ನ್ಯೂಸ್

ಮಹಿಳಾ ಪತ್ರಕರ್ತರ ನಿರ್ಬಂಧ: ತಾಲಿಬಾನ್​​ಗೆ ಮಹಿಳೆಯರು ಮನುಷ್ಯರಲ್ಲ; ತಸ್ಲೀಮಾ ನಸ್ರೀನ್ ಆಕ್ರೋಶ| Taslima Nasreen

Taslima Nasreen: ದೆಹಲಿಯಲ್ಲಿ ಶುಕ್ರವಾರ ನಡೆದ ಅಫ್ಗಾನಿಸ್ತಾನದ ತಾಲಿಬಾನ್ ವಿದೇಶಾಂಗ ಮಂತ್ರಿ ಅಮೀರ್ ಖಾನ್ ಮುತ್ತಕಿ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ನಿರ್ಬಂಧಿಸಿದ ಹಿನ್ನೆಲೆ ತಾಲಿಬಾನ್​ಗೆ ಮಹಿಳೆಯರು ಮನುಷ್ಯರಲ್ಲ ಎಂದು ಶನಿವಾರ(ಅ. 11) ಬಾಂಗ್ಲಾ ಗಡಿಪಾರು ಲೇಖಕಿ ತಸ್ಲೀಮಾ ನಸ್ರೀನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಹಾಕಿರುವ ಅವರು, ಅಫ್ಘಾನಿಸ್ತಾನದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಭಾರತಕ್ಕೆ ಬಂದು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಆದರೆ, ಅವರ ಸುದ್ದಿಗೋಷ್ಠಿಗೆ ಮಹಿಳಾ ಪತ್ರಕರ್ತರಿಗೆ ಭಾಗವಹಿಸಲು ಅವಕಾಶ ನೀಡಿಲ್ಲ. ತಾಲಿಬಾನ್ ಆಚರಿಸುವ ಇಸ್ಲಾಂನಲ್ಲಿ ಮಹಿಳೆಯರು ಮನೆಯಲ್ಲಿಯೇ ಇರಬೇಕು, ಮಕ್ಕಳನ್ನು ಹೆರಬೇಕು ಹಾಗೂ ತಮ್ಮ ಗಂಡ ಮತ್ತು ಮಕ್ಕಳ ಸೇವೆ ಮಾಡಬೇಕು ಎಂದಿದ್ದಾರೆ.

ಈ ಸ್ತ್ರೀದ್ವೇಷಿ ಪುರುಷರು ಮನೆಯ ಹೊರಗೆ ಎಲ್ಲಿಯೂ ಮಹಿಳೆಯರನ್ನು ನೋಡಲು ಬಯಸುವುದಿಲ್ಲ, ಅದು ಶಾಲೆ ಆಗಿರಬಹುದು, ಕೆಲಸ ಸ್ಥಳವಾಗಿರಬಹುದು. ಅವರು ಮಹಿಳೆಯರನ್ನು ಮನುಷ್ಯರೆಂದು ಪರಿಗಣಿಸದ ಕಾರಣ ಮಹಿಳೆಯರಿಗೆ ಮಾನವ ಹಕ್ಕುಗಳನ್ನು ನೀಡಲು ನಿರಾಕರಿಸುತ್ತಾರೆ. ಪುರುಷ ಪತ್ರಕರ್ತರಿಗೆ ಆತ್ಮಸಾಕ್ಷಿಯಿದ್ದರೆ, ಅವರು ಪತ್ರಿಕಾಗೋಷ್ಠಿಯಿಂದ ಹೊರನಡೆಯುತ್ತಿದ್ದರು. ಕೆಟ್ಟ ಸ್ತ್ರೀದ್ವೇಷದ ಮೇಲೆ ನಿರ್ಮಿಸಲಾದ ರಾಜ್ಯವು ಅನಾಗರಿಕ ರಾಜ್ಯವಾಗಿದೆ. ಯಾವುದೇ ನಾಗರಿಕ ರಾಷ್ಟ್ರವು ಅದನ್ನು ಗುರುತಿಸಬಾರದು ಎಂದು ಕಿಡಿಕಾರಿದ್ದಾರೆ.

ಇನ್ನೂ ಘಟನೆ ಕುರಿತಂತೆ ತಾಲಿಬಾನ್ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಭಾರತೀಯ ವಿದೇಶಾಂಗ ಇಲಾಖೆ ಸ್ಪಷ್ಟೀಕರಣ ನೀಡಿದೆ.

ತಾಲಿಬಾನ್ ವಿದೇಶಾಂಗ ಸಚಿವ ಸುದ್ದಿಗೋಷ್ಠಿಯಲ್ಲಿ ನಡೆದಿದ್ದೇನು?

ಆರು ದಿನಗಳ ಭಾರತ ಪ್ರವಾಸಕ್ಕೆ ಬಂದಿರುವ ತಾಲಿಬಾನ್ ಸಚಿವ ಅಮೀರ್ ಖಾನ್ ಮುತ್ತಕಿ, ವಿದೇಶಾಂಗ ಮಂತ್ರಿ ಜೈಶಂಕರ್ ಜೊತೆ ನಿನ್ನೆ(ಶುಕ್ರವಾರ) ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ನಂತರ ಯಾವುದೇ ಭಾರತ-ಅಫ್ಗಾನ್ ಜಂಟಿ ಸುದ್ದಿಗೋಷ್ಠಿ ನಡೆಯಲಿಲ್ಲ. ಆದರೆ ಅಫ್ಘಾನಿಸ್ತಾನ ರಾಯಭಾರಿ ಕಚೇರಿಯಲ್ಲಿ ಮುತ್ತಕಿ ಸುದ್ದಿಗೋಷ್ಠಿ ಕರೆದಿದ್ದರು.

ಭಾರತ-ಅಫ್ಘಾನಿಸ್ತಾನ ಸಂಬಂಧಗಳು, ಮಾನವೀಯ ನೆರವು, ವ್ಯಾಪಾರ ಮಾರ್ಗಗಳು ಮತ್ತು ಭದ್ರತಾ ಸಹಕಾರ ಸೇರಿದಂತೆ ಪ್ರಾದೇಶಿಕ ವಿಷಯಗಳ ಕುರಿತು ಮಾತನಾಡಿದ್ದಾರೆ. ಆದರೆ ಈ ಸುದ್ದಿಗೋಷ್ಠಿಗೆ ಪ್ರಮುಖ ಸುದ್ದಿವಾಹಿನಿಗಳ ಹಿರಿಯ ಮಹಿಳಾ ವರದಿಗಾರರು, ದಿ ಇಂಡಿಪೆಂಡೆಂಟ್ ವರದಿಗಾರ್ತಿ ಸೇರಿ ಮಹಿಳಾ ಪತ್ರಕರ್ತರಿಗೆ ಭಾಗವಹಿಸದಂತೆ ನಿರ್ಬಂಧಿಸಲಾಗಿತ್ತು ಎನ್ನಲಾಗಿದೆ. ಸುದ್ದಿಗೋಷ್ಠಿಯ ವಿಡಿಯೋದಲ್ಲಿ ಕೇವಲ ಪುರಷ ಪತ್ರಕರ್ತರು ಮಾತ್ರ ಹಾಜರಿದ್ದರು. ಯಾವುದೇ ಮಹಿಳಾ ಪತ್ರಕರ್ತೆಯರು ಕಾಣಿಸಿರಲಿಲ್ಲ. (ಏಜೆನ್ಸೀಸ್)