ನವದೆಹಲಿ: ಕಾಂಗ್ರೆಸ್ ಕೇಂದ್ರ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಆಡಿದ ಮಾತುಗಳು ವಿವಾದದ ಸ್ವರೂಪ ಪಡೆದಿವೆ. ರಾಹುಲ್ ಭಾಷಣಕ್ಕೆ ಬಿಜೆಪಿ ಕೆಂಡಾಮಂಡಲಗೊಂಡಿದೆ.
‘ನಮ್ಮ ಸಿದ್ಧಾಂತ ಸಾವಿರಾರು ವರ್ಷಗಳಷ್ಟು ಹಳೆಯದು ಮತ್ತು ಸಾವಿರಾರು ವರ್ಷಗಳಿಂದಲೂ ಆರ್ಎಸ್ಎಸ್ ಸಿದ್ಧಾಂತದ ವಿರುದ್ಧ ಹೋರಾಡುತ್ತಿದೆ. ನಾವು ನ್ಯಾಯಯುತ ಹೋರಾಟ ನಡೆಸುತ್ತಿದ್ದೇವೆ ಎಂದು ಭಾವಿಸಬೇಡಿ. ಇದರಲ್ಲಿ ಯಾವುದೇ ನ್ಯಾಯೋಚಿತತೆ ಇಲ್ಲ. ಬಿಜೆಪಿ ಮತ್ತು ಆರ್ಎಸ್ಎಸ್ ಎಂಬ ರಾಜಕೀಯ ಸಂಘಟನೆಗಳ ವಿರುದ್ಧ ನಾವು ಹೋರಾಟ ನಡೆಸುತ್ತಿದ್ದೇವೆ ಎಂದಷ್ಟೇ ನೀವು ಭಾವಿಸಿದರೆ ಏನು ನಡೆಯುತ್ತಿದೆ ಎಂಬುದು ನಿಮಗೆ ತಿಳಿದಿಲ್ಲ ಎಂದೇ ಅರ್ಥ. ಅವು ನಮ್ಮ ದೇಶದ ಪ್ರತಿಯೊಂದು ಸಂಸ್ಥೆಯನ್ನು ವಶಪಡಿಸಿಕೊಂಡಿವೆ. ಹೀಗಾಗಿ ನಾವು ಈಗ ಬಿಜೆಪಿ, ಆರ್ಎಸ್ಎಸ್ ಮತ್ತು ಭಾರತದ (ಇಂಡಿಯನ್ ಸ್ಟೇಟ್) ವಿರುದ್ಧವೇ ಹೋರಾಡುತ್ತಿದ್ದೇವೆ’ ಎಂದು ರಾಹುಲ್ ಹೇಳಿದರು.
‘ಕಾಂಗ್ರೆಸ್ನ ಕೊಳಕು ಸತ್ಯ ಅನಾವರಣಗೊಂಡಿದೆ. ಅವರು ಭಾರತದ ವಿರುದ್ಧವೇ ಹೋರಾಡುತ್ತಿದ್ದಾರೆ ಎಂಬುದನ್ನು ರಾಷ್ಟ್ರಕ್ಕೆ ಸ್ಪಷ್ಟವಾಗಿ ತಿಳಿಸಿದ್ದಕ್ಕೆ ರಾಹುಲ್ ಗಾಂಧಿಗೆ ಅಭಿನಂದನೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ. ರಾಹುಲ್ ಗಾಂಧಿ ಸುತ್ತಮುತ್ತ ನಕ್ಸಲರು ಮತ್ತು ಭಾರತಕ್ಕೆ ಅವಮಾನ ಮಾಡಲು ಬಯಸುವವರೊಂದಿಗೆ ಅವರು ನಿಕಟ ಸಂಪರ್ಕ ಹೊಂದಿದ್ದಾರೆ. ಅವರು ಮಾಡಿದ ಅಥವಾ ಹೇಳಿದ್ದೆಲ್ಲವೂ ಭಾರತವನ್ನು ಒಡೆಯುವ ಮತ್ತು ನಮ್ಮ ಸಮಾಜವನ್ನು ವಿಭಜಿಸುವ ದಿಕ್ಕಿನಲ್ಲಿದೆ ಎಂದು ನಡ್ಡಾ ಕಿಡಿಕಾರಿದ್ದಾರೆ.
ಭಾಗವತ್ ಬಗ್ಗೆ ರಾಹುಲ್ ಗಾಂಧಿ ಟೀಕೆ: ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರತಿಷ್ಠಾಪಿಸಿದ ನಂತರ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂಬ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆಗೆ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ‘ಅವರು ಬೇರೆ ಯಾವುದೇ ದೇಶದಲ್ಲಿದ್ದರೆ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿತ್ತು. ಅವರು ಸ್ವಾತಂತ್ರ್ಯ ಚಳವಳಿಯ ಬಗ್ಗೆ ಅಭಿಪ್ರಾಯ ನೀಡುವ ಭಂಡ ಧೈರ್ಯ ಪ್ರದರ್ಶಿಸುತ್ತಲೇ ಇರುತ್ತಾರೆ. ಸಂವಿಧಾನದ ಬಗ್ಗೆ ಅವರು ಏನು ಯೋಚಿಸುತ್ತಾರೆ? ಭಾರತಕ್ಕೆ 1947 ರಲ್ಲಿ ಸ್ವಾತಂತ್ರ್ಯ ಸಿಗಲಿಲ್ಲ ಎನ್ನುವುದು ಪ್ರತಿಯೊಬ್ಬ ಭಾರತೀಯನಿಗೆ ಅವಮಾನ’ಎಂದು ಕಿಡಿಕಾರಿದ್ದಾರೆ.
ರಾಮಮಂದಿರ ಉದ್ಘಾಟನೆಯಿಂದ ಸ್ವಾತಂತ್ರ್ಯ ಬಂದಿತೆಂದು ಆರೆಸ್ಸೆಸ್ನವರು ನಂಬಿದ್ದಾರೆ. 1947ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ಕರೂ ಅದನ್ನು ಒಪ್ಪಿಕೊಳ್ಳದಿರುವುದು ನಾಚಿಕೆಗೇಡಿನ ಸಂಗತಿ, ಏಕೆಂದರೆ ಅವರು ಹೋರಾಟ ಮಾಡಿಲ್ಲ, ಜೈಲಿಗೆ ಹೋಗಿ ಬಂದಿದ್ದು ನೆನಪಿಲ್ಲ’
| ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಅಧ್ಯಕ್ಷ
ರಾಹುಲ್ ಗಾಂಧಿ ಹೇಳಿಕೆಗಳು ನೇರವಾಗಿ ಭಾರತವಿರೋಧಿ ಜಾರ್ಜ್ ಸೊರೊಸ್ ಪ್ಲೇಬುಕ್‌ನಿಂದ ಹೊರಬಂದಿವೆ
| ಅಮಿತ್ ಷಾ ಕೇಂದ್ರ ಗೃಹ ಸಚಿವ
ಇಂಡಿಯನ್ ಸ್ಟೇಟ್' ಎಂಬ ಪದವು ಭಾರತದ ಸಂವಿಧಾನ ವನ್ನು ಸೂಚಿಸುತ್ತದೆ. ಇದರರ್ಥ ರಾಹುಲ್ ಗಾಂಧಿ ಅಂಬೇಡ್ಕರರ ಸಂವಿಧಾನದ ವಿರುದ್ಧ ಯುದ್ಧ ಮಾಡುತ್ತಿದ್ದಾರೆ.
| ನಿಶಿಕಾಂತ್ ದುಬೆ ಬಿಜೆಪಿ ಸಂಸದ