ಬೆಂಗಳೂರು: ಸಚಿವ ಸಂಪುಟ ವಿಸ್ತರಣೆಗೂ ಮುನ್ನವೇ ಸಿಎಂ ಯಡಿಯೂರಪ್ಪ ಸಚಿವರಿಬ್ಬರ ಖಾತೆಗಳನ್ನು ದಿಢೀರ್ ಬದಲಾಯಿಸಿದ್ದಾರೆ. ಶ್ರೀರಾಮುಲು ಕೈಯಲ್ಲಿದ್ದ ಆರೋಗ್ಯ ಖಾತೆ ಮತ್ತು ಹಿಂದುಳಿದ ವರ್ಗಗಳ ಇಲಾಖೆಯನ್ನು ಹಿಂಪಡೆಯುವ ಮೂಲಕ ಬಿಗ್ ಶಾಕ್ ಕೊಟ್ಟಿದ್ದಾರೆ.
ಈ ಮಹತ್ವದ ಬೆಳವಣಿಗೆ ಭಾರೀ ಸಂಚಲನ ಮೂಡಿಸಿದ್ದು, ಸ್ವತಃ ಶ್ರೀರಾಮುಲು ಕೂಡ ಅಸಮಾಧಾನಗೊಂಡಿದ್ದಾರೆ. ಶ್ರೀರಾಮುಲು ಕೈಯಲ್ಲಿದ್ದ ಆರೋಗ್ಯ ಖಾತೆ ಡಾ.ಸುಧಾಕರ್ಗೆ ಹೆಗಲಿಗೆ ಬೀಳುತ್ತಿದ್ದಂತೆ ಇದಕ್ಕೆ ಕಾರಣ ಏನಿರಬಹುದೆಂದು ತರಹೇವಾರಿ ಚರ್ಚೆಗಳು ಶುರುವಾಗಿವೆ. ಕೋವಿಡ್ ನಿಯಂತ್ರಿಸಲು ಆರೋಗ್ಯ ಖಾತೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಬ್ಬರ ಬಳಿ ಇದ್ದರೆ ಉತ್ತಮ ಎಂಬ ಸರ್ಕಾರದಿಂದ ಸಬೂಬು ಕೇಳಿಬಂದಿದೆಯಾದರೂ ವಿಪಕ್ಷ ಕಾಂಗ್ರೆಸ್ ಇದನ್ನು ಅಲ್ಲಗೆಳೆದಿದೆ. 'ಕರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಆದ್ದರಿಂದಲೇ ಆರೋಗ್ಯ ಇಲಾಖೆಯ ಸಚಿವರನ್ನು ಬದಲಾಯಿಸಲಾಗಿದೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಶ್ರೀರಾಮುಲು ಬಳಿಯಿದ್ದ ಆರೋಗ್ಯ ಖಾತೆ ಸುಧಾಕರ್ಗೆ ಸಿಎಂ ಕೊಡಲಿದ್ದಾರೆ ಎಂಬ ಮಾಹಿತಿ ಭಾನುವಾರ ರಾತ್ರಿಯೇ ಹೊರಬಿದ್ದಿತ್ತು. ಸೋಮವಾರ ಬೆಳಗ್ಗೆ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಮಾತನಾಡಿದ ಸುಧಾಕರ್, 'ರಾಜ್ಯದಲ್ಲಿ ಕರೊನಾ ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಹಾಗೂ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕ್ರಾಂತಿಕಾರಿ ಕೆಲಸವನ್ನು ನಿರೀಕ್ಷಿಸುತ್ತಿದ್ದಾರೆ. ಹೀಗಾಗಿಯೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಹತ್ವದ ಜವಾಬ್ದಾರಿಯನ್ನು ನನಗೆ ಒಪ್ಪಿಸಿದ್ದಾರೆ' ಎಂದಿದ್ದರು.
ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಡಿಕೆಶಿ, 'ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಇದಕ್ಕೆ ಸಾಕ್ಷಿ ಸಚಿವರ ದಿಢೀರ್ ಬದಲಾವಣೆ. ಈ ಸರ್ಕಾರದ ಅಸಮರ್ಥತೆಯು ಅಪಾರ ಪ್ರಮಾಣದ ಜೀವ ಹಾನಿ ಮತ್ತು ಜನಜೀವನವನ್ನು ಅಪಾಯಕ್ಕೆ ತಳ್ಳಿದೆ ಎಂಬ ನಮ್ಮ ಆರೋಪಕ್ಕೆ ಪೂರಕವಾಗಿ ಆರೋಗ್ಯ ಸಚಿವರ ಬದಲಾವಣೆಯಾಗಿದೆ' ಎಂದು ಟೀಕಿಸಿದ್ದಾರೆ.