ವಿಜಯಪುರ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಚಡಚಣ ಮತ್ತು ಮನಗೂಳಿಯ ರಾಷ್ಟ್ರೀಕೃತ ಬ್ಯಾಂಕ್ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಖಾಕಿ ಪಡೆ ಬಹುತೇಕ ಆರೋಪಿಗಳನ್ನು ಬಂಧಿಸಿ ಕೋಟ್ಯಾಂತರ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣವನ್ನು ವಶಕ್ಕೆ ಪಡೆದಿದೆ.
ಕಳೆದ ಸೆ.16 ರಂದು ಸಂಜೆ 7.20 ರ ಸುಮಾರಿಗೆ ಚಡಚಣ ಪಟ್ಟಣದ ಎಸ್ಬಿಐ ಬ್ಯಾಂಕ್ ಶಾಖೆಗೆ ನುಗ್ಗಿದ ಮೂವರು ಸುಮಾರು 1.04 ಕೋಟಿ ರೂ.ನಗದು ಹಾಗೂ 20 ಕೆಜಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಪ್ರಕರಣದಲ್ಲಿ ಮೂವರನ್ನೂ ಬಂಧಿಸಿ ಒಟ್ಟು 9.01 ಕೆಜಿ ಬಂಗಾರ ಹಾಗೂ 86,31220 ರೂ. ನಗದು ಜಫ್ತು ಮಾಡಿಕೊಳ್ಳಲಾಗಿದೆ. ಇನ್ನೂ ಮನಗೂಳಿಯಲ್ಲಿ ಮೇ 23 ರಂದು ನಡೆದ ಬ್ಯಾಂಕ್ ದರೋಡೆ ಪ್ರಕರಣದ ಮುಂದುವರಿದ ಭಾಗವಾಗಿ 4.8 ಕೆಜಿ ಬಂಗಾರ ಹಾಗೂ 22 ಲಕ್ಷ ರೂಪಾಯಿನಗದು ವಶಪಡಿಸಿಕೊಳ್ಳಲಾಗಿದ್ದು, ಈವರೆಗೆ ಒಟ್ಟು 43.565 ಕೆಜಿ ಬಂಗಾರದ ಗಟ್ಟಿ ಹಾಗೂ ಆಭರಣಗಳು, 1.38 ಕೋಟಿ ರೂ. ನಗದು, 5 ಕಾರು ಹಾಗೂ ಕೃತ್ಯಕ್ಕೆ ಬಳಸಿದ ಇತರೆ ವಸ್ತುಗಳು ಸೇರಿದಂತೆ ಒಟ್ಟು 44.48 ಕೋಟಿ ರೂ.ಮೌಲ್ಯದ ವಸ್ತು ವಶಕ್ಕೆ ಪಡೆಯಲಾಗಿದೆ ಎಂದು ಐಜಿಪಿ ಆರ್.ಇತೇಂದ್ರ ಹಾಗೂ ಬೆಳಗಾವಿ ಉತ್ತರ ವಲಯದ ಎಡಿಜಿಪಿ ಚೇತನಸಿಂಗ್ ರಾಥೋಡ್ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಇದನ್ನೂ ಓದಿ: ಮೋದಿ-ಸ್ಟಾರ್ಮರ್ ಭೇಟಿ: ಯುಕೆ-ಭಾರತ ಸಂಬಂಧಕ್ಕೆ ಹೊಸ ಶಕ್ತಿ ಬಂದಿದೆ ಎಂದ ಪ್ರಧಾನಿ| Modi-Starmer Meeting
ಚಡಚಣದ ಪ್ರಕರಣದಲ್ಲಿ ಓರ್ವನನ್ನು ಬಂಧಿಸಲಾಗಿದ್ದು, ವಿಚಾರಣೆ ಮುಂದುವರೆದಿದೆ. ಪ್ರಕರಣ ಸಂಬಂಧ ಶಸ್ತ್ರಾಸ್ತ್ರ ಪೂರೈಸಿದ ಬಿಹಾರದ ರಾಕೇಶಕುಮಾರ ಶಿವಾಜಿ ಸಹಾನಿ (22), ರಾಜಕುಮಾರ ರಾಮಲಾಲ ಪಾಸ್ವಾನ (21) ಹಾಗೂ ರಕ್ಷಕಕುಮಾರ ಮದನ (21) ಎಂಬುವರನ್ನು ಬಂಧಿಸಲಾಗಿದೆ.