ನ್ಯೂಸ್

ರಾಜ್ಯದಲ್ಲಿ ಚುನಾವಣೆಗಳ ಅಬ್ಬರ: ಕಸಾಪ, ಒಕ್ಕಲಿಗರ ಸಂಘ, ಬ್ರಾಹ್ಮಣ ಮಹಾಸಭಾ ಹಣಾಹಣಿ

Webdesk - Ravikanth
ಎರಡು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆ ಕಾವು ಕಡಿಮೆಯಾದ ಬೆನ್ನಲ್ಲೇ ಇದೀಗ ವಿಧಾನ ಪರಿಷತ್ ಚುನಾವಣಾ ಕಣ ರಂಗೇರುತ್ತಿದ್ದರೆ, ಇತ್ತ ಮೂರು ರಾಜಕೀಯೇತರ ಚುನಾವಣೆಗಳ ಅಬ್ಬರವೂ ಜೋರಾಗಿದೆ. ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೇ ಕರೆಯಲ್ಪಡುವ ಕನ್ನಡ ಸಾಹಿತ್ಯ ಪರಿಷತ್ತು ಎಲ್ಲ ಜಾತಿ ಮತ ಸಂಪ್ರದಾಯಗಳ ಕನ್ನಡಿಗರನ್ನು ಒಳಗೊಂಡಿದ್ದರೆ, ಸಮುದಾಯ ಆಧಾರಿತ ಪ್ರತಿಷ್ಠಿತ ಸಂಸ್ಥೆಗಳಾದ ರಾಜ್ಯ ಒಕ್ಕಲಿಗರ ಸಂಘ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಹೊಸ್ತಿಲಲ್ಲಿವೆ. ರಾಜಕೀಯೇತರ ಸಂಸ್ಥೆಗಳಾದರೂ ಪರೋಕ್ಷವಾಗಿ ರಾಜಕೀಯ ಶಕ್ತಿಗಳು ತಮ್ಮ ಪ್ರಭಾವ ಬೀರುತ್ತಿರುವುದರಿಂದ ಹೆಚ್ಚು ಅಬ್ಬರ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ರಮೇಶ ದೊಡ್ಡಪುರ ವಿಶೇಷ ವರದಿ ಇಲ್ಲಿದೆ.

ರಂಗೇರಿದ ಒಕ್ಕಲಿಗರ ಅಖಾಡ

ರಾಜ್ಯದ, ಅದರಲ್ಲೂ ಹಳೆ ಮೈಸೂರು ಕರ್ನಾಟಕ ಭಾಗದ ಪ್ರಬಲ ಒಕ್ಕಲಿಗ ಸಮುದಾಯದ ಪ್ರತಿಷ್ಠಿತ ರಾಜ್ಯ ಒಕ್ಕಲಿಗರ ಸಂಘದ ಚುನಾವಣೆ ಈಗಾಗಲೆ ಬಿಸಿ ಪಡೆದುಕೊಂಡಿದೆ. ತಮ್ಮ ಕಾಲಾವಧಿಯಲ್ಲಿ ಕೈಗೊಳ್ಳಲಿರುವ ಸುಧಾರಣೆಗಳ ಜತೆಗೆ ಅಭ್ಯರ್ಥಿಗಳು ಈ ಹಿಂದೆ ಅಧಿಕಾರ ನಡೆಸಿದವರ ವಿರುದ್ಧ ಆರೋಪ ಪ್ರತ್ಯಾರೋಪ, ಸುದ್ದಿಗೋಷ್ಠಿಯ ಸ್ವರೂಪದಲ್ಲಿ ರಾಜಕೀಯ ಚುನಾವಣೆಯನ್ನೇ ಹೋಲುವಂತಿದೆ.

