ನ್ಯೂಸ್

ಉದ್ಯೋಗಾವಕಾಶದಲ್ಲಿ ಬೆಂಗಳೂರೇ ನಂ.1; ಚೆನ್ನೈಗೆ ದ್ವಿತೀಯ, ದೆಹಲಿಗೆ ತೃತೀಯ ಸ್ಥಾನ

ಮುಂಬೈ: ಉದ್ಯೋಗಾವಕಾಶ ಮತ್ತು ವೇತನದ ವೃದ್ಧಿಯ ವಿಷಯದಲ್ಲಿ ಇಡೀ ದೇಶದಲ್ಲಿ ಬೆಂಗಳೂರೇ ಪ್ರಥಮ ಸ್ಥಾನದಲ್ಲಿದ್ದು, ಚೆನ್ನೆ ೖ ಮತ್ತು ದೆಹಲಿ ನಂತರದ ಸ್ಥಾನದಲ್ಲಿವೆ ಎಂದು ಗುರುವಾರ ಬಿಡುಗಡೆಯಾದ ಟೀಮ್ೕಸ್ ಸರ್ವಿಸಸ್ ಉದ್ಯೋಗ ಮತ್ತು ವೇತನ ಸಮೀಕ್ಷಾ ವರದಿ ತಿಳಿಸಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬೆಂಗಳೂರಿನಲ್ಲಿ ಸರಾಸರಿ ವೇತನ ಹೆಚ್ಚಳ ಶೇಕಡ 9.3ರಷ್ಟಾಗಿದೆ. ಚೆನ್ನೆ ೖನಲ್ಲಿ ಇದು ಶೇ. 7.5 ಮತ್ತು ದೆಹಲಿಯಲ್ಲಿ ಶೇ.7.3ರಷ್ಟಿದೆ. ಸರಾಸರಿ ಮಾಸಿಕ ಏಕೀಕೃತ ಸಂಬಳವು ಬೆಂಗಳೂರಿನಲ್ಲಿ 29,500 ರೂ. ಇದ್ದು, ದೇಶದ ಇತರ ಮಹಾನಗರಗಳಿಗೆ ಹೋಲಿಸಿದರೆ ಇದು ಅತ್ಯಧಿಕವಾಗಿದೆ. ಚೆನ್ನೈನಲ್ಲಿ 24,500 ರೂ., ದೆಹಲಿಯಲ್ಲಿ 27,800 ರೂ., ಮುಂಬೈನಲ್ಲಿ 25,100 ರೂ., ಪುಣೆಯಲ್ಲಿ 24,700 ರೂ. ಇದೆ. ಈ ಪೈಕಿ ರಿಟೇಲ್ ವಲಯದಲ್ಲಿ ಶೇ.8.4ರಷ್ಟು ವೇತನ ಹೆಚ್ಚಳವಾಗಿದ್ದು, ಅದು ಇತರ ಎಲ್ಲ ವಲಯಗಳಿಗಿಂತ ಈ ವಿಷಯದಲ್ಲಿ ಮುಂದಿದೆ.

ಗ್ರಾಹಕ ಉತ್ಪನ್ನಗಳ ವಲಯ ಶೇ.5.2ರೊಂದಿಗೆ ದ್ವಿತೀಯ, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (ಬಿಎಫ್​ಎಸ್​ಐ) ವಲಯ ಶೇ.5.1ರೊಂದಿಗೆ ತೃತೀಯ ಸ್ಥಾನದಲ್ಲಿವೆ. ಲಾಜಿಸ್ಟಿಕ್ಸ್, ಎಫ್​ಎಂಸಿಜಿ, ಹೆಲ್ತ್ ಕೇರ್, ಫಾರ್ವಸ್ಯೂಟಿಕಲ್ಸ್, ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ ವಲಯಗಳಲ್ಲಿ ಮಧ್ಯಮ ಪ್ರಮಾಣದ ವೇತನ ಏರಿಕೆ ಆಗಿದೆ. ಅತಿ ಹೆಚ್ಚು ವೇತನ ನೀಡುವ ಉದ್ಯಮಗಳಲ್ಲಿ ದೂರಸಂಪರ್ಕ (29,200 ರೂ.), ಉತ್ಪಾದನೆ, ಇಂಜಿನಿಯರಿಂಗ್ ಮತ್ತು ಮೂಲಸೌಕರ್ಯ (28,200 ರೂ.), ಹೆಲ್ತ್​ಕೇರ್ ಮತ್ತು ಫಾರ್ವ (27,600 ರೂ.), ಕಟ್ಟಡ ನಿರ್ಮಾಣ ಮತ್ತು ರಿಯಲ್ ಎಸ್ಟೇಟ್ (27,000 ರೂ.) ಪ್ರಮುಖವಾಗಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಎಲ್ಲ ನಗರಗಳಲ್ಲಿ ಮತ್ತು ವಲಯಗಳಲ್ಲಿ ವೇತನ ಹೆಚ್ಚಳದೊಂದಿಗೆ ಭಾರತದ ಉದ್ಯೋಗ ಮಾರುಕಟ್ಟೆಯಲ್ಲಿ ಸಕಾರಾತ್ಮಕ ಬೆಳವಣಿಗೆ ಕಂಡುಬರುತ್ತಿದೆ. ಕಾಯಂ ಮತ್ತು ತಾತ್ಕಾಲಿಕ ಉದ್ಯೋಗಗಳ ವೇತನದ ನಡುವೆ ಇರುವ ಅಂತರ ಕಡಿಮೆಯಾಗುತ್ತಿದೆ. ಉದ್ಯೋಗದಾತರು ಪ್ರತಿಭೆ, ಕೌಶಲ್ಯಕ್ಕೆ ಹೆಚ್ಚು ಬೆಲೆ ಕೊಡುತ್ತಿದ್ದಾರೆ. ಆ ರೀತಿಯ ಕೆಲಸಗಾರರನ್ನು ಹೆಚ್ಚು ಕಾಲ ಉಳಿಸಿಕೊಳ್ಳಲು ಆಸಕ್ತಿ ವಹಿಸುತ್ತಿದ್ದಾರೆ.

| ಕಾರ್ತಿಕ್ ನಾರಾಯಣ್ ಸಿಇಒ, ಟೀಮ್ ಲೀಸ್