Jagdeep Dhankhar : ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ನಮ್ಮ ಹೃದಯದಲ್ಲಿ ನೆಲೆಸಿದ್ದಾರೆ. ಸ್ವಾತಂತ್ರ್ಯದ ಅಮೃತ ಕಾಲಘಟ್ಟದಲ್ಲಿರುವ ನಾವು ಅವರ ಸಂದೇಶಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ಜತೆಯಲ್ಲಿ ಇರಿಸಿಕೊಳ್ಳಬೇಕಾಗಿದೆ ಎಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ಹೇಳಿದರು.
ನವದೆಹಲಿಯ ಉಪರಾಷ್ಟ್ರಪತಿ ಭವನದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಅವರ ‘ಅಂಬೇಡ್ಕರ್ ಸಂದೇಶಗಳು’ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಧನಕರ್, ಅಂಬೇಡ್ಕರ್ ಅವರ ಸಂದೇಶಗಳ ಸಮಕಾಲೀನ ಪ್ರಸ್ತುತತೆಯನ್ನು ಎತ್ತಿ ತೋರಿಸುವ ಪುಸ್ತಕ ಇದಾಗಿದೆ. ಅಂಬೇಡ್ಕರ್ ನಮ್ಮ ಹೃದಯದಲ್ಲಿ ಸದಾ ನೆಲೆಸಿರುತ್ತಾರೆ. ಅವರು ನಮ್ಮ ಮನಸ್ಸಿನಲ್ಲಿ ಪ್ರಾಬಲ್ಯ ಹೊಂದಿರುವುದಲ್ಲದೆ, ನಮ್ಮ ಆತ್ಮವನ್ನೂ ಮುಟ್ಟಿದ್ದಾರೆ. ಅಂಬೇಡ್ಕರ್ ಸಂದೇಶಗಳು ನಮ್ಮ ಕುಟುಂಬ ವರ್ಗದವರಿಗೂ ತಲುಪಬೇಕು. ವಿಶೇಷವಾಗಿ ಈಗಿನ ಪೀಳಿಗೆಯ ಮಕ್ಕಳು ಈ ಸಂದೇಶಗಳ ಬಗ್ಗೆ ತಿಳಿದುಕೊಳ್ಳಬೇಕು. ದೇಶದ ಉಪರಾಷ್ಟ್ರಪತಿ ಯಾಗಿ, ರಾಜ್ಯಸಭೆಯ ಅಧ್ಯಕ್ಷರಾಗಿ ಸಂಸತ್ತಿನೊಂದಿಗೆ ಸಂಬಂಧ ಹೊಂದಿರುವ ವ್ಯಕ್ತಿಯಾಗಿ, ನಾನು ಅಂಬೇಡ್ಕರ್ ಅವರ ಸಂದೇಶಗಳನ್ನು ಸ್ವೀಕರಿಸಲು ತೃಪ್ತನಾಗಿದ್ದೇನೆ, ಈ ಸಂದೇಶಗಳನ್ನು ದೇಶಾದ್ಯಂತ ಸಂಸದರು ಮತ್ತು ಶಾಸಕರು, ನೀತಿ ನಿರೂಪಕರು ಗೌರವಿಸಬೇಕಿದೆ ಎಂದರು.
