ನ್ಯೂಸ್

ಖಾತೆಯಲ್ಲಿ ಬ್ಯಾಲೆನ್ಸ್​ ಇಲ್ಲದಿದ್ದರೂ ಹಣ ವಿತ್​ಡ್ರಾ! ಎಟಿಎಂ ಮುಂದೆ ಜಮಾಯಿಸಿದ ಗ್ರಾಹಕರು

ಡಬ್ಲಿನ್​: ಹಣ ತೆಗೆದುಕೊಳ್ಳಲೆಂದು ನೀವು ಎಟಿಎಂಗೆ ಹೋದಾಗ ಕೆಲವೊಮ್ಮೆ ಎಟಿಎಂನಿಂದ ಹಣ ಬರದೇ ಖಾತೆಯಲ್ಲಿ ಹಣ ಕಡಿತಗೊಂಡಿರುವುದನ್ನು ನೀವು ಗಮನಿಸಿರುತ್ತೀರಾ. ಆದರೆ, ಖಾತೆಯಲ್ಲಿ ಹಣ ಇಲ್ಲದಿದ್ದರೂ ಎಟಿಎಂನಿಂದ ದೊಡ್ಡ ಮೊತ್ತದ ಹಣ ಬರುವುದನ್ನು ಎಂದಾದರೂ ನೋಡಿದ್ದೀರಾ? ಅದು ಸಂಭವಿಸಿದರೆ ಅದಕ್ಕಿಂತ ಲಕ್​ ಇನ್ನೊಂದಿಲ್ಲ ಎಂದು ಭಾವಿಸುತ್ತೀರ. ಆದಾಗ್ಯೂ ಇದೇ ರೀತಿಯ ಘಟನೆಯೊಂದು ವರದಿಯಾಗಿದೆ. ಆದರೆ ಇದು ನಡೆದಿರುವುದು ಭಾರತದಲ್ಲಲ್ಲ, ಐರ್ಲೆಂಡ್​ನಲ್ಲಿ.

ಬ್ಯಾಂಕ್​ನ ಎಟಿಎಂಗಳಲ್ಲಿ ಹಣ ತೆಗೆಯಲು ಯತ್ನಿಸಿದವರಿಗೆ ಖಾತೆಯಲ್ಲಿ ಬ್ಯಾಲೆನ್ಸ್ ಕಡಿಮೆ ಇದ್ದರೂ 90 ಸಾವಿರ ರೂ. ಬಂದಿದೆ. ಈ ವಿಷಯ ಹೊರಬೀಳುತ್ತಿದ್ದಂತೆ ಎಟಿಎಂ ಕೇಂದ್ರಗಳಿಗೆ ಜನ ಜಮಾಯಿಸಿದ್ದು, ಹಣ ಪಡೆದಿರುವುದಲ್ಲದೇ ಹಣವನ್ನು ಬೇರೆಯವರಿಗೆ ವರ್ಗಾವಣೆ ಮಾಡಿದ್ದಾರೆ. ಈ ಘಟನೆ ಮಂಗಳವಾರ ರಾತ್ರಿ ಐರ್ಲೆಂಡ್​ನ ಬ್ಯಾಂಕ್​ ಒಂದು ಎಟಿಎಂ ಕೇಂದ್ರದಲ್ಲಿ ನಡೆದಿದೆ. ಖಾತೆಯಲ್ಲಿ ಹಣವಿಲ್ಲದಿದ್ದರೂ ಹಣ ವಿತ್​ಡ್ರಾ ಆಗಿದೆ.

