ಹಾವೇರಿ: ಉಪಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದಲ್ಲಿ ಆಪರೇಷನ್ ಕಮಲ ಮತ್ತೊಮ್ಮೆ ಸದ್ದು ಮಾಡುತ್ತಿದ್ದು, ಖುದ್ದು ಸಿಎಂ ಸಿದ್ದರಾಮಯ್ಯ ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ (Congress MLA) 50 ಕೋಟಿ ರೂಪಾಯಿ ಆಫರ್ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದೀಗ ಇದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai) ಸಿಎಂ ಸಿದ್ದರಾಮಯ್ಯ ಅವರು ಬಹಳ ಗೊಂದಲದಿಂದ ಹತಾಶರಾಗಿ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಹಾವೇರಿಯಲ್ಲಿ ಈ ಬಗ್ಗೆ ಮಾತನಾಡಿದ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bommai), ಸಿಎಂ ರೇಸ್ನಲ್ಲಿರೋ ಸಚಿವರೇ ಕಾಂಗ್ರೆಸ್ ಶಾಸಕರಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ. ಈ ಹತಾಷೆಯಿಂದ ಸಿಎಂ ಸಿದ್ದರಾಮಯ್ಯ (CM Siddaramaiah) ಏನೇನೋ ಮಾತನಾಡುತ್ತಿದ್ದಾರೆ. ನನ್ನನ್ನು ಮುಟ್ಟಿದ್ರೆ ಕರ್ನಾಟಕದ ಜನ ಸುಮ್ಮನೇ ಬಿಡಲ್ಲ ಅಂತಾರೆ. ಹಾಗೆಯೇ ನನ್ನೊಂದಿಗೆ ನಿಲ್ಲಬೇಕೆಂದು ಜನರಿಗೆ ಸಿಎಂ ಅವರೇ ಮನವಿ ಮಾಡಿಕೊಳ್ಳುತ್ತಾರೆ. ಇದೀಗ ಒಂದೊಂದೇ ಹಗರಣ ಹೊರ ಬರುತ್ತಿದ್ದನಂತೆಯೇ ತಮ್ಮ ಬಗ್ಗೆ ತಾವೇ ಮಾತನಾಡುತ್ತಿದ್ದಾರೆ. ಒಬ್ಬ ರಾಜಕಾರಣಿ ತನ್ನ ಅಸ್ತಿತ್ವಕ್ಕೆ ಧಕ್ಕೆ ಬಂದಾಗ, ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಆಪಾದನೆಯ ದಿಕ್ಕನ್ನ ಬೇರೆ ಕಡೆ ತಿರುಗಿಸಲು ಹೀಗೆ ಹೇಳುತ್ತಿದ್ದಾರೆ. ಅವರು ಬಹಳ ಗೊಂದಲದಿಂದ ಹತಾಶರಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿಗಳು 50 ಜನ ಕಾಂಗ್ರೆಸ್‌ನ ಶಾಸಕರನ್ನು ಖರೀದಿ ಮಾಡುತ್ತೇವೆ ಅಂತ ಆರೋಪ ಮಾಡಿದ್ದಾರೆ. 50 ಶಾಸಕರ ಖರೀದಿಗೆ 2,500 ಕೋಟಿ ರೂ. ಬೇಕಾಗುತ್ತದೆ. ಯಾರ ಬಳಿ ಇದೆ ಅಷ್ಟೊಂದು ಹಣ. ಸಿದ್ದರಾಮಯ್ಯ (Siddaramaiah) ಸಿಎಂ ಸ್ಥಾನದಿಂದ ಇಳಿಯೋದಕ್ಕೆ ಕೆಲವರು ಕಾಯುತ್ತಿದ್ದಾರೆ. ಮುಂದೆ ಸಿಎಂ ಆಗಬೇಕೆಂದು ಕೆಲವರು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಅನುದಾನದ ಬಗ್ಗೆ ಅತೃಪ್ತಿ ವ್ಯಕ್ತಪಡಿಸ್ತಿರೋ ಶಾಸಕರಿಗೆ ಹಣ ಕೊಡುತ್ತಿದ್ದಾರೆ. ಇನ್ನು ಸಿಎಂ ರೇಸ್ ವಿಚಾರ ಬಂದಾಗ ನಮ್ಮ ಜೊತೆಗೆ ಇರಿ ಅಂತ ಹಣ ಕೊಡ್ತಿದ್ದಾರೆ. ಸಿದ್ದರಾಮಯ್ಯ (Siddaramaiah) ಅವರು ಆರೋಪ ಮಾಡಿದಂತೆ ಬಿಜೆಪಿ 50 ಕೋಟಿ ಹಣವನ್ನು ಯಾರಿಗೂ ಕೊಡ್ತಿಲ್ಲ. ಹಣ ಕೊಡ್ತಿರೋರು ಕೆಲ ಕಾಂಗ್ರೆಸ್ ಸಚಿವರು ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ (Siddaramaiah) ಮೂರುವರೆ ವರ್ಷ ನಾನೇ ಸಿ.ಎಂ ಅಂತಾರೆ. ಮತ್ತೊಂದು ಕಡೆ ನನಗೆ ಶಕ್ತಿ ಕೊಡಿ ಐದು ವರ್ಷ ಅಧಿಕಾರ ಪೂರ್ಣ ಮಾಡಬೇಕು ಅಂತಾರೆ. ಮಳೆ ಹಾನಿಗೆ ಸಾಕಷ್ಟು ಬೆಳೆಗಳು ಹಾನಿಯಾಗಿದೆ. ಒಂದೇ ಒಂದು ಪರಿಹಾರ ಬರುತ್ತಿಲ್ಲ, ಸರ್ಕಾರ ಗೊಂದಲದಲ್ಲಿದೆ. ಮುಸ್ಲಿಂ ಗುತ್ತಿಗೆದಾರರಿಗೆ ನಾಲ್ಕು ರಿಯಾಯಿತಿ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ವಾಲ್ಮೀಕಿ ಹಗರಣ ಮತ್ತು ಮುಡಾ ಹಗರಣದಲ್ಲಿ ಕೂಡ ಸೈಟ್ ತೆಗೆದುಕೊಂಡಿಲ್ಲ ಎಂದು ಹೇಳಿ ವಾಪಸ್ ಕೊಡುತ್ತೇವೆ ಎನ್ನುತ್ತಾರೆ ಇದು ಯೂಟರ್ನ್ ಸರ್ಕಾರ ಎಂದು ಮಾಜಿ ಸಿಎಂ, ಹಾವೇರಿ ಕ್ಷೇತ್ರದ ಸಂಸದ ಬಸವರಾಜ್ ಬೊಮ್ಮಾಯಿ (Basavaraj Bomma) ವಾಗ್ದಾಳಿ ಸಿಎಂ ಸಿದ್ದರಾಮಯ್ಯ (CM Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.