ಪ್ರಯಾಗರಾಜ್: ಕುಂಭ ಮೇಳದಲ್ಲಿ ಆಹಾರ ಮಳಿಗೆ ತೆರೆಯಲು ಸನಾತನೇತರರಿಗೆ ಅವಕಾಶ ನೀಡದಿರಲು ಮತ್ತು ಶಾಹಿಸ್ನಾನ, ಪೇಶ್ವಾಯ್, ರಾಜಸಿಸ್ನಾನ, ಛಾವ್ನಿ ಪ್ರವೇಶ ಮುಂತಾದ ಉರ್ದುಮಿಶ್ರಿತ ಪದಗಳ ಬದಲು ಶುದ್ಧ ಹಿಂದಿ ಪದಗಳನ್ನು ಬಳಸಲು ಅಖಿಲ ಭಾರತೀಯ ಅಖಾಡ ಪರಿಷತ್ ನಿರ್ಧರಿಸಿದೆ.
ಪದ ಬಳಕೆ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಮನವಿ ಮಾಡಲಾಗಿದ್ದು, ಅವರು ಸದ್ಯದಲ್ಲೇ ಈ ಬಗ್ಗೆ ಘೊಷಣೆ ಮಾಡಲಿದ್ದಾರೆ. ಆಹಾರ ಮಳಿಗೆಗಳ ಮಾರ್ಗಸೂಚಿ ಸಂಬಂಧ ದೀಪಾವಳಿ ಬಳಿಕ ನಿರ್ಣಯ ಕೈಗೊಂಡು ಸಿಎಂ ಒಪ್ಪಿಗೆಗಾಗಿ ಸಲ್ಲಿಸಲಾಗುವುದು. ಕುಂಭಮೇಳದ ಎಲ್ಲ ಕೆಲಸಕಾರ್ಯಗಳಿಗೆ ಸನಾತನಿ ನೌಕರರನ್ನು ಮಾತ್ರ ನೇಮಿಸಿಕೊಳ್ಳಬೇಕು; ಮದ್ಯಪಾನ ಮಾಡದ, ಮಾಂಸ ಸೇವಿಸದ ಪೊಲೀಸರನ್ನೇ ಭದ್ರತೆಗೆ ನಿಯೋಜಿಸಬೇಕು ಎಂಬ ನಿರ್ಣಯವನ್ನೂ ಕೈಗೊಳ್ಳಲಾಗುವುದು ಎಂದು ಪರಿಷತ್ನ ಮುಖ್ಯಸ್ಥ ರವೀಂದ್ರ ಪುರಿ ತಿಳಿಸಿದ್ದಾರೆ.
ಕಳೆದ ತಿಂಗಳು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಮಹಾಕಾಲನ ಮೆರವಣಿಗೆಯನ್ನು ಶಾಹಿ ಸವಾರಿ ಎಂಬುದರ ಬದಲು ರಾಜಶ್ರೀ ಸವಾರಿ ಎಂದು ಮುಖ್ಯಮಂತ್ರಿ ಮೋಹನ್ ಯಾದವ್ ಕರೆದಿದ್ದರು. ಅದಾದ ನಂತರ ಅಖಾಡ ಪರಿಷತ್ ಕೂಡ ಉರ್ದು ಪದಗಳ ಬದಲು ಹಿಂದಿ ಪದಗಳನ್ನು ಬಳಸಲು ಮುಂದಾಗಿದೆ. ಸಾಧುಗಳ ಸ್ನಾನವನ್ನು ಶಾಹಿಸ್ನಾನವೆಂದೂ, ಆಶ್ರಮದಿಂದ ಮೇಳದ ಪ್ರದೇಶದವರೆಗೆ ತೆರಳುವ ಮೆರವಣಿಗೆಯನ್ನು ಪೇಶ್ವಾಯ್ ಎಂದೂ ಮೊದಲಿನಿಂದ ಕರೆಯಲಾಗುತ್ತಿದೆ. ಆಹಾರ ಮಳಿಗೆಗಳಿಂದ ಸನಾತನೇತರರನ್ನು ದೂರವಿಡಲು ಇತ್ತೀಚಿನ ಘಟನೆಗಳು ಕಾರಣ. ಜ್ಯೂಸ್ನಲ್ಲಿ ಮೂತ್ರ ಮಿಕ್ಸ್ ಮಾಡುವುದು, ಆಹಾರದ ಮೇಲೆ ಉಗುಳುವುದು ಮುಂತಾದ ಪ್ರಕರಣಗಳು ಸಾಕಷ್ಟು ವರದಿಯಾಗಿವೆ ಎಂದು ಪುರಿ ವಿವರಿಸಿದರು.