ನ್ಯೂಸ್

ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಅಧಿಕಾರ ಸ್ವೀಕಾರ

ಬೆಂಗಳೂರು: ನಗರದ 36ನೇ ಪೊಲೀಸ್ ಆಯುಕ್ತರಾಗಿ ಕಮಲ್ ಪಂತ್ ಇಂದು(ಶನಿವಾರ) ಬೆಳಗ್ಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅಧಿಕಾರ ಹಸ್ತಾಂತರಿಸಿದರು. ಈ ಕ್ಷಣಕ್ಕೆ ಕಮಲ್ ಪಂತ್ ಕುಟುಂಬಸ್ಥರೂ ಸಾಕ್ಷಿಯಾದರು.

ಕರೊನಾ ಸೋಂಕಿನಿಂದ ಮೃತಪಟ್ಟ ಪೊಲೀಸ್​ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸ್ಮರಿಸಿದ ನೂತನ ಪೊಲೀಸ್ ಆಯುಕ್ತರು, 'ಇಂದು ನಾನು ಬೆಂಗಳೂರು ನಗರ ಪೊಲೀಸ್ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಸರ್ಕಾರ ಕೊಟ್ಟ ಈ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ' ಎಂದರು.

ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಮಾತನಾಡಿದ ಕಮಲ್​ ಪಂತ್​, 'ಮಹಿಳೆಯರು, ಮಕ್ಕಳು, ವೃದ್ಧರ ರಕ್ಷಣೆ ನಮ್ಮ ಹೊಣೆ' ಎಂದು ಜನರಿಗೆ ಅಭಯ ನೀಡಿದರು.

'ಸೈಬರ್ ಕ್ರೈಂ, ಮಾದಕವಸ್ತು ಮಾರಾಟ ಜಾಲ ಮತ್ತು ರೌಡಿಗಳ ಮೇಲೆ ಹದ್ದಿನ ಕಣ್ಣಿಡಲಾಗುವುದು' ಎನ್ನುವ ಮೂಲಕ ಪಾತಕಿಗಳ ಅಟ್ಟಹಾಸಕ್ಕೆ ಬ್ರೇಕ್​ ಹಾಕುವುದಾಗಿ ಎಚ್ಚರಿಸಿದರು.

ಕಮಲ್ ಪಂತ್ ಪೊಲೀಸ್​ ಆಯುಕ್ತರಾಗಿ ಅಧಿಕಾರ ಸ್ವೀಕಾರ ಕ್ಷಣದಲ್ಲಿ ಕೆಎಸ್​ಆಪಿ ಸಿಬ್ಬಂದಿ ಗಾರ್ಡ್ ಆಫ್ ಆನರ್ ನೀಡಿದರು. ಇದೇ ವೇಳೆ ಖುದ್ದು ಮಹಿಳಾ ಡಿಸಿಪಿ ಮತ್ತು ಎಸಿಪಿಗಳ ಮನವಿ ಮೇರೆಗೆ ಅವರೊಟ್ಟಿಗೆ ಭಾಸ್ಕರ್ ರಾವ್ ಫೋಟೋ ಶೂಟ್ ಮಾಡಿಸಿಕೊಂಡರು. ನಗರದ ಜಂಟಿ ಪೊಲೀಸ್ ಆಯುಕ್ತರು, ಡಿಸಿಪಿಗಳು ಉಪಸ್ಥಿತರಿದ್ದರು.