ಸಂವಿಧಾನವನ್ನು ನಾವು ಅರ್ಪಣೆ ಮಾಡಿಕೊಂಡು 75 ವರ್ಷಗಳಾಗಿದೆ. 1975ರಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿ ಪ್ರಜಾಪ್ರಭುತ್ವ ಕತ್ತಲಿಗೆ ಸರಿದಿತ್ತು .ಅಂದು ಅಂಬೇಡ್ಕರ್ ಅವರ ಆತ್ಮ ನೋವು ಪಟ್ಟಿರುತ್ತದೆ. ಸಂವಿಧಾನದ ಪ್ರಸ್ತಾವನೆ ಎಂಬುದು ಜನರ ಆತ್ಮ ಇದ್ದಂತೆ, ಯಾರೂ ಪ್ರಸ್ತಾವನೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಸಂವಿಧಾನಕ್ಕೆ ತಿದ್ದುಪಡಿ ತಂದು ಜಾತ್ಯತೀತ, ಸಮಾಜವಾದಿ ಪದಗಳನ್ನು ಸೇರಿಸಲಾಯಿತು. 21 ತಿಂಗಳು ತುರ್ತು ಪರಿಸ್ಥಿತಿಯನ್ನು ದೇಶದ ಮೇಲೆ ಹೇರಲಾಯಿತು. ಸಂವಿಧಾನದ ಕತ್ತಲು ಸಮಯ ಎಂದರೆ ಅದು ತುರ್ತು ಪರಿಸ್ಥಿತಿಯ ಸಮಯ. ಪ್ರಜಾಪ್ರಭುತ್ವದ ಅತ್ಯಂತ ಕರಾಳ ಅವಧಿಯಾದ ತುರ್ತು ಪರಿಸ್ಥಿತಿಯಲ್ಲಿ, ಜನರು ಕಂಬಿಗಳ ಹಿಂದೆ ಸರಿದಿದ್ದು, ಅವರ ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು. 1973ರಲ್ಲಿ ಕೇರಳ ರಾಜ್ಯದ 13 ನ್ಯಾಯಾಧೀಶರ ಪೀಠ ಸಂವಿಧಾನ ಪೀಠಿಕೆಯ ಮೇಲೆ ಗಮನಹರಿಸಿದ್ದರು ಹಾಗೂ ಆಳವಾಗಿ ಈ ಬಗ್ಗೆ ಚಿಂತಿಸಿದ್ದರು. ಪ್ರಸಿದ್ಧ ನ್ಯಾಯಾಧೀಶ ನ್ಯಾ.ಎಚ್.ಆರ್. ಖನ್ನಾ, ಪೀಠಿಕೆಯು ಸಂವಿಧಾನದ ವ್ಯಾಖ್ಯಾನಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ ಹಾಗೂ ಸಂವಿಧಾನವು ತನ್ನ ಅಧಿಕಾರ ಪಡೆಯುವ ಮೂಲವನ್ನು ಸೂಚಿಸುತ್ತದೆ ಎಂದಿದ್ದರು ಎಂದು ತುರ್ತು ಪರಿಸ್ಥಿತಿಯ ದಿನಗಳ ಬಗ್ಗೆ ಧನಕರ್ ವಿವರಣೆ ನೀಡಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ.ವಿಜಯ ಸಂಕೇಶ್ವರ ಅವರ ವ್ಯಕ್ತಿತ್ವವನ್ನು ಉಪರಾಷ್ಟ್ರಪತಿ ಜಗದೀಪ್ ಧನಕರ್ ಕೊಂಡಾಡಿದರು. ನನಗೆ ಹಲವು ವರ್ಷಗಳಿಂದ ಸಂಕೇಶ್ವರ ಪರಿಚಿತರು, ಅವರು ಈ ಹಿಂದೆ ಸಂಸದರೂ ಆಗಿದ್ದವರು. ದೊಡ್ಡ ಉದ್ಯಮ ಸ್ಥಾಪಿಸುವ ಮೂಲಕ ಹಲವರಿಗೆ ಉದ್ಯೋಗದಾತರಾಗಿದ್ದಾರೆ. ದೇಶದೆಲ್ಲೆಡೆ ಜನರಿಗೆ ಉದ್ಯೋಗ ಕಲ್ಪಿಸುವ ಮೂಲಕ ಸಾಮಾಜಿಕ ಬದ್ಧ್ದೆ ತೋರಿರುವ ವ್ಯಕ್ತಿ ಅವರು ಎಂದು ಬಣ್ಣಿಸಿದರು.
