Lokah: ಮಾಲಿವುಡ್ನ ಬಹುಬೇಡಿಕೆಯ ನಟರಲ್ಲಿ ಒಬ್ಬರಾಗಿರುವ ಬಸಿಲ್ ಜೋಸೆಫ್, ಇತ್ತೀಚೆಗಷ್ಟೇ ತೆರೆಕಂಡ ಲೋಕಃ ಸಿನಿಮಾ ಸದ್ಯ ಬಾಕ್ಸ್ ಆಫೀಸ್ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಉತ್ತಮ ವಿಮರ್ಶೆಗಳನ್ನು ಪಡೆಯುತ್ತಿರುವ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ನೋಡುತ್ತಿದೆ. ಮತ್ತೊಂದೆಡೆ, ಸಿನಿಮಾದಲ್ಲಿ ಬೆಂಗಳೂರು ಯುವತಿಯರನ್ನು ಕೆಟ್ಟದಾಗಿ ಬಿಂಬಿಸಿದ ಆರೋಪ ಸಿನಿಮಾದ ವಿರುದ್ಧ ಕೇಳಿಬಂದಿತ್ತು. ಅದಕ್ಕೆ ಚಿತ್ರತಂಡ ಕ್ಷಮೆ ಕೂಡ ಕೇಳಿತು. ಮತ್ತು ಆ ಡೈಲಾಗ್ ಅನ್ನು ಚಿತ್ರದಿಂದ ಕಿತ್ತುಬಿಸಾಡಿತು. ಇದೀಗ ಚಿತ್ರದ ಬಗ್ಗೆ ಮಾತನಾಡಿರುವ ಬಸಿಲ್, ತಾವು ಮಾಡಿದ ತಪ್ಪನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಇತ್ತೀಚಿಗಿನ ಸಂದರ್ಶನದಲ್ಲಿ ಮನಬಿಚ್ಚಿ ಮಾತನಾಡಿದ ಬಸಿಲ್ ಜೋಸೆಫ್, 'ಲೋಕಃ' ಸಿನಿಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುವಂತೆ ಚಿತ್ರದ ನಿರ್ದೇಶಕ ಡೊಮಿನಿಕ್ ಅರುಣ್ ತಮ್ಮನ್ನು ಸಂಪರ್ಕಿಸಿದ್ದಾಗಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಆ ದೊಡ್ಡ ಆಫರ್ ಅನ್ನು ಒಪ್ಪಿಕೊಳ್ಳುವ ಬದಲಿಗೆ ನಾನು ತಿರಸ್ಕರಿಸಿದೆ. ಒಲಿದುಬಂದ ಅವಕಾಶವನ್ನು ನಿರಾಕರಿಸಿದ್ದಕ್ಕೆ ಅತೀವ ಬೇಸರ ಕಾಡುತ್ತಿದೆ ಎಂದಿದ್ದಾರೆ. ಅಸಲಿಗೆ ಇಲ್ಲಿ ಯಾವ ಪಾತ್ರಕ್ಕಾಗಿ ತಮ್ಮನ್ನು ಕೇಳಲಾಯಿತು ಎಂಬುದನ್ನು ಜೋಸೆಫ್ ಬಹಿರಂಗಪಡಿಸಿಲ್ಲ.
ನಟಿ ಕಲ್ಯಾಣಿ ಪ್ರಿಯದರ್ಶನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಮಲಯಾಳಂ ಸೂಪರ್ ಹೀರೋ ಚಿತ್ರ, ಸದ್ಯ ಬಾಕ್ಸ್ ಆಫೀಸ್ನಲ್ಲಿ ಉತ್ತಮ ಓಟವನ್ನೇ ಕಂಡಿದೆ. ದುಲ್ಕರ್ ಸಲ್ಮಾನ್ ನಿರ್ಮಾಣದ ಮತ್ತು ಡೊಮಿನಿಕ್ ಅರುಣ್ ನಿರ್ದೇಶಿಸಿದ 'ಲೋಕಃ' 100 ಕೋಟಿ ರೂ. ಗಡಿದಾಟಿ ಹೋಗಿದೆ. 30 ಕೋಟಿ ರೂ. ಬಜೆಟ್‌ನಲ್ಲಿ ತಯಾರಾದ ಈ ಚಿತ್ರವು, 100 ಕೋಟಿ ರೂ. ಗಳಿಸಿದ ಮೂರನೇ ಅತ್ಯಂತ ವೇಗದ ಮಲಯಾಳಂ ಚಿತ್ರ ಮತ್ತು 100 ಕ್ರೋರ್ ಕ್ಲಬ್ ಸೇರಿದ 12ನೇ ಸಿನಿಮಾ ಎಂಬ ಪಟ್ಟಿಗೆ ಸೇರಿದೆ.
ಹೌದು, ಬೆಂಗಳೂರು ಯುವತಿಯರನ್ನು ಕೆಟ್ಟದಾಗಿ ಬಿಂಬಿಸಿದ ಆರೋಪ ಈ ಚಿತ್ರದ ವಿರುದ್ಧ ಕೇಳಿಬಂದಿತು. ಬೆಂಗಳೂರು ಯುವತಿಯರನ್ನು ಕೆಟ್ಟದಾಗಿ ಬ್ರ್ಯಾಂಡ್ ಮಾಡಲಾಗಿದೆ ಎಂಬ ಟೀಕೆಗಳ ಸುರಿಮಳೆ ಜಾಲತಾಣಗಳಲ್ಲಿ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮಲಯಾಳಂ ಚಿತ್ರದ ವಿರುದ್ಧ ಕನ್ನಡಿಗರು ತೀವ್ರ ಅಸಮಾಧಾನ ಹೊರಹಾಕಿದ್ದರು. ಕನ್ನಡಿಗರ ಆಕ್ರೋಶಕ್ಕೆ ತಲೆಬಾಗಿದ ಚಿತ್ರತಂಡ, ಕೂಡಲೇ ಆ ಡೈಲಾಗ್ ಅನ್ನು ಚಿತ್ರದಿಂದ ಕಿತ್ತುಬಿಸಾಡಿ, ಬಹಿರಂಗವಾಗಿ ಜಾಲತಾಣದಲ್ಲಿ ಕ್ಷಮೆಯಾಚಿಸಿತು,(ಏಜೆನ್ಸೀಸ್).