More

    ತೆರೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ ‘ರಾಮಾ ರಾಮಾ ರೇ’ ಸತ್ಯಪ್ರಕಾಶ್; ಅವರಿನ್ನು ನಟ-ನಿರ್ಮಾಪಕ-ವಿತರಕ-ನಿರ್ದೇಶಕ

    ಬೆಂಗಳೂರು: ‘ರಾಮಾ ರಾಮಾ ರೇ’ ಚಿತ್ರ ಖ್ಯಾತಿಯ ನಿರ್ದೇಶಕ-ನಿರ್ಮಾಪಕ ಸತ್ಯಪ್ರಕಾಶ್​ ಇನ್ನು ತೆರೆ ಮೇಲೂ ಕಾಣಿಸಿಕೊಳ್ಳಲಿದ್ದಾರೆ. ಅರ್ಥಾತ್, ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಅಭಿನಯ ಕೂಡ ಮಾಡಲಿದ್ದಾರೆ. ಈ ಮೂಲಕ ‘ಒಂದಲ್ಲಾ ಎರಡಲ್ಲಾ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅವರ ನಿಜಜೀವನದಲ್ಲೂ ಒಂದಲ್ಲ ಎರಡಲ್ಲ ಎಂಬುದು ಕೂಡ ನಿಜವಾಗಿದೆ. ಅಂದರೆ ಅವರಿನ್ನು ವಿತರಕ-ನಿರ್ಮಾಪಕ-ನಿರ್ದೇಶಕರಾಗಿ ಮಾತ್ರವಲ್ಲದೆ ನಟರಾಗಿಯೂ ಗುರುತಿಸಿಕೊಳ್ಳಲಿದ್ದಾರೆ.

    ನಿರ್ದೇಶಕರು ತಮ್ಮ ಚಿತ್ರದ ಕಥೆಯನ್ನು ತೆರೆ ಮೇಲೆ ತರುವಾಗ ತಾವೂ ಅಭಿನಯಿಸುತ್ತಿರುವುದರ ಪಟ್ಟಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಸತ್ಯಪ್ರಕಾಶ್ ಕೂಡ ಸೇರ್ಪಡೆ ಆಗಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಇವರ ನಿರ್ದೇಶನಲ್ಲಿ ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಎಂಬ ಸಿನಿಮಾ ಮೂಡಿ ಬಂದಿತ್ತು. ಈಗ ಅವರು ತಮ್ಮ ಮುಂದಿನ ಚಿತ್ರ ನಿರ್ದೇಶನ ಮಾಡಲು ಸಜ್ಜಾಗಿದ್ದು, ಅದರಲ್ಲಿನ ಒಂದು ಪ್ರಮುಖ ಪಾತ್ರದಲ್ಲಿ ಅವರೇ ಅಭಿನಯಿಸಲಿದ್ದಾರೆ.

    ಕೊಂಚ ಫ್ಯಾಂಟಸಿ ಮತ್ತು ಕಮರ್ಷಿಯಲ್‌ ಎಲಿಮೆಂಟ್‌ಗಳಿರುವ ಈ ಹೊಸ ಸಿನಿಮಾದಲ್ಲಿ ಫ್ರೆಶ್‌ ಆಗಿರುವ ನಕ್ಕು ನಗಿಸುವಂತಹ ಕಥೆಯನ್ನು ಅವರು ತೆರೆ ಮೇಲೆ ತರಲಿದ್ದಾರೆ. ಈ ಚಿತ್ರದಲ್ಲಿ ಸತ್ಯಪ್ರಕಾಶ್‌ ಜತೆಗೆ ಅಥರ್ವ ಪ್ರಕಾಶ್ ಎಂಬ ಯುವಕ ಕೂಡ ನಟಿಸುತ್ತಿದ್ದಾರೆ. ‘ಮ್ಯಾನ್‌ ಆಫ್‌ ದಿ ಮ್ಯಾಚ್‌’ ಸಿನಿಮಾದಲ್ಲೂ ಅಥರ್ವ ಪ್ರಕಾಶ್ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸಿ ಗಮನ ಸೆಳೆದಿದ್ದರು.

    ವಿಶೇಷ ಎಂದರೆ ಈ ಸಿನಿಮಾದಲ್ಲಿ ಸತ್ಯಪ್ರಕಾಶ್‌ ನಿರ್ದೇಶನ ಮತ್ತು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಸತ್ಯ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಮೂಡಿ ಬರಲಿರುವ ಈ ಚಿತ್ರದ ಘೋಷಣೆಯಷ್ಟೇ ಆಗಿದ್ದು, ಇನ್ನೂ ಶೀರ್ಷಿಕೆ ನಿಗದಿ ಆಗಿಲ್ಲ. ಸತ್ಯಪ್ರಕಾಶ್‌ ಅವರ ಹಿಂದಿನ ಸಿನಿಮಾಗಳಲ್ಲಿ ಕೆಲಸ ಮಾಡಿದ ತಂತ್ರಜ್ಞರ ತಂಡವೇ ಈ ಚಿತ್ರದಲ್ಲಿಯೂ ಮುಂದುವರಿಯಲಿದೆ. ಸ್ಯಾಂಡಲ್‌ವುಡ್‌ನ ಪ್ರಮುಖ ಕಲಾವಿದರು ಈ ಸಿನಿಮಾದ ಭಾಗವಾಗಲಿದ್ದಾರೆ.