ಭಾರತವನ್ನು ಹೊರತುಪಡಿಸಿ ಯಾವುದೇ ದೇಶದ ಸಂವಿಧಾನದ ಪೀಠಿಕೆ ಬದಲಾವಣೆಗೆ ಒಳಗಾಗಿಲ್ಲ. ಆದರೆ ವಿನಾಶಕಾರಿಯಾಗಿ, ಜನರು ವಾಸ್ತವಿಕವಾಗಿ ಗುಲಾಮರಾಗಿದ್ದ ಸಮಯದಲ್ಲಿ ಭಾರತದ ಸಂವಿಧಾನಕ್ಕೆ ಬದಲಾವಣೆ ತರಲಾಯಿತು. 1975ರ ಜೂನ್ 25 ರಂದು ಘೋಷಿಸಲಾದ 22 ತಿಂಗಳ ಕಠಿಣ ತುರ್ತು ಪರಿಸ್ಥಿತಿ ಹೇರಿದ್ದು ನ್ಯಾಯದ ವಿಡಂಬನೆ ಎಂದ ಧನಕರ್, ನ್ಯಾಯಾಂಗವು ನಮ್ಮ ಪ್ರಜಾಪ್ರಭುತ್ವದ ಪ್ರಮುಖ ಸ್ತಂಭವಾಗಿದೆ. ನಾನು ಆ ವ್ಯವಸ್ಥೆಗೆ ಸೇರಿದವನು. ಭಾರತೀಯ ಸಂವಿಧಾನದ ಪೀಠಿಕೆಯ ಬಗ್ಗೆ ನ್ಯಾಯಾಂಗದ ಉನ್ನತ ರಚನೆಗಳಲ್ಲಿ ಸುಪ್ರೀಂಕೋರ್ಟಿನ ಎರಡು ಪೀಠಗಳು, ಐಸಿ ಗೋಲಕನಾಥ್ ಮತ್ತು ಪಂಜಾಬ್ ರಾಜ್ಯ ಪ್ರಕರಣಗಳಲ್ಲಿ 11 ನ್ಯಾಯಾಧೀಶರ ಪೀಠ ಮತ್ತು ಕೇಶವಾನಂದ ಭಾರತಿ ಪ್ರಕರಣದಲ್ಲಿ 13 ನ್ಯಾಯಾಧೀಶರ ಸಂಯೋಜನೆ ಇದ್ದವು. ಗೋಲಕನಾಥ್ ಪ್ರಕರಣದಲ್ಲಿ, ಪೀಠಿಕೆಯ ಬಗ್ಗೆ ವಿಷಯ ಪ್ರಸ್ತಾಪವಾಯಿತು ಹಾಗೂ ನ್ಯಾ.ಹಿದಾಯತುಲ್ಲಾ, ಪರಿಸ್ಥಿತಿಯನ್ನು ಪ್ರತಿಬಿಂಬಿಸುತ್ತಾ, ನಮ್ಮ ಸಂವಿಧಾನದ ಪೀಠಿಕೆಯು ಸಂಕ್ಷಿಪ್ತವಾಗಿ ಅದರ ಆದರ್ಶಗಳು ಮತ್ತು ಆಕಾಂಕ್ಷೆಗಳನ್ನು ಒಳಗೊಂಡಿದೆ. ಇದು ಕೇವಲ ಪದಗಳ ಸಮೃದ್ಧಿಯಲ್ಲ, ಸಂವಿಧಾನವು ಜನರ ಉದ್ದೇಶಗಳನ್ನು ಸಾಕಾರಗೊಳಿಸುತ್ತದೆ ಎಂದರು. ಡಾ. ಬಿ.ಆರ್.ಅಂಬೇಡ್ಕರ್ ಓರ್ವ ದಾರ್ಶನಿಕ ಹಾಗೂ ರಾಜನೀತಿಜ್ಞರಾಗಿದ್ದವರು. ಅವರನ್ನು ನಾವು ಎಂದಿಗೂ ರಾಜಕಾರಣಿಯಾಗಿ ನೋಡಬಾರದು. ಅವರು ಅನುಭವಿಸಿದ ನೋವು, ಅವರಿಗೆ ಮಾತ್ರ ತಿಳಿದಿದೆ. ಹೀಗಿರುವಾಗ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗಿತ್ತು. 1989 ರಲ್ಲಿ ಈ ಮಣ್ಣಿನ ಪುತ್ರರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಿದಾಗ ನನ್ನ ದೊಡ್ಡ ಅದೃಷ್ಟ ಇದು ಎಂದು ಭಾವಿಸಿದ್ದೆ, ಆದರೆ ಮರಣೋತ್ತರವಾಗಿ ಭಾರತ ರತ್ನ ನೀಡಿದ್ದಕ್ಕಾಗಿ ನನ್ನ ಹೃದಯ ಅಂದು ಕಣ್ಣೀರಿಟ್ಟಿತ್ತು ಎಂದು ಧನಕರ್ ಇದೇ ವೇಳೆ ಹೇಳಿದರು.