗಿ ಅವರ ಹಣೆಯಲ್ಲಿ ಆಳವಾದ ಗಾಯವಾಗಿ, ತೀವ್ರ ರಕ್ತಸ್ರಾವವಾಗಿದ್ದು, ಹೊಲಿಗೆ ಹಾಕಲಾಗಿದೆ. ಆಸ್ಪತ್ರೆಗೆ ಕರೆತಂದಿದ್ದಾಗ ಅವರ ರಕ್ತದೊತ್ತಡ ಹಾಗೂ ಆತಂಕ ಅಧಿಕವಾಗಿತ್ತು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅಜಯ್ ಶುಕ್ಲಾ ತಿಳಿಸಿದ್ದಾರೆ. ಮುಖೇಶ್ ತಲೆಗೂ ಗಾಯವಾಗಿದ್ದು, ಅವರು ಮೂರ್ಛೆ ಹೋಗಿದ್ದರು. ಆದರೆ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಜಾಗೃತಾವಸ್ಥೆಗೆ ಬಂದಿದ್ದು, ಅವರ ರಕ್ತದೊತ್ತಡದಲ್ಲೂ ಹೆಚ್ಚಳ ಕಂಡುಬಂದಿತ್ತು. ಇಬ್ಬರಿಗೂ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ರಕ್ತದೊತ್ತಡ, ನೋವು, ಆತಂಕ ತಗ್ಗಿಸಲು ಔಷಧ ನೀಡಲಾಗಿದೆ. ತಲೆಯ ಸಿ.ಟಿ. ಸ್ಕಾ್ಯನ್, ಹೃದಯಕ್ಕೆ ಸಂಬಂಧಿತ ಪರೀಕ್ಷೆಗಳನ್ನು ನಡೆಸಲಾಗಿದ್ದು, ಅವರನ್ನು ಸ್ಥಿರ ಪರಿಸ್ಥಿತಿಗೆ ತರಲು ಪ್ರಯತ್ನಿಸಲಾಗುತ್ತಿದೆ ಎಂದು ವೈದ್ಯರು ತಿಳಿಸಿದರು.
ಆಗಿದ್ದೇನು?: ಡಾ.ಬಿ.ಆರ್.ಅಂಬೇಡ್ಕರ್ ಅವರ ಬಗ್ಗೆ ಗೃಹ ಸಚಿವ ಅಮಿತ್ ಷಾ ಅವರು ಸದನದಲ್ಲಿ ಮಂಗಳವಾರ ಆಕ್ಷೇಪಾರ್ಹವಾಗಿ ಮಾತನಾಡಿದ್ದಾರೆ ಎನ್ನಲಾದ ವಿಚಾರವಾಗಿ ಗುರುವಾರ ನಡೆದ ಪ್ರತಿಭಟನೆ ವೇಳೆ ಸಂಸತ್ ಆವರಣದಲ್ಲಿ ಆಡಳಿತ-ವಿಪಕ್ಷ ಸದಸ್ಯರ ನಡುವೆ ಸಂಘರ್ಷ ಉಂಟಾಗಿದ್ದು, ಈ ವೇಳೆ ಪ್ರತಾಪ್ ಚಂದ್ರ ಸಾರಂಗಿ ಗಾಯಗೊಳ್ಳಲು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಆದರೆ ರಾಹುಲ್ ಗಾಂಧಿ ಈ ಆರೋಪವನ್ನು ನಿರಾಕರಿಸಿದ್ದಾರೆ. ಸಂಸದರ ಪ್ರವೇಶ-ನಿರ್ಗಮನಕ್ಕೆ ಇರುವ ಮಕರ ದ್ವಾರ ಬಳಿಯಿಂದ ಹೋಗುವ ಬದಲು ಐಎನ್ಡಿಐಎ ಮೈತ್ರಿಕೂಟದ ಸದಸ್ಯರು ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದ ಮೂಲಕ ಸಾಗಲು ಯತ್ನಿಸಿದಾಗ ಈ ಸಂಘರ್ಷ ಉಂಟಾಯಿತು. ‘ಸಾರಂಗಿ ಅವರ ಹಣೆಗೆ ಗಾಯವಾಗಿದೆ, ನೀವು ಒಬ್ಬ ವೃದ್ಧ ವ್ಯಕ್ತಿಯನ್ನು ತಳ್ಳಿದ್ದೀರಿ, ಗೂಂಡಾಗಿರಿ ತೋರುವುದಕ್ಕೆ ನಿಮಗೆ ನಾಚಿಕೆ ಆಗುತ್ತಿಲ್ಲವೇ?’ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಕಿಡಿಕಾರಿದ್ದಾರೆ.
