ಬೆಂಗಳೂರು: ಲಾಕ್ಡೌನ್ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಮದ್ಯ ಸಂಗ್ರಹಿಸಿ ಮಾರಾಟದಲ್ಲಿ ತೊಡಗಿದ್ದ ಬಾರ್ ಸಪ್ಲೈಯರ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿ ನಿವಾಸಿ ಸಕಲೇಶಪುರ ಮೂಲದ ಪ್ರೀತಮ್ ಕುಮಾರ್ (26) ಬಂಧಿತ. ಬಾರ್ ಮಾಲೀಕ ಮಂಜುನಾಥ ತಲೆ ಮರೆಸಿಕೊಂಡಿದ್ದಾರೆ. 32 ಸಾವಿರ ರೂ. ಮೌಲ್ಯದ ಮದ್ಯದ ಶೀಷೆಗಳನ್ನು ಜಪ್ತಿ ಮಾಡಲಾಗಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಸಿಸಿಬಿ ಕಾರ್ಯಾಚರಣೆ: ಏ.11ರ ಸಂಜೆ 7 ಗಂಟೆಯಲ್ಲಿ ಎಲೆಕ್ಟ್ರಾನಿಕ್ಸ್ ಸಿಟಿ 2ನೇ ಹಂತದ ಆನಂದರೆಡ್ಡಿ ಕಾಂಪ್ಲೆಕ್ಸ್ನ ವಾಹನ ನಿಲುಗಡೆ ಸ್ಥಳದಲ್ಲಿ ಮದ್ಯ ಮಾರಾಟ ನಡೆಯುತ್ತಿರುವ ಕುರಿತು ಮಾಹಿತಿ ಲಭ್ಯವಾಗಿತ್ತು. ಮಹಿಳಾ ಸಂರಕ್ಷಣಾ ದಳದ ಇನ್ಸ್ಪೆಕ್ಟರ್ ಸಿರಾಜ್ ಹಾಗೂ ಸಿಬ್ಬಂದಿ ದಾಳಿ ನಡೆಸಿದಾಗ ಪ್ರೀತಮ್ ಸಿಕ್ಕಿಬಿದ್ದಿದ್ದಾನೆ.
ಲಾಕ್ಡೌನ್ ವಿಚಾರ ಗೊತ್ತಾಗಿ ಸಂಗ್ರಹ!: ಬಂಧಿತ ಪ್ರೀತಮ್ ಕುಮಾರ್, ಚಿನ್ಮಯ್ ಬಾರ್ ಆಂಡ್ ರೆಸ್ಟೋರೆಂಟ್ನಲ್ಲಿ ಸಪ್ಲೈಯರ್ ಆಗಿ ಕೆಲಸ ಮಾಡುತ್ತಿದ್ದ. ಕರೋನಾ ಭೀತಿ ಹಿನ್ನೆಲೆಯಲ್ಲಿ ಲಾಕ್ಡೌನ್ ಮಾಡುತ್ತಿರುವ ವಿಚಾರ ಗೊತ್ತಾಗಿತ್ತು. ಅಬಕಾರಿ ಇಲಾಖೆ ಬಾರ್ಗೆ ಮೊಹರು ಹಾಕಿ ಬಂದ್ ಮಾಡುವುದನ್ನು ತಿಳಿಸಿದ್ದ ಬಾರ್ ಮಾಲೀಕ ಮಂಜುನಾಥ್ ಮದ್ಯದ ಶೀಷೆಗಳನ್ನು ವಾಹನ ನಿಲುಗಡೆಯ ಸ್ಥಳಕ್ಕೆ ಸಾಗಿಸಿದ್ದರು. ಕಳೆದ 3 ದಿನಗಳಿಂದ ಪರಿಚಿತ ಗ್ರಾಹಕರಿಗೆ ದುಪ್ಪಟ್ಟು ಹಣಕ್ಕೆ ಮದ್ಯ ಮಾರಾಟ ಮಾಡಲಾಗುತ್ತಿತ್ತು ಎಂಬುದು ಆರೋಪಿಯ ವಿಚಾರಣೆಯಿಂದ ಗೊತ್ತಾಗಿದೆ. 236 ಶೀಷೆ ಮದ್ಯ ಹಾಗೂ 6 ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.