ಮುಖ್ಯವಾಗಿ 11 ಜಿಲ್ಲೆಗಳ, ಹೊರರಾಜ್ಯದ ಸುಮಾರು 4.9 ಲಕ್ಷ ಆಜೀವ ಸದಸ್ಯರು ಡಿ.12ರಂದು ನಡೆಯುವ ಚುನಾವಣೆ ಯಲ್ಲಿ ಮತ ಚಲಾಯಿಸಲು ಅರ್ಹರಾಗಿದ್ದಾರೆ. ಕಾರ್ಯಕಾರಿ ಸಮಿತಿಗೆ ಒಟ್ಟು 35 ಸದಸ್ಯರುಗಳನ್ನು ಮುಂದಿನ ಐದು ವರ್ಷ ಅವಧಿಗೆ ಆಯ್ಕೆ ಮಾಡುತ್ತಾರೆ. ಡಿ.15ರಂದು ಮತ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಆಗಲಿದೆ.

ಒಕ್ಕಲಿಗರ ಸಂಘದ ಚುನಾವಣೆ ವಿಭಿನ್ನವಾಗಿ ನಡೆ ಯುತ್ತದೆ. ಜಿಲ್ಲೆ ಹಾಗೂ ಕೆಲವು ಜಿಲ್ಲೆಗಳ ಗುಂಪುಗಳನ್ನು ಆಧರಿಸಿ ನಿರ್ದೇಶಕರನ್ನು ನಿಗದಿ ಮಾಡಲಾಗಿರುತ್ತದೆ. ಉದಾಹರಣೆಗೆ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಸೇರಿಸಿ ಒಟ್ಟು 15 ಜನರನ್ನು ಆಯ್ಕೆ ಮಾಡಬೇಕಿದ್ದು, ಈ ಭಾಗದ ಪ್ರತಿ ಮತದಾರರೂ ತಲಾ 15 ಮತ ಚಲಾಯಿಸಬಹುದು. ಹೀಗೆ ಜಿಲ್ಲೆಗೆ ಅನುಗುಣವಾಗಿ ನಿರ್ದೇಶಕರ ಸಂಖ್ಯೆ, ಮತಗಳನ್ನು ಚಲಾಯಿಸಲು ಅವಕಾಶ ಇರುತ್ತದೆ. ಅನೇಕರು ಆಕಾಂಕ್ಷಿಗಳ ಗುಂಪನ್ನು (ಸಿಂಡಿಕೇಟ್)ರಚಿಸಿಕೊಂಡು ಅಖಾಡಕ್ಕೆ ಇಳಿಯುತ್ತಿದ್ದಾರೆ. ಸಾವಿರಾರು ಕೋಟಿ ರೂ. ಮೊತ್ತದ ಆಸ್ತಿ, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳನ್ನು ಹೊಂದಿರುವ ಸಂಘಕ್ಕೆ ಆಯ್ಕೆಯಾಗಲು ಕೋಟ್ಯಂತರ ರೂ. ವೆಚ್ಚವನ್ನೂ ಮಾಡಲಾಗುತ್ತದೆ. ಸಾಂಪ್ರದಾಯಿಕವಾಗಿ ಜೆಡಿಎಸ್, ಕಾಂಗ್ರೆಸ್ ತಮ್ಮ ಕೆಲವು ನಾಯಕರ ಮೂಲಕ ಒಕ್ಕಲಿಗರ ಸಂಘದ ಚುನಾವಣೆಯಲ್ಲಿ ಪಾತ್ರ ವಹಿಸುತ್ತಿದ್ದವು. ಈ ಬಾರಿ ಬಿಜೆಪಿಯಿಂದ ಬೆಂಬಲಿತ ಸಿಂಡಿಕೇಟ್ ಪ್ರಚಾರ ಆರಂಭಿಸಿದೆ ಎನ್ನಲಾಗಿದ್ದು, ಮತ್ತಷ್ಟು ಕುತೂಹಲ ಕೆರಳಿಸಿದೆ.