ಷಾ ವಿರುದ್ಧ ಖರ್ಗೆ ಹಕ್ಕುಚ್ಯುತಿ ಗೊತ್ತುವಳಿ: ಸಂವಿಧಾನ ಕುರಿತ ಚರ್ಚೆಯ ವೇಳೆ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ವಿರುದ್ಧ ಅವಮಾನಕರವಾಗಿ ಮಾತನಾಡಿದರೆನ್ನಲಾದ ಗೃಹ ಸಚಿವ ಅಮಿತ್ ಷಾ ವಿರುದ್ಧ ಸದನದ ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ 188ನೇ ನಿಯಮದ ಪ್ರಕಾರ ಗುರುವಾರ ಹಕ್ಕುಚ್ಯುತಿ ಗೊತ್ತುವಳಿ ನೋಟಿಸ್ ಮಂಡಿಸಿದರು.
ರಾಹುಲ್ ವಿರುದ್ಧ ಎಫ್ಐಆರ್: ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಷಾ ಅವಮಾನಿಸಿದ್ದಾರೆ ಎಂಬ ವಿಚಾರವಾಗಿ ಸಂಸತ್ನಲ್ಲಿ ನಡೆದ ಸಂಘರ್ಷ ಹಾಗೂ ಸಂಸದರಿಬ್ಬರು ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ದೆಹಲಿ ಪೊಲೀಸರು ಗುರುವಾರ ಎಫ್ಐಆರ್ ದಾಖಲಿಸಿದ್ದಾರೆ. ಬಿಜೆಪಿ ಸಂಸದರಾದ ಅನುರಾಗ್ ಠಾಕೂರ್, ಬಾನ್ಸುರಿ ಸ್ವರಾಜ್ ಹಾಗೂ ಹೇಮಂಗ್ ಜೋಶಿ ಜತೆಯಾಗಿ ಸಂಸತ್ ಬೀದಿಯ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಈ ಕ್ರಮಕೈಗೊಂಡಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದೂರು ಸ್ವೀಕರಿಸಿ, ಪ್ರಕರಣ ದಾಖಲಿಸಿಕೊಂಡಿದ್ದರು.
ಸಂಸದೆ ಆರೋಪ: ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಸತ್ ಆವರಣದಲ್ಲಿ ತಮ್ಮ ಜತೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿಯ ನಾಗಾಲ್ಯಾಂಡ್ ಸಂಸದೆ ಫಂಗ್ನಾನ್ ಕೊನ್ಯಾಕ್ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ಇಬ್ಬರು ಸಂಸದರನ್ನು ಗಾಯಗೊಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಿಗೇ ಈಕೆ ಈ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿ ಮುಜುಗರ ಅನಿಸುವಷ್ಟು ಹತ್ತಿರ ಬಂದಿದ್ದು, ಅದು ನನ್ನನ್ನು ತೀವ್ರ ಕಸಿವಿಸಿಗೊಳಿಸಿತು ಎಂದು ಸಂಸದೆ ಹೇಳಿದ್ದಾರೆ. ಈ ಪ್ರಕರಣ ಕುರಿತಂತೆ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಅವರಿಗೂ ಪತ್ರ ಬರೆದು ಗಮನಕ್ಕೆ ತಂದಿದ್ದಾರೆ. ಈಕೆ ನಾಗಾಲ್ಯಾಂಡ್ನಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಪ್ರಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು.
ಆರೋಗ್ಯ ವಿಚಾರಿಸಿದ ಪ್ರಧಾನಿ: ಗಾಯಾಳು ಸಂಸದರಾದ ಸಾರಂಗಿ ಹಾಗೂ ರಜಪೂತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿ ಯೋಗಕ್ಷೇಮ ವಿಚಾರಿಸಿದ್ದಾರೆ. ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪ್ರಲ್ಹಾದ ಜೋಶಿ ಅವರು ಆಸ್ಪತ್ರೆಗೆ ತೆರಳಿ ಗಾಯಾಳು ಸಂಸದರ ಆರೋಗ್ಯ ವಿಚಾರಿಸಿದರು.
ಕಾನೂನು ಏನು ಹೇಳುತ್ತದೆ?: ನಿಯಮದ ಪ್ರಕಾರ ಲೋಕಸಭೆ ಸ್ಪೀಕರ್ ಅನುಮತಿ ನೀಡಿದರೆ ಪ್ರಕರಣ ಬಗ್ಗೆ ಪೊಲೀಸರು ತನಿಖೆ ನಡೆಸಬಹುದು. ಆದರೆ ವಿರೋಧ ಪಕ್ಷದ ನಾಯಕ ಹುದ್ದೆಯಲ್ಲಿರುವ ಕಾರಣಕ್ಕೆ ರಾಹುಲ್ ಗಾಂಧಿಗೆ ಯಾವುದೇ ವಿಶೇಷ ಅಧಿಕಾರ, ಹಕ್ಕು ಇರುವುದಿಲ್ಲ. ಇದೇ ವೇಳೆ, ಹಲ್ಲೆಗೆ ಒಳಗಾದ ಬಿಜೆಪಿ ಸಂಸದರು ತಮ್ಮ ವಿಶೇಷಾಧಿಕಾರ ಉಲ್ಲಂಘನೆಯಾಗಿದೆ ಎಂದು ವಾದ ಮಂಡಿಸಬಹುದು. ಇಂಥ ಪ್ರಕರಣಗಳಲ್ಲಿ ವಿಡಿಯೋ ಸಾಕ್ಷ್ಯಾಧಾರ ಮುಖ್ಯವಾಗುತ್ತದೆ. ರಾಹುಲ್ ಹಲ್ಲೆ ಮಾಡಿರುವ ಬಗ್ಗೆ ವಿಡಿಯೋ ಪುರಾವೆ ಇಲ್ಲದಿದ್ದರೆ ಪ್ರಕರಣ ರ್ತಾಕ ಅಂತ್ಯ ಕಾಣಲು ಸಾಧ್ಯವಿಲ್ಲ.
