ನವದೆಹಲಿ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ನಡೆದ ದಂಗೆಯ ನಂತರ ಭಾರತಕ್ಕೆ ಬಂದು ಆಶ್ರಯ ಪಡೆದಿರುವ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಹಸ್ತಾಂತರಿಸುವಂತೆ ಬಾಂಗ್ಲಾದೇಶ ಸರ್ಕಾರ ಭಾರತದ ವಿದೇಶಾಂಗ ಸಚಿವಾಲಯಕ್ಕೆ ರಾಜತಾಂತ್ರಿಕ ನೋಟಿಸ್ ನೀಡಿದೆ.
ಬಾಂಗ್ಲಾ ಸರ್ಕಾರ ಪತನವಾದ ನಂತರ ಶೇಖ್ ಹಸೀನಾ ಭಾರತಕ್ಕೆ ಬಂದು, ಇಲ್ಲಿನ ಸುರಕ್ಷಿತ ಸ್ಥಳವೊಂದರಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಶೇಖ್ ಹಸೀನಾ ಕುರಿತು ಬಾಂಗ್ಲಾದೇಶದ ನಿಲುವಿನ ಬಗ್ಗೆ ಭಾರತಕ್ಕೆ ತಿಳಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಲಹೆಗಾರ ತೌಹೀದ್ ಹುಸೇನ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅವರನ್ನು ಶೀಘ್ರದಲ್ಲೇ ವಾಪಸ್ ಕಳುಹಿಸಬೇಕೆಂದು ನಾವು ಬಯಸುತ್ತೇವೆ ಎಂದಿದ್ದಾರೆ.
ಬಾಂಗ್ಲಾದೇಶ ಹೇಳಿದ್ದೇನು?: ಈಗಾಗಲೇ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಕಳುಹಿಸಲಾಗಿದೆ. ಶೇಖ್ ಹಸೀನಾ ಹಸ್ತಾಂತರ ಪ್ರಕ್ರಿಯೆ ನಡೆಯುತ್ತಿದೆ. ಶೇಖ್ ಹಸೀನಾ ಬಾಂಗ್ಲಾದೇಶಕ್ಕೆ ಯಾವಾಗ ಹಿಂದಿರುಗುತ್ತಾರೆ ಎಂಬುದರ ಕುರಿತು ಯಾವುದೇ ಸಮಯದ ಚೌಕಟ್ಟನ್ನು ನಿಗದಿ ಮಾಡಿಲ್ಲ. ಬಾಂಗ್ಲಾದೇಶವು ಭಾರತದೊಂದಿಗೆ ಹಸ್ತಾಂತರ ಒಪ್ಪಂದವನ್ನು ಹೊಂದಿದೆ. ಇದರ ಅಡಿಯಲ್ಲಿ ಶೇಖ್ ಹಸೀನಾ ಅವರನ್ನು ವಾಪಸ್ ಕರೆತರಲಾಗುತ್ತದೆ ಎಂದು ಬಾಂಗ್ಲಾದೇಶದ ಗೃಹ ವ್ಯವಹಾರಗಳ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಜಹಾಂಗೀರ್ ಆಲಂ ಚೌಧರಿ ಹೇಳಿದ್ದಾಗಿ ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ.
100ಕ್ಕೂ ಅಧಿಕ ಪ್ರಕರಣ: ಶೇಖ್ ಹಸೀನಾ, ಮಾಜಿ ಸಚಿವರು, ಸಲಹೆಗಾರರು, ಮಿಲಿಟರಿ ಅಧಿಕಾರಿಗಳು, ಬೆಂಬಲಿಗರ ವಿರುದ್ಧ ಬಾಂಗ್ಲಾದೇಶದಲ್ಲಿ 100ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ಹಸೀನಾ ಸೇರಿ ಹಲವರಿಗೆ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಕ್ರಿಮಿನಲ್ ಟ್ರಿಬ್ಯೂನಲ್ ಈಗಾಗಲೇ ಬಂಧನ ವಾರಂಟ್ ಜಾರಿ ಮಾಡಿದೆ. ಭ್ರಷ್ಟಾಚಾರ, ಅಮಾನವೀಯತೆ ಮತ್ತು ನರಮೇಧದ ಪ್ರಕರಣಗಳು ಅವರ ವಿರುದ್ಧ ದಾಖಲಾಗಿವೆ. ಇಂಟರ್ಪೋಲ್ ಸಹಿತ ಅಂತಾರಾಷ್ಟ್ರೀಯ ಏಜೆನ್ಸಿಗಳಿಗೂ ಬಾಂಗ್ಲಾದೇಶ ಸರ್ಕಾರ ಮನವಿ ಮಾಡಿದೆ.
ಪ್ರತಿ ಹತ್ಯೆಗೂ ನ್ಯಾಯ: ಹಿಂಸಾಚಾರ ವೇಳೆ ನಡೆದ ಪ್ರತಿಯೊಂದು ಹತ್ಯೆಗೂ ನ್ಯಾಯ ಒದಗಿಸಲಾಗುತ್ತದೆ ಎಂದು ಬಾಂಗ್ಲಾದೇಶದ ಹಂಗಾಮಿ ಅಧ್ಯಕ್ಷ ಮೊಹಮದ್ ಯೂನಿಸ್ ಹೇಳಿದ್ದರು. ಹಸೀನಾ ಸರ್ಕಾರದ ವಿರುದ್ಧದ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಮತ್ತು ಕಾರ್ವಿುಕರು ಸೇರಿ ಸುಮಾರು 1,500 ಜನರು ಸಾವನ್ನಪ್ಪಿದ್ದಾರೆ. ಹಸೀನಾರನ್ನು ದೇಶಕ್ಕೆ ವಾಪಸ್ ಕರೆತರುವುದಾಗಿ ಹೇಳಿದ್ದರು.
ಆ. 5ರಂದು ಭಾರತಕ್ಕೆ: ಬಾಂಗ್ಲಾದಲ್ಲಿ ಕೆಲ ತಿಂಗಳ ಹಿಂದೆ ಮೀಸಲಾತಿ ಹೋರಾಟ ತೀವ್ರಗೊಂಡಿತ್ತು. ಶೇಖ್ ಹಸೀನಾ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ವ್ಯಾಪಕ ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಅಲ್ಲಿನ ಸೇನೆ, ಪ್ರತಿಪಕ್ಷಗಳು ಕೂಡ ಕೈಜೋಡಿಸಿದ ಪರಿಣಾಮ ಹಸೀನಾ ಸರ್ಕಾರ ಪತನ ಕಂಡಿತ್ತು. ಹಸೀನಾ ನಿವಾಸಕ್ಕೆ ನುಗ್ಗಿದ್ದ ಪ್ರತಿಭಟನಾಕಾರರು ದಾಂಧಲೆ ನಡೆಸಿದ್ದರು. ನಂತರ ಸಂಸತ್ ಭವನವನ್ನೂ ವಶಕ್ಕೆ ಪಡೆದಿದ್ದರು. ಈ ನಡುವೆ ಶೇಖ್ ಹಸೀನಾ ಆಗಸ್ಟ್ 5ರಂದು ಭಾರತಕ್ಕೆ ಬಂದು ಆಶ್ರಯ ಪಡೆದಿದ್ದರು.
ಭಾರತದ ಮುಂದಿರುವ ಆಯ್ಕೆಗಳೇನು?