    Atharva Prakash, D Satya Prakash
    ಅಥರ್ವ ಪ್ರಕಾಶ್, ಸತ್ಯ ಪ್ರಕಾಶ್

    ಸದ್ಯದಲ್ಲೇ ಸಣ್ಣ ಟೀಸರ್‌ ಮೂಲಕ ಟೈಟಲ್‌ ಅವರು ಅನೌನ್ಸ್‌ ಮಾಡಲಿದ್ದಾರಂತೆ. ಇನ್ನೊಂದು ವಿಶೇಷ ಎಂದರೆ ಸತ್ಯಪ್ರಕಾಶ್‌ ಕಥೆ ಬರೆದಿರುವ ‘ಕಾಲಾ ಪತ್ಥರ್‌’ ಮತ್ತು ‘ಅನ್ಲಾಕ್‌ ರಾಘವ’ ಕೂಡ ಇದೇ ವರ್ಷ ಬಿಡುಗಡೆಯಾಗಲಿದೆ. ಈ ಎರಡೂ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಒಂದು ನಿರೀಕ್ಷೆ ಇದೆ.

    ‘ನಾನು ನಿರ್ದೇಶಿಸಲಿರುವ ಈ ಚಿತ್ರದ ಕಥೆಯನ್ನು ನಾನೇ ಬರೆದಿದ್ದೇನೆ. ಈ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳು ಬರಲಿದ್ದು, ಒಂದನ್ನು ನಾನು ನಿರ್ವಹಿಸುತ್ತಿದ್ದೇನೆ. ಪಾತ್ರಕ್ಕೆ ನಾನು ಸೂಕ್ತವಾಗಿ ಹೊಂದಿಕೆಯಾಗುತ್ತೇನೆ ಎಂದು ಅನಿಸಿದ ಮೇಲೆ ನಟನಾಗಲು ನಿರ್ಧರಿಸಿದೆ. ಈಗಾಗಲೇ ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಪ್ರೇಕ್ಷಕರನ್ನು ನಕ್ಕು ನಗಿಸುತ್ತ ಒಂದು ಭಾವನಾತ್ಮಕ ಕಥೆಯನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನವಾಗಲಿದೆ’ ಎಂದು ಸತ್ಯಪ್ರಕಾಶ್ ತಿಳಿಸಿದ್ದಾರೆ.

    ‘ರಾಮಾ ರಾಮಾ ರೇ’, ‘ಒಂದಲ್ಲಾ ಎರಡಲ್ಲಾ’ ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಎಂದು ಹೆಸರು ಮಾಡಿದ್ದ ಅವರು ತಮ್ಮ ಮೊದಲೆರೆಡು ಸಿನಿಮಾಗಳಿಗೆ ಚಿತ್ರಗಳಿಗೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ನಿರ್ದೇಶನದ ಜತೆಗೆ ತಮ್ಮದೇ ಬ್ಯಾನರ್​ನಲ್ಲಿ ನಿರ್ಮಾಣವನ್ನೂ ಮಾಡುವ ಸತ್ಯಪ್ರಕಾಶ್ ಕಳೆದ ಒಂದೂವರೆ ವರ್ಷಗಳಿಂದ ಸಿನಿಮಾಗಳ ವಿತರಣೆ ಸಹ ಮಾಡುತ್ತಿದ್ದಾರೆ. ಈಗಾಗಲೇ 35ಕ್ಕೂ ಹೆಚ್ಚಿನ ಸಿನಿಮಾಗಳನ್ನು ಸತ್ಯ ಸಿನಿ‌ ಡಿಸ್ಟ್ರಿಬ್ಯೂಟರ್ಸ್ ವತಿಯಿಂದ ವಿತರಿಸಿದ್ದಾರೆ.

    ಸಿನಿಮಾದ ಹಲವರಿಗೆ ಸಾಹಿತ್ಯದ ಅರಿವಿಲ್ಲ; ನೀವಂದ್ಕೊಂಡಷ್ಟು ಮೂರ್ಖರಲ್ಲ ಸಿನಿಮಾದವರು: ಸಾಹಿತಿ-ನಿರ್ದೇಶಕರ ಮಧ್ಯೆ ಜಾತಿಸಂಘರ್ಷ

    ಎಲಾನ್​ ಮಸ್ಕ್​ನ ಒಂದು ಸೆಕೆಂಡ್​ನ ಆದಾಯ ಎಷ್ಟು?; ಒಂದು ರಾತ್ರಿಯ ಸಂಪಾದನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts