RSS: ಸ್ವಾತಂತ್ರ್ಯೋತ್ಸದ ಭಾಷಣದಲ್ಲಿ ಪ್ರಧಾನಿ ಮೋದಿ ಬಿಜೆಪಿ ಪಕ್ಷದ ಮಾತೃ ಸಂಘಟನೆ ಆರ್‌ಎಸ್‌ಎಸ್ ಅನ್ನು ಹೊಗಳಿದ್ದಕ್ಕೆ, ಕಾಂಗ್ರೆಸ್ ಹಿರಿಯ ನಾಯಕ ಮತ್ತು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅದು ಭಾರತದ ತಾಲಿಬಾನ್ ಸಂಘಟನೆ ಎಂದು ಕರೆದಿದ್ದಾರೆ. ಪ್ರಸ್ತುತ ಅವರ ಹೇಳಿಕೆ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದೆ.
ಈ ಕುರಿತು ದೆಹಲಿಯಲ್ಲಿ ಮಾತನಾಡಿರುವ ಬಿ.ಕೆ.ಹರಿಪ್ರಸಾದ್,"ಆರ್‌ಎಸ್‌ಎಸ್ ದೇಶದಲ್ಲಿ ಶಾಂತಿ ಕದಡಲು ಪ್ರಯತ್ನಿಸುತ್ತಿದೆ. ಅದನ್ನು ನಾನು ಭಾರತದ ತಾಲಿಬಾನ್ ಎಂದು ಕರೆಯುತ್ತೇನೆ. ಅಂತಹ ಸಂಘಟನೆಯನ್ನು ಭಾರತದ ಪ್ರಧಾನಿ ಕೆಂಪುಕೋಟೆಯಿಂದ ಶ್ಲಾಘಿಸುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಯಾವೊಬ್ಬ ಸಂಘೀಯೂ ಭಾಗವಹಿಸಿದ್ದಾರೆಯೇ?, ಆರ್‌ಎಸ್‌ಎಸ್ ನೋಂದಾಯಿತ ಸಂಘಟನೆ ಅಲ್ಲ. ಅವರಿಗೆ ಎಲ್ಲಿಂದ ಹಣ ಸಿಗುತ್ತದೆ ಎಂದು ನಮಗೆ ಗೊತ್ತಿಲ್ಲ. ದೇಶದಲ್ಲಿ ಕೆಲಸ ಮಾಡಲು ಬಯಸುವ ಯಾವುದೇ ಎನ್ಜಿಓ ಸಂವಿಧಾನದ ಪ್ರಕಾರ ನೋಂದಾಯಿಸಿಕೊಳ್ಳಬೇಕು" ಎಂದು ಕಿಡಿಕಾರಿದ್ದಾರೆ.
ಬಿಜೆಪಿ ಮತ್ತು ಆರ್ಎಸ್ಎಸ್ನವರು ಇತಿಹಾಸವನ್ನು ತಿರುಚುವಲ್ಲಿ ನಿಪುಣರು. ಇತಿಹಾಸವನ್ನು ಪುನಃ ಬರೆಯಲು ಪ್ರಯತ್ನಿಸುತ್ತಿದ್ದಾರೆ. ಎಕೆ ಫಜ್ಲುಲ್ ಹಕ್ (ಸ್ವಾತಂತ್ರ್ಯಕ್ಕೂ ಮೊದಲು ಬಂಗಾಳದ ಪ್ರಧಾನಿಯಾಗಿದ್ದರು. ಮತ್ತು ಜನಸಂಘದ ಸಂಸ್ಥಾಪಕ ಶ್ಯಾಮ ಪ್ರಸಾದ್ ಮುಖರ್ಜಿಯವರು ಮೊದಲು ಬಂಗಾಳದಲ್ಲಿ ವಿಭಜನೆಗಾಗಿ ನಿರ್ಣಯವನ್ನು ಮಂಡಿಸಿದರು. ಜಿನ್ನಾ ಮತ್ತು ಸಾವರ್ಕರ್ ಎರಡೂ ಧರ್ಮಗಳಿಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಅಭಿಪ್ರಾಯಪಟ್ಟರು. ಈಗ ಅವರು ಕಾಂಗ್ರೆಸ್ ಪಕ್ಷವನ್ನೂ ದೂಷಿಸಲು ಪ್ರಯತ್ನಿಸುತ್ತಿದ್ದಾರೆ ವಾಗ್ದಾಳಿ ನಡೆಸಿದರು.
ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ತಿರುಗೇಟು
ಆರ್‌ಎಸ್‌ಎಸ್ ಭಾರತದ ತಾಲಿಬಾನ್ ಸಂಘಟನೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ, ಕಾಂಗ್ರೆಸ್ ಪ್ರತಿಯೊಂದು ರಾಷ್ಟ್ರೀಯತಾವಾದಿ ಸಂಘಟನೆಯನ್ನು ನಿಂದಿಸುತ್ತದೆ. ಪಿಎಫ್‌ಐ ಮತ್ತು ಸಿಮಿಯಂತಹ ನಿಷೇಧಿತ ಮೂಲಭೂತವಾದಿ ಸಂಘಟನೆಗಳನ್ನು ಪ್ರೀತಿಸುತ್ತದೆ ಎಂದು ಬಿಜೆಪಿ ತಿರುಗೇಟು ನೀಡಿದೆ.
ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ ಮಾತನಾಡಿ, ಇಂಡಿಯನ್ ಫೋರ್ಸಸ್, ಸಾಂವಿಧಾನಿಕ ಸಂಸ್ಥೆಗಳು, ಸಾಮಾಜಿಕ ಸಂಸ್ಥೆಗಳು ಹಾಗೂ ಸನಾತನ ಸಂಸ್ಥೆಗಳನ್ನು ಅವಮಾನಿಸುವುದು ಕಾಂಗ್ರೆಸ್ನ ಸಂಸ್ಕೃತಿಯಾಗಿದೆ. ಕಾಂಗ್ರೆಸ್ ಮನಸ್ಥಿತಿ ತಾಲಿಬಾನ್ ಮನಸ್ಥಿತಿ. ಮಹಾತ್ಮ ಗಾಂಧಿ, ಜಯಪ್ರಕಾಶ್ ನಾರಾಯಣ್ ಅವರು ಆರ್‌ಎಸ್‌ಎಸ್ ಅನ್ನು ಯಾಕೆ ಹೊಗಳಿದರು?, ದಿವಂಗತ ಪ್ರಣಬ್ ಮುಖರ್ಜಿ ಯಾಕೆ ಆರ್‌ಎಸ್‌ಎಸ್ ಬೈಠಕ್ಗೆ ಭೇಟಿ ನೀಡಿದರು ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?
ತಮ್ಮ 12 ವರ್ಷಗಳ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಎಂದು ಆರ್‌ಎಸ್‌ಎಸ್ ಹೆಸರು ಬಳಸದ ಪ್ರಧಾನಿ ಮೋದಿ ಇಂದು ಮೊದಲ ಬಾರಿಗೆ ತಮ್ಮ ಭಾಷಣದಲ್ಲಿ ಬಳಿಸಿದ್ದರು. ಆರ್‌ಎಸ್‌ಎಸ್ ಒಂದು ವಿಶ್ವದ ಅತಿದೊಡ್ಡ ಸರ್ಕಾರೇತರ ಎನ್ಜಿಓ ಎಂದು ಕರೆದಿದ್ದರು.
"ಇಂದು ನಾನು ಬಹಳ ಹೆಮ್ಮೆಯಿಂದ ಒಂದು ವಿಷಯವನ್ನು ಉಲ್ಲೇಖಿಸಲು ಬಯಸುತ್ತೇನೆ. 100 ವರ್ಷಗಳ ಹಿಂದೆ ಒಂದು ಸಂಘಟನೆ ಹುಟ್ಟಿಕೊಂಡಿತು. ಅದು ಆರೆಸ್ಸೆಸ್. 100 ವರ್ಷಗಳ ರಾಷ್ಟ್ರೀಯ ಸೇವೆಯು ಭಾರತದ ಇತಿಹಾಸದಲ್ಲಿ ಬಹಳ ಹೆಮ್ಮೆಯ ಮತ್ತು ಅದ್ಭುತವಾದ ಪುಟವಾಗಿದೆ. ಆರ್‌ಎಸ್‌ಎಸ್ ಕಾರ್ಯಕರ್ತರು ವ್ಯಕ್ತಿತ್ವ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು.(ಏಜೆನ್ಸೀಸ್)