ಕೊಲ್ಕತಾ: ಪಶ್ಚಿಮ ಬಂಗಾಳದ ಬಿಧಾನ್‌ನಗರ ಪೊಲೀಸರು 32 ವರ್ಷದ ಬಾಂಗ್ಲಾದೇಶಿ ಮಹಿಳೆಯನ್ನು(Bangladeshi Woman) ಬಂಧಿಸಿದ್ದಾರೆ. ಆಕೆ ವೈದ್ಯಕೀಯ ವೀಸಾದ ಮೇಲೆ ಭಾರತಕ್ಕೆ ಬಂದು ಭಾರತೀಯ ಯುವಕರನ್ನು ಮದುವೆಯಾಗುತ್ತಿದ್ದರು ಮತ್ತು ನಂತರ ಕೌಟುಂಬಿಕ ಹಿಂಸಾಚಾರದ ಆರೋಪ ಹೊರಿಸಿ ಅವರನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.
ಇದನ್ನು ಓದಿ: ರಣವೀರ್ ಅಲ್ಲಾಬಾಡಿಯಾ ಮೊಬೈಲ್ ಸ್ವಿಚ್ ಆಫ್; ಸಮಯ್ ರೈನಾಗೆ ಮಾರ್ಚ್ 10ರವರೆಗೆ ಗಡುವು | Ranveer Allahbadia
32 ವರ್ಷದ ಸಹನಾ ಸಾದಿಕ್ ಎಂಬ ಮಹಿಳೆ ಕಳೆದ ನಾಲ್ಕು ವರ್ಷಗಳಲ್ಲಿ ಆರು ಬಾರಿ ಭಾರತದ ಗಡಿ ದಾಟಿ ನಕಲಿ ಗುರುತಿನ ಚೀಟಿ ಬಳಸಿ ನಾಲ್ಕು ಬಾರಿ ವಿವಾಹವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಶೇಷವೆಂದರೆ ಈ ಯಾವುದೇ ವಿವಾಹಗಳು ಅಧಿಕೃತ ದಾಖಲೆಗಳಲ್ಲಿ ನೋಂದಾಯಿಸಲ್ಪಟ್ಟಿಲ್ಲ.
ಮಹಿಳೆ ಕೊಲ್ಕತಾದ ರಾಜರ್ಹತ್ ಮತ್ತು ನ್ಯೂಟೌನ್ ಪ್ರದೇಶಗಳಲ್ಲಿ ತನ್ನ ಎಲ್ಲಾ ಗಂಡಂದಿರ ವಿರುದ್ಧ ಕೌಟುಂಬಿಕ ಹಿಂಸಾಚಾರ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಹಿತಿಯ ಪ್ರಕಾರ, ಇತ್ತೀಚಿನ ಪ್ರಕರಣ ಅಕ್ಟೋಬರ್ 2024ರಲ್ಲಿ ನಡೆದಿದ್ದು, ಆ ಸಮಯದಲ್ಲಿ ಮಹಿಳೆ ತನ್ನ ಪತಿ ತನ್ನ ಆಕ್ಷೇಪಾರ್ಹ ಫೋಟೋಗಳಗನ್ನು ತೆಗೆದು ಅವುಗಳನ್ನು ಸಾರ್ವಜನಿಕಗೊಳಿಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ಇದಾದ ನಂತರ ಪೊಲೀಸರು ಮಹಿಳೆಯ ಹಿಂದಿನ ದಾಖಲೆಯನ್ನು ಪರಿಶೀಲಿಸಿದಾಗ ಆಕೆ ಇದೇ ರೀತಿಯ ಆರೋಪಗಳೊಂದಿಗೆ ಹಲವಾರು ಬಾರಿ ಪೊಲೀಸರನ್ನು ಸಂಪರ್ಕಿಸಿದ್ದಳು ಎಂದು ತಿಳಿದುಬಂದಿದೆ.
ಮಹಿಳೆ ದೂರು ನೀಡಲು ಬಂದಾಗ ಆಕೆ ಪರಿಚಿತಳಂತೆ ಕಾಣುತ್ತಿದ್ದಳು. ಆಕೆಯ ಹಿನ್ನೆಲೆ ಪರಿಶೀಲಿಸಿದಾಗ ಆಕೆ ಈ ಹಿಂದೆಯೂ ಇದೇ ರೀತಿಯ ದೂರುಗಳನ್ನು ನೀಡಿದ್ದಳು ಎಂದು ಕಂಡುಬಂದಿದೆ. ನಾವು ಆಕೆಯನ್ನು ವಿಚಾರಿಸಿದಾಗ ಆಕೆ ವಂಚಕಿ ಎಂದು ತಿಳಿದುಬಂದಿದೆ ಎಂದು ಬಿಧಾನ್‌ನಗರ ಪೊಲೀಸರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರು ಮಹಿಳೆಯ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸಿದ್ಧತೆ ಆರಂಭಿಸಿದ್ದು ಪ್ರಕರಣವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ.
ಈ ಹಿಂದೆ ಒಡಿಶಾದಲ್ಲಿ ಇದೇ ರೀತಿಯ ಪ್ರಕರಣಗಳು ವರದಿಯಾಗಿದ್ದವು. ಅಲ್ಲಿ ಒಬ್ಬ ವ್ಯಕ್ತಿ ಹಲವಾರು ಮಹಿಳೆಯರನ್ನು ಮದುವೆಯಾಗಿ ನಂತರ ಅವರ ಆಕ್ಷೇಪಾರ್ಹ ವಿಡಿಯೋಗಳ ಮೂಲಕ ಅವರನ್ನು ಬ್ಲ್ಯಾಕ್‌ಮೇಲ್ ಮಾಡಿದ್ದ. ಒಡಿಶಾದ ಅಂಗುಲ್ ಜಿಲ್ಲೆಯ ನಿವಾಸಿಯೊಬ್ಬ ವಿವಿಧ ರಾಜ್ಯಗಳ ಮಹಿಳೆಯರನ್ನು ಗುರಿಯಾಗಿಸಿಕೊಂಡು ಮದುವೆಗೆ ಆಮಿಷವೊಡ್ಡಿ ನಂತರ ವಿಡಿಯೋಗಳ ಮೂಲಕ ಬೆದರಿಕೆ ಹಾಕುತ್ತಿದ್ದ ಆರೋಪ ಹೊರಿಸಲಾಗಿದೆ. ಈ ಎರಡೂ ಪ್ರಕರಣಗಳಲ್ಲಿ ನಕಲಿ ವಿವಾಹಗಳು ಮತ್ತು ಬ್ಲ್ಯಾಕ್‌ಮೇಲಿಂಗ್ ಘಟನೆಗಳು ಸಮಾಜವನ್ನು ಬೆಚ್ಚಿಬೀಳಿಸಿದ್ದು, ಪೊಲೀಸರು ಈಗ ಈ ಪ್ರಕರಣಗಳನ್ನು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)