ಶಿವಮೊಗ್ಗ: ರಾಮಮಂದಿರ ಏಕೆ ಬೇಡ? ಕೃತಿ ವಿವಾದದ ಹಿನ್ನೆಲೆಯಲ್ಲಿ ಸಾಹಿತಿ ಕೆ.ಎಸ್.ಭಗವಾನ್ ಮಂಗಳವಾರ ಸಾಗರ ನ್ಯಾಯಾಲಯಕ್ಕೆ ಹಾಜರಾಗಿದ್ದು, ಐದನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು ರೆಗ್ಯುಲರ್ ಜಾಮೀನು ಮಂಜೂರು ಮಾಡಿದ್ದಾರೆ.
ಭಗವಾನ್ ಅವರ ರಾಮಮಂದಿರ ಏಕೆ ಬೇಡ? ಕೃತಿಯಿಂದ ನಮ್ಮ ಮನಸ್ಸಿಗೆ ಘಾಸಿಯಾಗಿದೆ ಎಂದು ಸಂಘ ಪರಿವಾರದ ಕಾರ್ಯಕರ್ತ ಇಕ್ಕೇರಿಯ ಮಹಾಬಲೇಶ್ವರ ಎಂಬುವರು ಜೆಎಂಎಫ್ಸಿ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯ ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295(ಎ) ಅಡಿಯಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಿ 2022ರ ನ.2ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಮೈಸೂರು ಎಸ್ಪಿ ಮೂಲಕ ಸಮನ್ಸ್ ಜಾರಿ ಮಾಡಿತ್ತು. ಆದರೆ ಭಗವಾನ್ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಇದರಿಂದ ಜೆಎಂಎಫ್ಸಿ ನ್ಯಾಯಾಲಯ ಭಗವಾನ್ ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿತ್ತು. ಈ ಸಂಬಂಧ ಭಗವಾನ್ ನಿರೀಕ್ಷಣಾ ಜಾಮೀನು ಕೋರಿ 5ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಭಗವಾನ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ 10 ದಿನಗಳ ಒಳಗೆ ಪೊಲೀಸ್ ಮುಂದೆ ಹಾಜರಾಗುವಂತೆ ಹಾಗೂ 1 ಲಕ್ಷ ರೂ. ವೈಯಕ್ತಿಕ ಬಾಂಡ್ ನೀಡುವಂತೆ ಆದೇಶ ಮಾಡಿತ್ತು.
ಭಗವಾನ್ ಅವರು ಸಾಗರ ನ್ಯಾಯಾಲಯಕ್ಕೆ ಹಾಜರಾಗಿ ರೆಗ್ಯುಲರ್ ಜಾಮೀನಿಗೆ ಅರ್ಜಿ ಸಲ್ಲಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಶೀಶೈಲ ಬಗಾಡೆ ಜಾಮೀನು ಮಂಜೂರು ಮಾಡಿದರು. ನಂತರ ಭಗವಾನ್ ಅವರು ಪೇಟೆ ಠಾಣೆಗೆ ಹಾಜರಾದರು. ದೂರುದಾರರ ಪರ ವಕೀಲ ಕೆ.ವಿ.ಪ್ರವಿಣ್, ಭಗವಾನ್ ಪರವಾಗಿ ಎಚ್.ಬಿ. ರಾಘವೇಂದ್ರ ಮತ್ತು ಅಬ್ದುಲ್ ರಶೀದ್ ವಾದ ಮಂಡಿಸಿದರು.