ಕನ್ನಡ ಸಾಹಿತ್ಯ ಲೋಕದ ಮಹತ್ತರ ಪ್ರಶಸ್ತಿಯೆಂದರೆ ಅದು ಕರ್ನಾಟಕ ಸರ್ಕಾರ ಕೊಡಮಾಡುವ ಪಂಪ ಪ್ರಶಸ್ತಿ. ಕನ್ನಡದ ಆದಿ ಕವಿ ಪಂಪನ ಹೆಸರಿನಲ್ಲಿ ಈ ಪ್ರಶಸ್ತಿ ಸ್ಥಾಪನೆಯಾದುದು ಪಂಪನಿಗಷ್ಟೇ ಅಲ್ಲ ಆ ಪ್ರಶಸ್ತಿ ಪಡೆದವರಿಗೂ ಇನ್ನಿಲ್ಲದ ಗರಿಮೆ. ಈ ಬಾರಿ 2024ರ ಪಂಪ ಪ್ರಶಸ್ತಿಗೆ ಖ್ಯಾತ ವಿದ್ವಾಂಸರಾದ ಪ್ರೊ. ಬಿ.ಎ. ವಿವೇಕ ರೈ ಭಾಜನರಾಗಿದ್ದಾರೆ ಎಂಬುದು ಕನ್ನಡ ಸಾರಸ್ವತ ಲೋಕದ ಮಹತ್ವವನ್ನು ಹೆಚ್ಚಿಸಿದೆ.
ಕನ್ನಡ ಹಾಗೂ ತುಳುವಿಗೆ ಏಕಕಾಲಕ್ಕೆ ಸಲ್ಲುವ ಸಾಹಿತಿ ಪ್ರೊ.ಬಿ.ಎ. ವಿವೇಕ ರೈ ಅವರು ತುಳು ಜಾನಪದ ಕ್ಷೇತ್ರದಲ್ಲಿ ಅಸಾಧಾರಣ ಸಂಶೋಧನೆ ಮಾಡಿ ಅದಕ್ಕೊಂದು ರಾಷ್ಟ್ರಮಟ್ಟದ ಅಂಗೀಕಾರ ದೊರೆಯುವಂತೆ ಮಾಡಿದವರು. ತುಳು ಸಾಹಿತ್ಯ ಅಕಾಡೆಮಿಯ ಮೊದಲ ಅಧ್ಯಕ್ಷರಾಗಿದ್ದ ಅವರು ತನ್ನ ಬಾಹುಗಳನ್ನು ತುಳು ಜಾನಪದ, ಸಾಹಿತ್ಯದ ಕಡೆಗೂ ಚಾಚಿದವರು. ಅಲ್ಲದೆ ತುಳು ಸಾಹಿತ್ಯ ಬಂದು ನಿಂತಿರುವ ಎತ್ತರಕ್ಕೆ ತಳಪಾಯ ಹಾಕಿದವರು. ಕನ್ನಡ ಸಾಹಿತ್ಯದ ವಿದ್ಯಾರ್ಥಿಯಾಗಿ, ಉಪನ್ಯಾಸಕರಾಗಿ, ಬರಹಗಾರರಾದ ಅವರು ಮುಂದಿನ ಪೀಳಿಗೆಗೆ ಆದರ್ಶಪ್ರಾಯರು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಲ್ಲಿ ಪತ್ರಕರ್ತರಾಗಿದ್ದ ಅಗ್ರಾಳ ಪುರಂದರ ರೈ ಅವರು ಆಪ್ತರಾದ ಕೋಟ ಶಿವರಾಮ ಕಾರಂತರ ಬಳಿ ತನ್ನ ಮಗನಿಗೆ ವಿವೇಕಾನಂದ ಎಂದು ಹೆಸರಿಟ್ಟರೆ ಹೇಗೆ? ಎಂದು ಕೇಳಿದ್ದರಂತೆ. ಅದಕ್ಕೆ ಕಾರಂತರು ವಿವೇಕ ಅಂತ ಹೆಸರಿಟ್ಟರೆ ಸಾಕು. ವಿವೇಕ ಇದ್ದರೆ ಆನಂದ ತಾನಾಗಿಯೇ ಬರುತ್ತದೆ ಎಂದರಂತೆ! ಹಾಗೆ ವಿವೇಕ ಆದವರೇ ಬಳಿಕ ತಾವು ಕೈಯಿಟ್ಟ ಪ್ರತಿ ಕ್ಷೇತ್ರದಲ್ಲೂ ಆನಂದ ತಂದಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ದೇಶ, ವಿದೇಶಗಳೂ ಸೇರಿದಂತೆ ಸುಮಾರು 54 ವರ್ಷಗಳ ಸುದೀರ್ಘ ಸೇವೆಯ ದಾಖಲೆ ಅವರ ಪಾಲಿಗಿದೆ. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿದ್ದಲ್ಲಿಂದ ಮೊದಲ್ಗೊಂಡು ಮೂವತ್ತನಾಲ್ಕು ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಅಲ್ಲಿಯೇ ಸೇವೆಗೈದ ಪ್ರೊ.ವಿವೇಕ ರೈ ಅವರು ಅಲ್ಲಿಂದ ಹೊರಟದ್ದು ಹಂಪಿಗೆ. 2004-2007ರ ಕಾಲಘಟ್ಟದಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಕರ್ತವ್ಯ ನಿಭಾಯಿಸಿದರು.
ಸದ್ದಿಲ್ಲದೆ ಕನ್ನಡ ವಿಶ್ವವಿದ್ಯಾಲಯದಲ್ಲಿ ಪುಸ್ತಕ ಪ್ರಕಾಶನದ ಕ್ರಾಂತಿಯನ್ನೇ ಮಾಡಿದರು. ಮುಂದೆ ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿಗಳಾಗಿ 2009ರವರೆಗೆ ಸೇವೆಗೈದರು. ಅಲ್ಲಿಂದ ಕನ್ನಡದ ಕಾಯಕ ಮಾಡಲೆಂದು ಅವರು ಹೋದದ್ದು ಜರ್ಮನಿಗೆ. ಅಲ್ಲಿನ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ ಕನ್ನಡ ಸಾಹಿತ್ಯವನ್ನು ಕಲಿಸಿದರು. ನಮ್ಮ ಪಂಪ, ಕುಮಾರವ್ಯಾಸ, ರನ್ನ, ಜನ್ನ, ರಾಘವಾಂಕ ಅವರಿಗೂ ಹತ್ತಿರದವರಾದರು.
ಭೂತಾರಾಧನೆ, ತುಳುವ ಸಂಸ್ಕೃತಿ, ಜಾನಪದ, ಧಾರ್ವಿುಕ ವಿಷಯಗಳ ಕುರಿತು ಉಪನ್ಯಾಸ ನೀಡುತ್ತಿದ್ದ ಪ್ರೊ.ರೈ ಅವರು ಕನ್ನಡಿಗರು ಹೆಮ್ಮೆ ಪಡುವಷ್ಟು ಸಂಶೋಧನಾ ವಿದ್ಯಾರ್ಥಿಗಳನ್ನು ಜರ್ಮನಿಯಲ್ಲಿ ಸಿದ್ಧಗೊಳಿಸಿದರು. ಇಂದಿಗೂ ಪ್ರತಿವರ್ಷ ಜರ್ಮನಿಯಿಂದ ಹತ್ತಾರು ವಿದ್ಯಾರ್ಥಿಗಳು ಭಾರತಕ್ಕೆ ಬಂದು ಡಾ.ರೈ ಮಾರ್ಗದರ್ಶನ ಪಡೆದು ಕ್ಷೇತ್ರಕಾರ್ಯ ಮಾಡುತ್ತಾರೆ. (ಪಂಪ ಪ್ರಶಸ್ತಿ ಬಂದ ವಿಚಾರವನ್ನು ದೂರವಾಣಿ ಮೂಲಕ ಪ್ರೊ.ರೈ ಅವರಿಗೆ ತಿಳಿಸುವಾಗಲೂ ಅವರು ಜರ್ಮನಿಯಿಂದ ಬಂದ ಸಂಶೋಧಕರ ತಂಡದೊಂದಿಗೆ ಕಾರ್ಕಳದ ಜೈನ ಬಸದಿಗಳ ಕ್ಷೇತ್ರಕಾರ್ಯ ನಡೆಸುತ್ತಿದ್ದರು!).