ಕನ್ನಡ ಸಾಹಿತ್ಯ ಪರಿಷತ್ ಬಿಗ್​ಫೈಟ್

ಶತಮಾನ ಪೂರೈಸಿರುವ ಕನ್ನಡ ಸಾಹಿತ್ಯ ಪರಿಷತ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಐದು ವರ್ಷದ ಬಳಿಕ ನ.21ಕ್ಕೆ ಚುನಾವಣೆ ನಡೆಯುತ್ತಿದೆ. ಮೂರು ವರ್ಷಕ್ಕೆ ನಡೆಯಬೇಕಿದ್ದ ಕಸಾಪ ಚುನಾವಣೆ ಬೈಲಾ ಬದಲಾವಣೆಯಿಂದಾಗಿ ಐದು ವರ್ಷಕ್ಕೆ ಹೆಚ್ಚಳವಾಗಿದೆ. ಅಧ್ಯಕ್ಷ ಸ್ಥಾನಕ್ಕೆ 21 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಈಗಾಗಲೆ ಬಿರುಸಿನ ಪ್ರಚಾರ ನಡೆಯುತ್ತಿದೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅನೇಕ ಸ್ಪರ್ಧಿಗಳಿದ್ದಾರೆ. ಎಲ್ಲ ತಾಲೂಕು ಕೇಂದ್ರಗಳು ಹಾಗೂ ಬೆಂಗಳೂರು ನಗರ ಜಿಲ್ಲೆಯ 27 ವಿಧಾನಸಭೆ ಕ್ಷೇತ್ರಗಳಲ್ಲಿ ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಲು ಈ ಬಾರಿ 3,10,109 ಮತದಾರರು ಅರ್ಹರಾಗಿದ್ದಾರೆ. ನ.24 ರಂದು ಫಲಿತಾಂಶ ಘೋಷಿಸಲಾಗುವುದು. ಬೆಂಗಳೂರಿನ ಒಂದೇ ಮತಗಟ್ಟೆಯಲ್ಲಿ ನಡೆಯುತ್ತಿದ್ದ ಚುನಾವಣೆ ಇದೀಗ 28 ವಿಧಾನಸಭಾ ಕ್ಷೇತ್ರಗಳಲ್ಲೂ ವಿಕೇಂದ್ರೀಕೃತಗೊಂಡಿರುವುದು ಇದೇ ಮೊದಲು. ಚುನಾವಣೆಯಲ್ಲಿ ಮತದಾರರನ್ನು ತಮ್ಮತ್ತ ಸೆಳೆಯಲು ತಮ್ಮ ಆಶ್ವಾಸನೆಗಳನ್ನು ನೀಡುತ್ತ, ಅನೇಕ ವಿಷಯಗಳ ಚರ್ಚೆ ನಡೆಯುತ್ತಿದೆ. ಕಸಾಪವನ್ನು ಆಧುನೀಕರಣಗೊಳಿಸುವುದು, ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಅನುಷ್ಠಾನ ಸೇರಿ ಅನೇಕ ವಿಚಾರಗಳು ಪ್ರಚಾರದಲ್ಲಿ ಪ್ರಸ್ತಾಪವಾಗುತ್ತಿವೆ. ಇದೇ ವೇಳೆ ಕೆಲ ಅಭ್ಯರ್ಥಿಗಳು ವಿವಿಧ ಉಡುಗೊರೆಗಳ ಆಮಿಷ ಒಡ್ಡುತ್ತಿದ್ದರೆ ಮತ್ತೆ ಕೆಲವರು ಬಿಜೆಪಿ ಕಾಂಗ್ರೆಸ್, ಜೆಡಿಎಸ್, ಆರೆಸ್ಸೆಸ್​ನಂತಹ ಹೊರಗಿನ ಶಕ್ತಿಗಳ ಬೆಂಬಲವನ್ನೂ ಪಡೆಯುತ್ತಿರುವುದು ಕಂಡುಬರುತ್ತಿದೆ.

