ನ್ಯೂಸ್

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಾಜೀನಾಮೆಗೆ ಪಟ್ಟು; ಬಾಂಗ್ಲಾದಲ್ಲಿ ಮತ್ತಷ್ಟು ಭುಗಿಲೆದ್ದ ಹಿಂಸಾಚಾರ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆ ಮುಂದುವರಿದಿದೆ. ವಿವಿಧ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರತಿಭಟನಾಕಾರರು ಶನಿವಾರ (ಆಗಸ್ಟ್​​ 10) ಬೆಳಗ್ಗೆ 11 ಗಂಟೆಯಿಂದ ಮೆರವಣಿಗೆ ಹೊರಟು ರಾಜಧಾನಿಯಲ್ಲಿರುವ ಸುಪ್ರೀಂಕೋರ್ಟ್​​ ಆವರಣವನ್ನು ಸುತ್ತುವರೆದರು.

ಬಳಿಕ ನ್ಯಾಯಾಂಗ ದಂಗೆಗೆ ಹೆದರಿ, ನ್ಯಾಯಾಧೀಶರು ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಯೊಳಗೆ ರಾಜೀನಾಮೆ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಮತ್ತು ಮೇಲ್ಮನವಿ ವಿಭಾಗದ ನ್ಯಾಯಾಧೀಶರಿಗೆ ಪ್ರತಿಭಟನಕಾರರ ಗುಂಪು ಅಲ್ಟಿಮೇಟಮ್ ನೀಡಿದೆ.

ಸಂಜೆ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರೊಂದಿಗೆ ಸಮಾಲೋಚಿಸಿದ ನಂತರ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಗಡುವಿನ ಒಳಗೆ ನ್ಯಾಯಾಧೀಶರು ಮತ್ತು ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ರಾಜೀನಾಮೆ ನೀಡದಿದ್ದರೆ ಅವರ ನಿವಾಸಗಳ ಮೇಲೆ ದಾಳಿ ನಡೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಭಾರೀ ಪ್ರತಿಭಟನೆಗಳ ನಂತರ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ನಿವಾಸಕ್ಕೂ ಪ್ರತಿಭಟನಾಕಾರರು ಮುತ್ತಿಗೆ ಹಾಕಿದರು. ಅದೇ ವೇಳೆ ಶೇಖ್​ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಾಂಗ್ಲಾದಿಂದ ಪಲಾಯನ ಮಾಡಿದರು.

ಮಧ್ಯಂತರ ಸರ್ಕಾರದ ಯುವ ಮತ್ತು ಕ್ರೀಡಾ ಸಚಿವಾಲಯದ ಸಲಹೆಗಾರ ಆಸಿಫ್ ಮಹಮೂದ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪೋಸ್ಟ್​​ನಲ್ಲಿ ಮುಖ್ಯ ನ್ಯಾಯಮೂರ್ತಿ ಒಬೈದುಲ್ ಹಸನ್ ಅವರು ಬೇಷರತ್ ರಾಜೀನಾಮೆ ನೀಡಬೇಕು ಮತ್ತು ಪೂರ್ಣ ನ್ಯಾಯಾಲಯದ ಸಭೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಮುಖ್ಯ ನ್ಯಾಯಾಧೀಶರು ಪೂರ್ಣ ನ್ಯಾಯಾಲಯದ ಸಭೆ ಕರೆದಿದ್ದಾರೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಇದು ಪ್ರತಿಭಟನಾಕಾರರನ್ನು ಕೆರಳಿಸಿತು. ವಿದ್ಯಾರ್ಥಿಗಳು ಮತ್ತು ವಕೀಲರು ಸೇರಿದಂತೆ ನೂರಾರು ಪ್ರತಿಭಟನಾಕಾರರು ಸುಪ್ರೀಂಕೋರ್ಟ್‌ಗೆ ತೆರಳಲು ಪ್ರಾರಂಭಿಸಿದರು. ಅಬ್ದುಲ್ ಮುಕದ್ದಿಮ್ ಎಂಬ ಪ್ರತಿಭಟನಾಕಾರರು ಮಧ್ಯಂತರ ಸರ್ಕಾರವನ್ನು ಕಾನೂನುಬಾಹಿರವೆಂದು ಘೋಷಿಸಲು ಮುಖ್ಯ ನ್ಯಾಯಮೂರ್ತಿ ಪಿತೂರಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು ಎನ್ನಲಾಗಿದೆ. ಪ್ರತಿಭಟನೆಯ ನಡುವೆ ಬಾಂಗ್ಲಾದೇಶದ ಮುಖ್ಯ ನ್ಯಾಯಾಧೀಶರು ಪೂರ್ಣ ನ್ಯಾಯಾಲಯದ ಸಭೆಯನ್ನು ಮುಂದೂಡಿದರು.(ಏಜೆನ್ಸೀಸ್​​​)