ನ್ಯೂಸ್

ಬ್ಯಾಡ್ ಮ್ಯಾನರ್ಸ್ ಡೇ ಆಚರಣೆ! ಅಭಿಷೇಕ್, ರಚಿತಾ ಹುಟ್ಟುಹಬ್ಬಕ್ಕೆ ಹಾಡಿನ ಉಡುಗೊರೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ಪಾಪ್‌ಕಾರ್ನ್ ಮಂಕಿ ಟೈಗರ್’ ಚಿತ್ರ ತೆರೆಗೆ ಬಂದ ಮೂರು ವರ್ಷಗಳ ಬಳಿಕ ದುನಿಯಾ ಸೂರಿ ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಬ್ಯಾಡ್ ಮ್ಯಾನರ್ಸ್’. ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ವಿಶೇಷ ಅಂದರೆ ಇಬ್ಬರೂ ಮಂಗಳವಾರ (ಅ. 30) 31ನೇ ಹುಟ್ಟುಹಬ್ಬ ಆಚರಿಸಿಕೊಂಡರು.

ಅದೇ ದಿನ ‘ಬ್ಯಾಡ್ ಮ್ಯಾನರ್ಸ್’ ಚಿತ್ರತಂಡ ಹಾಡಿನ ಉಡುಗೊರೆ ನೀಡಿದೆ. ಈಗಾಗಲೇ ಚಿತ್ರದ ಮೂರು ಹಾಡುಗಳು ರಿಲೀಸ್ ಆಗಿದ್ದು, ಇದೀಗ ನಾಲ್ಕನೇ ಸಾಂಗ್ ಬಿಡುಗಡೆ ಮಾಡಲಾಗಿದೆ. ‘ಐ ಯಾಮ್ ಇನ್ ಲವ್ ಮೇದಿನಿ…’ ಎಂದು ಸಾಗುವ ಈ ರೊಮ್ಯಾಂಟಿಕ್ ಸಾಂಗ್‌ಗೆ ಯೋಗರಾಜ್ ಭಟ್ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಸಂಗೀತ ನೀಡುವ ಜತೆಗೆ ಹಾಡಿಗೆ ಧ್ವನಿಯಾಗಿದ್ದಾರೆ.

ಕೆಲವು ನೈಜ ಘಟನೆಗಳಿಗೆ ಕಮರ್ಷಿಯಲ್ ಟಚ್ ನೀಡಿರುವ ನಿರ್ದೇಶಕ ಸೂರಿ, ‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ಮಾಡಿದ್ದಾರೆ. ಪಾತ್ರಕ್ಕಾಗಿ ತೂಕ ಇಳಿಸಿಕೊಂಡು, ಸಾಕಷ್ಟು ತಯಾರಿ ನಡೆಸಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಅಭಿಷೇಕ್ ಅಂಬರೀಶ್. ಚಿತ್ರಕ್ಕೆ ರವಿವರ್ಮ ಸಾಹಸ ಸಂಯೋಜನೆ, ದೀಪು ಎಸ್. ಕುಮಾರ್ ಸಂಕಲನವಿರಲಿದೆ. ಈಗಾಗಲೇ ಚಿತ್ರದ ಬಹುತೇಕ ಕೆಲಸ ಪೂರ್ಣಗೊಂಡಿದ್ದು, ಎಲ್ಲವೂ ಅಂದುಕೊಂಡಂತಾದರೆ ಸಿನಿಮಾ ಇದೇ ಮಾಸಾಂತ್ಯಕ್ಕೆ ತೆರೆಗೆ ಬರಲಿದೆ.