ಜರ್ಮನಿಯನ್ನು ಅವರು ಬಿಟ್ಟು ಬಂದರೂ ಅವರನ್ನು ಜರ್ಮನಿ ಬಿಡಲಿಲ್ಲ. 2013ರಿಂದ 2020ರವರೆಗೆ ಜರ್ಮನಿಯ ವ್ಯೂರ್ತ್ಸ್ಬುರ್ಗ್ ವಿಶ್ವವಿದ್ಯಾಲಯದ ಅದೇ ಇಂಡಾಲಜಿ ವಿಭಾಗದಲ್ಲಿ ಯುರೋಪಿಯನ್ನರಿಗಾಗಿ ಕನ್ನಡ ಬೇಸಿಗೆ ಶಿಬಿರಗಳನ್ನು ಡಾ.ರೈ ಅವರ ಮಾರ್ಗದರ್ಶನದಲ್ಲಿ ನಡೆಸುತ್ತಿದ್ದರು ಎಂಬುದು ಕನ್ನಡಿಗರು ಸಂಭ್ರಮಿಸಬೇಕಾದ ವಿಚಾರ. ಆ ಶಿಬಿರದಲ್ಲಿ ಯುರೋಪಿನ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಬಂದು ಸೇರುತ್ತಿದ್ದರು. ವರ್ಷದಿಂದ ವರ್ಷಕ್ಕೆ ಕನ್ನಡ ಬೇಸಿಗೆ ಶಿಬಿರ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸುತ್ತ ಸಾಗಿದೆ. ಆ ಮೂಲಕ ರೈ ಅವರು ವಿಶ್ವ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಣೀಯಗೊಳಿಸಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಫಾಸಿಲ್ಸ್-ತಿರುವನಂತಪುರ, ಪಿಲಿಕುಳ ನಿಸರ್ಗಧಾಮ ಟ್ರಸ್ಟ್, ಕಸಾಪದ ಕೇಂದ್ರ ಕಾರ್ಯಕಾರಿ ಸಮಿತಿ ಮುಂತಾದ ಸಂಸ್ಥೆಗಳಲ್ಲಿ ವಿವಿಧ ನೆಲೆಗಳಲ್ಲಿ ದುಡಿಮೆಗೈದ ರೈ ಅವರು ಮೂರು ವಿಶ್ವವಿದ್ಯಾಲಯಗಳಲ್ಲಿ ಸಾಹಿತಿ- ಉಪನ್ಯಾಸಕರಾಗಿ, ದಕ್ಷ ಆಡಳಿತಗಾರರಾಗಿ ಪಡೆದ ಅನುಭವಗಳನ್ನು ಧಾರೆಯೆರೆದಿದ್ದಾರೆ. ಬರಹಗಾರರಾಗಿ ಅವರು ಹೊರತಂದ ಪ್ರತಿ ಹೊತ್ತಗೆಯೂ ಅವುಗಳ ಭಾಷೆಗಾಗಿ, ವಸ್ತುವಿಗಾಗಿ, ಹೊಸತನಕ್ಕಾಗಿ ಹೆಸರು ಗಳಿಸಿವೆ. ‘ಗಿಳಿಸೂವೆ’, ‘ಇರುಳ ಕಣ್ಣು’, ‘ಕಲಿತದ್ದು ಕಲಿಸಿದ್ದು’ ಮುಂತಾದ ಅಂಕಣ ಬರಹಗಳು ಸಂಶೋಧನಾ ಗುರುಗಳಾದ ಹಾಮಾ ನಾಯಕರ ಅನಂತರದ ಪ್ರಬುದ್ಧ ಅಂಕಣಕಾರರ ಸಾಲಿನಲ್ಲಿ ಅವರನ್ನು ತಂದು ನಿಲ್ಲಿಸಿದೆ. ಸಂಸ್ಕೃತಿ ಚಿಂತನೆಯ ಆಕರ ಗ್ರಂಥಗಳಾಗಿ ಅವು ನಮ್ಮ ಮುಂದಿವೆ. ಜರ್ಮನಿಯಿಂದ ಕನ್ನಡಕ್ಕೆ, ಕನ್ನಡದಿಂದ ಜರ್ಮನ್ ಭಾಷೆಗೆ ಅನುವಾದ ಮಾಡುವ ಕೆಲಸವೂ ಅವರಿಂದ ನಡೆದಿದೆ.
ಅದರಲ್ಲೂ ‘ಕರ್ವಾಲೋ’ವನ್ನು ಪ್ರೊ.ವಿವೇಕ ರೈ ಅವರು ಜರ್ಮನಿಯ ಕತ್ರಿನ್ ಬೈಂಡರ್ ಅವರ ಜತೆ ಸೇರಿ ಜರ್ಮನ್ ಭಾಷೆಗೆ ಅನುವಾದ ಮಾಡಿ ನಮ್ಮ ತೇಜಸ್ವಿಯವರ ಮಹತ್ತನ್ನು ಜರ್ಮನಿಗೆ ಪರಿಚಯಿಸಿದ್ದನ್ನು ದಾಖಲಿಸಲೇಬೇಕು. ಅವರು ಜರ್ಮನಿಯಲ್ಲಿದ್ದಾಗ ಬರೆದ ‘ಬಾಗಿಲನು ತೆರೆದು’, ‘ಜರ್ಮನಿಯ ಒಳಗಿಂದ’, ‘ರಂಗದೊಳಗಣ ಬಹಿರಂಗ’, ‘ಕ್ಯಾಮರಾ ಕಣ್ಣಿನಲ್ಲಿ ಜರ್ಮನಿ’ (ಚಿತ್ರ ಸಂಪುಟ)- ಮುಂತಾದ ಕೃತಿಗಳು ಎರಡೂ ದೇಶಗಳ ಸಾಂಸ್ಕೃತಿಕ, ಸಾಹಿತ್ಯಕ ಸಂಗತಿಗಳ ಮೇಲೆ ಬೆಳಕು ಚೆಲ್ಲುತ್ತವೆ. ‘ಚಿಲಿಯಲ್ಲಿ ಭೂಕಂಪ’, ‘ನೆತ್ತರ ಮದುವೆ’ (ನಾಟಕ), ‘ಸ್ಲಾವೊಮೀರ್ ಮ್ರೋಜೆಕ್ನ ಕತೆಗಳು’ ಇತ್ಯಾದಿ ಅನುವಾದಗಳು ನಮ್ಮ ಹಾಗೂ ಜರ್ಮನಿಯ ನಡುವಣ ಸಾಹಿತ್ಯಕ ಅಂತರವನ್ನು ಕಡಿಮೆಗೊಳಿಸಿವೆ. ಖ್ಯಾತ ವಿಮರ್ಶಕ ಡಾ.ಸಿ.ಎನ್.ಆರ್. ಅವರೊಂದಿಗೆ ಸೇರಿಕೊಂಡು ‘ಕ್ಲಾಸಿಕಲ್ ಕನ್ನಡ ಪೋಯೆಟ್ರಿ ಆಂಡ್ ಪ್ರೋಸ್: ಎ ರೀಡರ್, ಮಿಡೀವಲ್ ಕನ್ನಡ ಲಿಟರೇಚರ್: ಎ ರೀಡರ್’ ಮೊದಲಾದ ಗ್ರಂಥಗಳನ್ನು ಇಂಗ್ಲಿಷ್ನಲ್ಲಿ ಸಿದ್ಧಪಡಿಸಿಕೊಟ್ಟಿದ್ದಾರೆ. ಮೂವತ್ತರಷ್ಟು ಸಂಪಾದಿತ ಕೃತಿಗಳು ಅವರ ಕನ್ನಡಾವಲೋಕನಕ್ಕೆ ಸಾಕ್ಷಿ ಹೇಳುತ್ತವೆ. ಅದರಲ್ಲಿ ತುಳು ಸಾಹಿತ್ಯ ಚರಿತ್ರೆ, ಸಮಗ್ರ ಕನ್ನಡ ಜೈನ ಸಾಹಿತ್ಯ, ವಚನಗಳ ತುಳು ಅನುವಾದ, ಮಂಗಳೂರು ದರ್ಶನದ ಮೂರು ಸಂಪುಟಗಳು ಮುಂತಾದವು ಪ್ರಮುಖವಾದವು.