ವಿಶೇಷಾಧಿಕಾರ ಉಲ್ಲಂಘನೆ ಹೇಗೆ?: ಸಂಸತ್ ಸದಸ್ಯರ ಕರ್ತವ್ಯ ನಿರ್ವಹಣೆ ಸಮಯದಲ್ಲಿ ಅಡ್ಡಿ ಮಾಡುವುದು, ಸದನಕ್ಕೆ ಬರುವಾಗ ಅಥವಾ ಹೋಗುವಾಗ ಅಡ್ಡಿಪಡಿಸುವುದು, ಕಿರುಕುಳ, ಹಲ್ಲೆ ಇನ್ನಿತರ ಘಟನೆಗಳು ಸಂಸದರ ವಿಶೇಷಾಧಿಕಾರದ ಉಲ್ಲಂಘನೆ ಆಗುತ್ತದೆ. ಆದರೆ ಸದಸ್ಯರು ಯಾವುದೇ ಸಂಸದೀಯ ಕರ್ತವ್ಯವನ್ನು ನಿರ್ವಹಿಸದಿದ್ದಾಗ ಇದು ಅನ್ವಯ ಆಗುವುದಿಲ್ಲ.
ರಾಹುಲ್ ಬಂಧನ ಸಾಧ್ಯವೇ?: ರಾಹುಲ್ ಬಂಧನಕ್ಕೆ ಸಂಸತ್ನ ಉನ್ನತ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಾಗುತ್ತದೆ. ಇಂಥ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಪೊಲೀಸರು ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸುವುದಿಲ್ಲ. ಇದು ಸರಳ ಹಲ್ಲೆ ಪ್ರಕರಣವಾಗಿದೆ. ಆದರೆ ಈ ಪ್ರಕರಣಗಳಲ್ಲೂ 7 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ತುಂಬಾ ಗಂಭೀರ ಪರಿಸ್ಥಿತಿಯಲ್ಲಿ ಮಾತ್ರ ಬಂಧನ ಮಾಡಬಹುದಾಗಿದೆ. ಶಾಂತಿ ಕದಡಬಹುದು ಅಥವಾ ಗಲಭೆಗೆ ಕಾರಣವಾಗಬಹುದು ಎಂಬ ಭೀತಿ ಎದುರಾದರೆ ಮಾತ್ರ ಸಂಸದರನ್ನು ಬಂಧಿಸಲು ಅವಕಾಶ ಇದೆ ಎಂದು ಕಾನೂನು ತಜ್ಞರು ಹೇಳಿದ್ದಾರೆ. ಸರಳ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದರೆ 1 ವರ್ಷದವರೆಗೆ ಶಿಕ್ಷೆ ವಿಧಿಸಲು ಅವಕಾಶ ಇದೆ. ಸೆಕ್ಷನ್ 110ರ ಅಡಿಯಲ್ಲಿ ಬೆದರಿಕೆ ಅಥವಾ ಕೊಲೆ ಪ್ರಯತ್ನದ ಪ್ರಕರಣ ದಾಖಲಾದರೆ 3 ವರ್ಷಗಳವರೆಗೆ ಜೈಲು ಶಿಕ್ಷೆಗೆ ಅವಕಾಶವಿದೆ. ಆದಾಗ್ಯೂ, ಜಾಮೀನು ಪಡೆಯಲು ಇದರಲ್ಲಿ ಅವಕಾಶ ಇರಲಿದೆ.
ಸಂಸದರ ಹಕ್ಕುಗಳೇನು?
ಸಂಸತ್ತು ಕುಸ್ತಿಯ ಕಣವಲ್ಲ, ದೈಹಿಕ ಶಕ್ತಿ ಪ್ರದರ್ಶನದ ಸ್ಥಳವೂ ಅಲ್ಲ. ಸಾರಂಗಿ ಅವರಿಗಾದ ಗಾಯಗಳ ಪರಿಶೀಲನೆ ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
| ಕಿರಣ್ ರಿಜಿಜು ಸಂಸದೀಯ ವ್ಯವಹಾರಗಳ ಸಚಿವ