ನ್ಯೂಸ್

ಅಮ್ಮ ಸುಷ್ಮಾ ಸ್ವರಾಜ್​ ಅವರನ್ನು ಮಿಸ್​ ಮಾಡಿಕೊಳ್ಳುತ್ತಿರುವ ಬಾನ್ಸುರಿ

ನವದೆಹಲಿ: ಇಂದು ಅಮ್ಮಂದಿರ ದಿನ. ಎಲ್ಲರೂ ತಮ್ಮ ತಮ್ಮ ಅಮ್ಮಂದಿರನ್ನು ನೆನಪಿಸಿಕೊಂಡು, ಅವರೊಂದಿಗೆ ಇರುವ ಭಾವಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ, ಪ್ರೀತಿ ಮತ್ತು ಗೌರವ ಸಲ್ಲಿಸುತ್ತಿದ್ದಾರೆ.

ಆದರೆ, ಇಲ್ಲೊಬ್ಬ ಮಗಳು ತಮ್ಮ ಅಮ್ಮನನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡು ಅಮ್ಮನನ್ನು ನೆನಪಿಸಿಕೊಂಡಿದ್ದಾರೆ. ಅವರೇ ಬಾನ್ಸುರಿ ಸ್ವರಾಜ್​.

ಬಾನ್ಸುರಿ ಸ್ವರಾಜ್​ ಅವರು ಸುಷ್ಮಾ ಸ್ವರಾಜ್​ ಅವರ ಪುತ್ರಿ. ಅತಿ ಕಿರಿಯ ವಯಸ್ಸಿನಲ್ಲೇ ಸಚಿವೆಯಾದ ಹೆಗ್ಗಳಿಕೆಯೊಂದಿಗೆ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಆದ ಛಾಪು ಮೂಡಿಸಿ, ಅನಾರೋಗ್ಯದ ವಿರುದ್ಧ ಹೋರಾಡುತ್ತಲೇ ಅಸುನೀಗಿದವರು ಸುಷ್ಮಾ ಸ್ವರಾಜ್​. ಇಂಥ ನಾಯಕಿಯನ್ನು ಕಳೆದುಕೊಂಡಿದ್ದಕ್ಕಾಗಿ ಇಡೀ ದೇಶವೇ ದುಃಖತಪ್ತವಾಗಿತ್ತು.

ಇಂಥ ತಾಯಿಯನ್ನು ಕಳೆದುಕೊಂಡಿರುವ ಬಾನ್ಸುರಿ ಸ್ವರಾಜ್​, ಅಮ್ಮಂದಿರ ದಿನದ ಶುಭಾಶಯಗಳು @SushmaSwaraj. ಪ್ರತಿ ಉಸಿರಿನಲ್ಲೂ ನಿನ್ನನ್ನು ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಅಮ್ಮ... ಎಂದು ಟ್ವೀಟ್​ ಮಾಡಿದ್ದಾರೆ.

ತಾವು ತುಂಬಾ ಚಿಕ್ಕವರಿದ್ದಾಗ ಅಮ್ಮ ಸುಷ್ಮಾ ಸ್ವರಾಜ್​ ತಮ್ಮನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ಹಳೆಯ ಫೋಟೋದೊಂದಿಗೆ ಸಂದೇಶವನ್ನು ಟ್ವೀಟ್​ ಮಾಡಿದ್ದಾರೆ.

ಸುಷ್ಮಾ ಸ್ವರಾಜ್​ ಅವರು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ನಂತರ ಚೇತರಿಸಿಕೊಳ್ಳುತ್ತಿದ್ದರಾದರೂ 2019ರ ಆಗಸ್ಟ್​ನಲ್ಲಿ ಅಸ್ವಸ್ಥಗೊಂಡು ಏಮ್ಸ್​ಗೆ ದಾಖಲಾಗಿದ್ದರು. ಅಲ್ಲಿ ಹೃದಯಾಘಾತವಾಗಿದ್ದರಿಂದ ಆಗಸ್ಟ್​ 6ರಂದು ತಮ್ಮ 67ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದರು. ಇವರು ಭಾರತದ ಮೊದಲ ಮಹಿಳಾ ವಿದೇಶಾಂಗ ಸಚಿವರು ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದರು.