ಭುವನೇಶ್ವರ: ಮನೆಯಲ್ಲಿ ಬೆಕ್ಕು ಮತ್ತು ನಾಯಿಗಳನ್ನು ಸಾಕುವುದನ್ನು ನಾವು ನೋಡಿದ್ದೇವೆ. ಆದರೆ, ಬಾವಲಿ ಸಾಕುವುದನ್ನು ಎಂದಾದರೂ ನೋಡಿದ್ದೀರಾ? ಸಾಮಾನ್ಯವಾಗಿ ಯಾರೂ ಕೂಡ ಬಾವಲಿ ಸಾಕುವುದಿಲ್ಲ. ಅದೊಂದು ವಿಚಿತ್ರ ಜೀವಿ. ಕತ್ತಲೆಯಲ್ಲೇ ವಾಸಿಸುವ ಜೀವಿಯನ್ನು ಕಂಡರೆ ಅನೇಕರು ಹೆದರುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಬಾವಲಿ ಜತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದ್ದಾನೆ.
ಹೌದು, ಒಡಿಶಾದ ಬಾಲಾಸೋರ್ ಜಿಲ್ಲೆಯ ಖೈರಾ ಬ್ಲಾಕ್ ಅಡಿಯಲ್ಲಿ ಬರುವ ಒಶಾಂಗ್ ಗ್ರಾಮದ ನಿವಾಸಿ ಅಮುಲ್ಯಾ ಬೆಹೆರಾ ತನ್ನ ಮನೆಯಲ್ಲಿ ಬಾವಲಿಯನ್ನು ಸಾಕುತ್ತಿದ್ದಾರೆ. ಬಾವಲಿಯೊಂದಿಗೆ ಉತ್ತಮ ಬಾಂದವ್ಯ ಹೊಂದಿರುವ ಬೆಹೆರಾ, ಅದನ್ನು ತನ್ನ ಮನೆಯ ಸದಸ್ಯರಲ್ಲಿ ಒಂದು ಎಂದು ಭಾವಿಸಿದ್ದಾನೆ.
ಈ ಬಾಂದವ್ಯ ಹೇಗೆ ಆರಂಭವಾಯಿತು ಎಂಬ ಪ್ರಶ್ನೆಗೆ ಉತ್ತರ ನೀಡಿದ ಬೆಹೆರಾ 12 ವರ್ಷಗಳ ಹಿಂದಿನ ಘಟನೆಯನ್ನು ನೆನಪು ಮಾಡಿಕೊಂಡರು. ಬೆಹೆರಾ ಅವರ ಮನೆಯ ಮೇಲೆ ತನ್ನ ತಾಯಿಯೊಂದಿಗೆ ಹಾರಾಡುತ್ತಿದ್ದ ಬಾವಲಿ ಮರಿಯೊಂದು ಇದ್ದಕ್ಕಿದ್ದಂತೆ ಅವರ ಹಿತ್ತಲಿನಲ್ಲಿ ಬೀಳುತ್ತದೆ. ಅದು ಅಳುವುದನ್ನು ಕೇಳಿದ ಬೆಹೆರಾ ಮನೆಯಿಂದ ಹೊರಗಡೆ ಬಂದು ಅದನ್ನು ರಕ್ಷಣೆ ಮಾಡಿ ಮನೆಗೆ ತರುತ್ತಾನೆ. ಆದರೆ, ಅದರ ಪಾಲನೆ ಮಾಡುವುದೇ ಬೆಹೆರಾಗೆ ಒಂದು ಸವಾಲಾಗಿತ್ತು. ದ್ರಾಕ್ಷಿ ರಸವನ್ನು ನೀಡಲು ಆರಂಭಿಸುತ್ತಾನೆ. ಬಳಿಕ ಬಾವಲಿ ಕೊಂಚ ಚೇತರಿಸಿಕೊಳ್ಳುತ್ತದೆ. ಅದಕ್ಕೆ ಬಡು ಎಂದು ಬೆಹೆರಾ ಹೆಸರಿಡುತ್ತಾರೆ. ಬೆಹರಾ ಕುಟುಂಬದ ಪ್ರೀತಿ ಮತ್ತು ಮಮತೆಯಿಂದಲೇ ಬಾವಲಿ ಬೆಳೆಯುತ್ತದೆ.
ಬಡುವಿನ ಇತರೆ ಸದಸ್ಯರು ಮರಗಳು ಮತ್ತು ಗುಹೆಗಳಲ್ಲಿ ವಾಸಿಸುತ್ತಿದ್ದರೂ ಬಡು ಮಾತ್ರ ಬೆಹೆರಾ ಕುಟುಂಬದ ಜತೆ ಜೀವಿಸುತ್ತಿದೆ. ಇದೊಂದು ಜೀವಿ ಅಂತಾ ಬೆಹೆರಾ ಕುಟುಂಬ ಎಂದಿಗೂ ಭಾವಿಸಿಲ್ಲ. ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬನೆಂದು ಪರಿಗಣಿಸಿದ್ದೇವೆ ಎನ್ನುತ್ತಾರೆ ಬೆಹೆರಾ. ಅಲ್ಲದೆ, ವಿಶೇಷವಾಗಿ ಬಡುವನ್ನು ನನ್ನ ದೊಡ್ಡ ಮಗನೆಂದುಕೊಂಡಿದ್ದೇನೆ. ನಾನು ಪ್ರತಿದಿನ ಮನೆಗೆ ಬರುವಾಗಲೆಲ್ಲ ಬಡುಗೆ ಸೇಬು ಅಥವಾ ರಸಗುಲ್ಲವನ್ನು ತರುತ್ತೇನೆ. ನನ್ನ ಧ್ವನಿ ಕೇಳುತ್ತಿದ್ದಂತೆ ಬಡು ಶಬ್ದ ಮಾಡಲು ಆರಂಭಿಸುತ್ತಾನೆ ಎಂದು ಬೆಹೆರಾ ಹೇಳಿದರು.
ನಾವು ತುಂಬಾ ಚೆನ್ನಾಗಿ ಬಡುವನ್ನು ನೋಡಿಕೊಳ್ಳುತ್ತಿದ್ದೇವೆ. ನನ್ನ ಮಕ್ಕಳಿಗಿಂತಲೂ ಬಡುವನ್ನು ಹೆಚ್ಚು ಪ್ರೀತಿ ಮಾಡುತ್ತೇವೆ ಎಂದು ಬೆಹೆರಾ ಪತ್ನಿ ಅಂಬಿಕಾ ಬೆಹೆರಾ ಹೇಳಿದ್ದಾರೆ.
ಬಾವಲಿಯನ್ನು ಸಾಕುವ ಕಾನೂನು ಸಮ್ಮತಿ ಬಗ್ಗೆ ಮಾಜಿ ಅರಣಾಧಿಕಾರಿ ಬಿ.ಕೆ. ಪಟ್ನಾಯಕ್ ಮಾತನಾಡಿ, ಜನರು ಬಾವಲಿಗಳನ್ನು ಏಕೆ ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುತ್ತಾರೆಂದು ನನಗೆ ತಿಳಿದಿಲ್ಲ. ಇದು ಪಕ್ಷಿಯಂತೆ ಕಂಡರೂ ಅದೊಂದು ಸಸ್ತನಿ. ಸಾಕುಪ್ರಾಣಿಯಾಗಿ ಇಟ್ಟುಕೊಳ್ಳಲು ಯಾವುದೇ ತೊಂದರೆ ಇಲ್ಲ ಎಂದರು. (ಏಜೆನ್ಸೀಸ್)