ಮುಂಬೈ: ಕಳೆದ ವಾರ ನಡೆದ ಎನ್‌ಸಿಪಿಯ ಹಿರಿಯ ನಾಯಕ ಬಾಬಾ ಸಿದ್ದಿಕಿ(Baba Siddique) ಹತ್ಯೆಯ ನಂತರ ತನಿಖೆ ಮುಂದುವರಿದಿದೆ. ಲಾರೆನ್ಸ್ ಬಿಷ್ಣೋಯ್ ಈ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಇದುವರೆಗೆ ಮೂವರು ಆರೋಪಿಗಳು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತ ಶೂಟರ್‌ಗಳು ವಿಚಾರಣೆಯ ಸಮಯದಲ್ಲಿ ಬಾಬಾ ಸಿದ್ದಿಕಿ ಅವರ ಪುತ್ರ ಜೀಶನ್ ಸಿದ್ದಿಕಿ ಕೂಡ ಬಿಷ್ಣೋಯ್ ಗ್ಯಾಂಗ್‌ನ ಹಿಟ್-ಲಿಸ್ಟ್‌ನಲ್ಲಿ ಸೇರಿದ್ದಾರೆ ಎಂದು ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ತಂದೆ ಮತ್ತು ಮಗನನ್ನು (ಬಾಬಾ ಸಿದ್ದಿಕಿ ಮತ್ತು ಜೀಶಾನ್) ಕೊಲ್ಲುವ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಶೂಟರ್‌ಗಳು ತಪ್ಪೊಪ್ಪಿಕೊಂಡಿದ್ದಾರೆ. ಶನಿವಾರ ಸಂಜೆ ತಂದೆ ಮತ್ತು ಮಗ ಇಬ್ಬರೂ ಒಟ್ಟಿಗೆ ಇರುತ್ತಾರೆ ಎಂದು ತಿಳಿದಿತ್ತು. ಇಬ್ಬರನ್ನೂ ಹತ್ಯೆ ಮಾಡಲು ಸಾಧ್ಯವಾಗದಿದ್ದರೆ ಮೊದಲು ಯಾರೇ ಸಿಕ್ಕರೂ ಅವರನ್ನು ಕೊಲ್ಲುವ ಆದೇಶವಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ.
ಜೀಶನ್ ಸಿದ್ದಿಕಿ ಬಾಂದ್ರಾ ಪೂರ್ವದ ಕಾಂಗ್ರೆಸ್ ಶಾಸಕ. ಕೆಲ ತಿಂಗಳ ಹಿಂದೆ ವಿಧಾನಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಕಾರಣ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು. ಮೂವರು ಶೂಟರ್‌ಗಳು ಜೀಶಾನ್ ಸಿದ್ದಿಕಿ ಅವರ ಕಚೇರಿಯ ಹೊರಗೆ ಶನಿವಾರ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ವೇಳೆ ಆರೋಪಿಗಳು ಸಿದ್ದಿಕಿ ಅವರ ಭದ್ರತೆಗೆ ನಿಯೋಜಿಸಿದ್ದ ಪೊಲೀಸರ ಮೇಲೆ ಮೆಣಸಿನ ಪುಡಿ ಎರಚಿ, ದುರ್ಗಾ ಮೆರವಣಿಗೆಯ ಗದ್ದಲದ ನೆಪದಲ್ಲಿ ಅಕ್ಕಪಕ್ಕದಲ್ಲಿದ್ದವರಿಗೆ ಗೊತ್ತಾಗದಂತೆ ಗುಂಡು ಹಾರಿಸಿದ್ದಾರೆ.
ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಹತ್ಯೆ ಮಾಡಲು ಒಂದೂವರೆ ತಿಂಗಳ ಹಿಂದೆ ಕುರ್ಲಾದಲ್ಲಿ ಬಾಡಿಗೆಗೆ ರೂಮ್ ತೆಗೆದುಕೊಂಡು ಬಾಂದ್ರಾದಲ್ಲಿರುವ ಸಿದ್ದಿಕಿ ಅವರ ಮನೆ ಹಾಗೂ ಕಚೇರಿಯಲ್ಲಿನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದರು.
ಇದುವರೆಗೆ ಬಾಬಾ ಸಿದ್ದಿಕಿ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಗುರ್ಮೈಲ್ ಬಲ್ಜೀತ್ ಸಿಂಗ್ (ಹರಿಯಾಣ), ಧರ್ಮರಾಜ್ ಕಶ್ಯಪ್ (ಉತ್ತರ ಪ್ರದೇಶ) ಅವರನ್ನು ಬಂಧಿಸಲಾಗಿದ್ದು, ಮೂರನೇ ಆರೋಪಿ ಶಿವಕುಮಾರ್ ಗೌತಮ್ ಇನ್ನೂ ತಲೆಮರೆಸಿಕೊಂಡಿದ್ದಾನೆ. ಅವನು ಕೊನೆಯದಾಗಿ ಪನ್ವೆಲ್ ಬಳಿ ಕಾಣಿಸಿಕೊಂಡಿದ್ದಾನೆ. ಶಿವಕುಮಾರ್ ಅವರನ್ನು ಬಂಧಿಸಲು ಹರಿಯಾಣ, ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಬಹು ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದ್ದು, ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)