ಬ್ಯಾಂಕ್​ ವ್ಯವಸ್ಥೆಯಲ್ಲಿನ ತಾಂತ್ರಿಕ ವೈಫಲ್ಯ ಕಾರಣದಿಂದಾಗಿ ಬ್ಯಾಂಕ್​ ಗ್ರಾಹಕರು ಖಾತೆಯಲ್ಲಿ ಹಣವಿಲ್ಲದಿದ್ದರೂ 1000 ಯೂರೋ (ಭಾರತೀಯ ಕರೆನ್ಸಿ ಪ್ರಕಾರ 90 ಸಾವಿರ ರೂ.) ವರೆಗೂ ಹಣ ವಿತ್​ಡ್ರಾ ಮಾಡುವ ಅವಕಾಶ ದೊರೆತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಇದನ್ನು ಲಾಭವಾಗಿ ಪರಿಗಣಿಸಿದ ಗ್ರಾಹಕರು ಎಟಿಎಂ ಕೇಂದ್ರದ ಮುಂದೆ ಜಮಾಯಿಸಿ ಹಣ ಡ್ರಾ ಮಾಡಿಕೊಂಡಿದ್ದಾರೆ. ಕಾರುಗಳನ್ನು ಪಾರ್ಕ್​ ಮಾಡಿ ಎಟಿಎಂ​ ಮುಂದೆ ಸಾಲುಗಟ್ಟಿ ಜನರು ನಿಂತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಐರ್ಲೆಂಡ್​ ರಾಜಧಾನಿ ಡಬ್ಲಿನ್​, ಲೈಮರಿಕ್​, ದುಂಡಾಲ್ಕ್​ ಸೇರಿದಂತೆ ದೇಶದ ಹಲವು ಭಾಗಗಳ ಕೆಲ ಜನರು ಈ ಲಾಭವನ್ನು ಪಡೆದುಕೊಂಡಿದ್ದಾರೆ. ಎಟಿಎಂ ಕೇಂದ್ರಗಳಲ್ಲಿ ಪೊಲೀಸರಿದ್ದರೂ ಡೋಂಟ್​ ಕೇರ್​ ಎನ್ನದ ಗ್ರಾಹಕರು ಹಣ ತೆಗೆಯುವ ಕಾರ್ಯದಲ್ಲಿ ನಿರತರಾಗಿದ್ದರು. ಗ್ರಾಹಕನೊಬ್ಬ ತಾನು 1000 ಯುರೋಗಳನ್ನು ಹಿಂಪಡೆದಿರುವುದಾಗಿ ಮಾಧ್ಯಮಗಳಿಗೆ ತಿಳಿಸಿದರೆ. ಇನ್ನೋರ್ವ 500 ಯುರೋಗಳನ್ನು ಹಿಂಪಡೆದಿರುವುದಾಗಿ ತಿಳಿಸಿದ್ದಾರೆ.

ಮೊಬೈಲ್​ ಅಪ್ಲಿಕೇಶನ್​ನಲ್ಲೂ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಅಲ್ಲೂ ಕೂಡ ಅನೇಕ ಮಂದಿ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆ. ಆದರೆ, ಉಚಿತ ಹಣ ಸಿಕ್ಕಿತ್ತೆಂದು ಸಂತೋಷಪಡುವ ಮುನ್ನವೇ ಬ್ಯಾಂಕ್ ಪ್ರಮುಖ ಘೋಷಣೆಯೊಂದನ್ನು ಮಾಡಿದೆ. ಸಿಕ್ಕಿರುವ ಹಣವನ್ನು ಮರುಪಾವತಿ ಮಾಡಿ. ಇಲ್ಲವಾದಲ್ಲಿ ನಿಮ್ಮ ಖಾತೆಗಳಿಂದ ಹಣವನ್ನು ಕಡಿತ ಮಾಡಿಕೊಳ್ಳುತ್ತೇವೆ. ಈ ಸೂಚನೆಗೂ ನೀವು ಗಮನ ಕೊಡದೇ ಇದ್ದಲ್ಲಿ ಮುಂದೆ ಪೊಲೀಸ್​ ಕ್ರಮ ಎದುರಿಸಬೇಕಾಗುತ್ತದೆ ಎಂದು ಬ್ಯಾಂಕ್​ ತನ್ನ ಗ್ರಾಹಕರಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. (ಏಜೆನ್ಸೀಸ್​)