ತುಳುನಾಡಿನ ಜಾನಪದ ಸಿರಿ ಮಹಾಕಾವ್ಯವನ್ನು ಜರ್ಮನಿಯ ಲೌರಿ ಹೋಂಕೋ, ಅನ್ನೇಲಿ ಹೌಂಕೋ ಹಾಗೂ ಚಿನ್ನಪ್ಪ ಗೌಡರೊಂದಿಗೆ ಸೇರಿ ಫಿನ್ನಿಷ್ ಭಾಷೆಗೆ ಸಂಪುಟಗಳಾಗಿ ಅನುವಾದಿಸುವಲ್ಲಿ ಪ್ರೊ.ರೈಯವರ ಪಾತ್ರ ಹಿರಿದು. ಕನ್ನಡ ಹಾಗೂ ತುಳು ಜಾನಪದವನ್ನು ವಿಶ್ವದೊಂದಿಗೆ ಅನುಸಂಧಾನಗೊಳಿಸುವಲ್ಲೂ ಪ್ರೊ. ರೈ ಅವರ ಪಾತ್ರ ಮಹತ್ವದ್ದು. ಡಾ. ಬಿ.ಎ.ವಿವೇಕ ರೈ ಅವರು ವಿಚಾರ ಪ್ರಚೋದಕ ಸಾಹಿತ್ಯ ಭಾಷಣ ಮಾಡುವುದರಲ್ಲಿ ಹೆಸರುವಾಸಿ. ಭಾಷಣ ಕಲೆಯು ಅವರನ್ನು ಕರ್ನಾಟಕಕ್ಕಿಂತ, ಭಾರತಕ್ಕಿಂತ ಹೊರಗಡೆಗೆ ಅನೇಕ ಬಾರಿ ಕರೆದುಕೊಂಡು ಹೋಗಿದೆ. ಅವರ ಕನ್ನಡ, ಇಂಗ್ಲಿಷ್ ಹಾಗೂ ತುಳು ಉಪನ್ಯಾಸಗಳು ಯೂಟ್ಯೂಬ್ನಲ್ಲಿ ಸಾಲುಗಟ್ಟಿ ಕುಳಿತಿವೆ. ಈ ಬಾರಿ ಅವರಿಗೆ ಸಂದ ಪಂಪ ಪ್ರಶಸ್ತಿ ಪ್ರೊ.ರೈ ಅವರಿಗೆ ಸಂಬಂಧಪಟ್ಟ ಹಾಗೆ ಒಂದು ಅನ್ವರ್ಥ ಪ್ರಕ್ರಿಯೆ. ತಮ್ಮ ಎಂ.ಎ. ವಿದ್ಯಾರ್ಥಿಗಳಿಗೆ ದಶಕಗಳ ಕಾಲ ಪಂಪನನ್ನು ಧಾರೆಯೆರೆದಿದ್ದ ಅವರು ಇತ್ತೀಚೆಗೆ ಮಂಗಳೂರಿನ ರಂಗಸಂಗಾತಿ ಸಂಸ್ಥೆಯು ಆಯೋಜನೆ ಮಾಡಿದ ಪಂಪನ ‘ವಿಕ್ರಮಾರ್ಜುನ ವಿಜಯ’ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ದಿನಕ್ಕೆ ಎರಡು ಗಂಟೆಯಂತೆ ಏಳು ಭಾನುವಾರಗಳಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳಿಗೆ ಬಹುದೊಡ್ಡ ಆಕರ ಸಾಹಿತ್ಯವಾಗಿ ಅದು ಯೂಟ್ಯೂಬ್ನಲ್ಲಿ ಶಾಶ್ವತಗೊಂಡಿದೆ.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಮಂಗಳೂರು ವಿ.ವಿ.ಯ ಗೌರವ ಡಾಕ್ಟರೇಟ್, ಮಾಸ್ತಿ ಪ್ರಶಸ್ತಿ, ಶ್ರೀ ಸಾಹಿತ್ಯ ಪ್ರಶಸ್ತಿ, ಜಿ.ಶಂ.ಪ. ಜಾನಪದ ಪ್ರಶಸ್ತಿ, ಜಾನಪದ ಅಕಾಡೆಮಿಯ ಜಾನಪದ ತಜ್ಞ ಪ್ರಶಸ್ತಿ- ಹೀಗೆ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ. ಕರ್ನಾಟಕ ದೇಸಿ ಸಮ್ಮೇಳನ, ಜಾನಪದ ಸಮ್ಮೇಳನ, ಸಂಸ್ಕೃತಿ ಸಮ್ಮೇಳನ, ಆಳ್ವಾಸ್ ವಿಶ್ವ ನುಡಿಸಿರಿ ಸಮ್ಮೇಳನ ಮುಂತಾದ ಸಮ್ಮೇಳನಗಳ ಅಧ್ಯಕ್ಷ ಸ್ಥಾನದಲ್ಲಿ ಪ್ರೊ.ಬಿ.ಎ.ವಿವೇಕ ರೈ ಅವರು ರಾರಾಜಿಸಿದ್ದಾರೆ. ಪಂಪನನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಂಡ ಅವರಿಗೆ ಸಹಜವಾಗಿಯೇ 2024ರ ಸಾಲಿನ ಪಂಪ ಪ್ರಶಸ್ತಿ ಸಂದಿದೆ.