ಬ್ರಾಹ್ಮಣ ಮಹಾಸಭಾ ಬಿಸಿ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಬಿಸಿಯೂ ಜೋರಾಗಿದೆ. ಮಹಾಸಭಾಕ್ಕೆ 44 ಸಾವಿರ ಸದಸ್ಯರಿದ್ದು, ಇದರಲ್ಲಿ ಶೇ.60 ಅಂದರೆ 26 ಸಾವಿರ ಸದಸ್ಯರು ಬೆಂಗಳೂರಿನಲ್ಲೇ ಇದ್ದಾರೆ. ಅನೇಕ ದಶಕಗಳಿಂದ ಒಟ್ಟಾರೆ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸುತ್ತದೆ ಎಂಬ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಚರ್ಚೆ ಆಗುತ್ತದೆ.

ಇನ್ನೂ ಚುನಾವಣೆ ದಿನಾಂಕಗಳು ಘೋಷಣೆ ಯಾಗ ಬೇಕಿದ್ದರೂ, ಆಕಾಂಕ್ಷಿಗಳು ಚುನಾ ವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ. ಸದ್ಯ ಮೂವರು ಅಭ್ಯರ್ಥಿಗಳು ಪ್ರಚಾರ ಕಣದಲ್ಲಿದ್ದು, ಚುನಾವಣೆ ಘೊಷಣೆ ಆದ ನಂತರ ಹೆಚ್ಚುವ ಸಾಧ್ಯತೆಯಿದೆ. ಸಾಂಸ್ಥಿಕ ಸ್ವರೂಪದಲ್ಲಿ ಬದಲಾವಣೆ, ಮತ್ತಷ್ಟು ಪ್ರಮಾಣದಲ್ಲಿ ಸಮುದಾಯವನ್ನು ಒಳಗೊಳ್ಳುವಿಕೆ, ಸಮುದಾಯದ ಅಶಕ್ತರಿಗೆ ನೆರವಿನಂತಹ ಘೊಷಣೆಗಳು ಕೇಳಿಬರುತ್ತಿವೆ. ಈ ನಡುವೆ ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರಿ ಮತ್ತು ವಸಿಷ್ಠ ಬ್ಯಾಂಕ್​ಗಳ ವಿಚಾರ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಈ ಬ್ಯಾಂಕ್​ಗಳ ವ್ಯವಹಾರದಲ್ಲಿ ಮಹಾಸಭಾದ ನಿಕಟಪೂರ್ವ ಅಧ್ಯಕ್ಷರ ಹೆಸರು ತಳುಕು ಹಾಕಿಕೊಂಡಿರುವುದರಿಂದ, ಅವರ ರಕ್ಷಣೆಗೆ ಒಂದು ಗುಂಪು ಕೆಲಸ ಮಾಡುತ್ತಿದೆ ಎಂಬ ಆರೋಪ ಮತ್ತೊಂದು ಗುಂಪಿನಿಂದ ಕೇಳಿಬರುತ್ತಿದೆ.

ಬೆಂಗಳೂರಿನಲ್ಲೆ ಅತಿ ಹೆಚ್ಚು ಮತದಾರರಿರುವ ಕಾರಣಕ್ಕೆ ಈ ವಿಷಯ ಪ್ರಭಾವ ಬೀರುವ ಸಾಧ್ಯತೆ ಇದೆ. ಅಭ್ಯರ್ಥಿಗಳ ಪರವಾಗಿ ಚಲನಚಿತ್ರ ಕಲಾವಿದರು, ನಿವೃತ್ತ ನ್ಯಾಯಮೂರ್ತಿಗಳು, ಶಾಸಕರು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರು ಸೇರಿ ಅನೇಕರು ಭಾಗವಹಿಸುತ್ತಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಪರೋಕ್ಷ ಪ್ರಭಾವವನ್ನೂ ಕಾಣಬಹುದಾಗಿದೆ.