ಆರ್. ಕೃಷ್ಣ, ಮೈಸೂರು
ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಶ್ರೀರಾಮ ಲಲ್ಲಾ ಮೂರ್ತಿ ಅರಳಿರುವ ಕಲ್ಲಿಗೂ ದಂಡ ಬಿದ್ದಿದೆ! ಹೌದು... ಶ್ರೀರಾಮನ ಮೂರ್ತಿ ಮೂಡಿ ಬಂದಿರುವ ಕೃಷ್ಣಶಿಲೆಗೆ ರಾಜ್ಯ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು 80 ಸಾವಿರ ರೂ. ದಂಡ ವಿಧಿಸಿದ್ದು, ಇದನ್ನು ಗುತ್ತಿಗೆದಾರರಾದ ಶ್ರೀನಿವಾಸ್ ನಟರಾಜ್ ಪಾವತಿಸಿದ್ದಾರೆ. ದಂಡ ಬಿದ್ದ ಕೃಷ್ಣಶಿಲೆಯೇ ಈಗ ಬಾಲರಾಮನ ಮೂರ್ತಿಯಾಗಿದ್ದು, ಅಯೋಧ್ಯೆಯಲ್ಲಿ ಪೂಜೆಗೆ ಸಿದ್ಧಗೊಂಡಿದೆ.
ಎಚ್.ಡಿ. ಕೋಟೆ ರಸ್ತೆಯ ಹಾರೋಹಳ್ಳಿ-ಗುಜ್ಜೇಗೌಡನ ಪುರದಲ್ಲಿ ಜಮೀನಿನ ಮಾಲೀಕ ರಾಮದಾಸ್ ನೆಲ ಸಮತಟ್ಟು ಮಾಡಲು ಗುತ್ತಿಗೆದಾರ ಶ್ರೀನಿವಾಸ್ ನಟರಾಜ್ಗೆ ಗುತ್ತಿಗೆ ನೀಡಿದ್ದರು. ಈ ವೇಳೆ ಜಮೀನಿನಲ್ಲಿ ಶಿಲ್ಪ ಮಾಡಲು ಯೋಗ್ಯವಾದ ಕೃಷ್ಣಶಿಲೆ ದೊರೆಯುತ್ತಿದ್ದವು. ವಿಷಯ ತಿಳಿದ ಹಲವು ಶಿಲ್ಪಿಗಳು ಇಲ್ಲಿಗೆ ಬಂದು ಕೃಷ್ಣಶಿಲೆಯನ್ನು ತೆಗೆದುಕೊಂಡು ಹೋಗಿದ್ದರು. ಕೆಲವರು ಈ ಜಮೀನಿನಲ್ಲಿ ಅನಧಿಕೃತ ಗಣಿಗಾರಿಕೆ ನಡೆಯುತ್ತಿದೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು, ಭಾರಿ ಗಾತ್ರದ ಕಲ್ಲುಗಳನ್ನು ಹೊರ ತೆಗೆಯಬೇಕಾದರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಯಿಂದ ಅನುಮತಿ ಪಡೆದುಕೊಳ್ಳಬೇಕು. ಈಗ ಕಲ್ಲು ತೆಗೆದಿರುವುದು ಅನಧಿಕೃತ ಎಂದು ಹೇಳಿ 80 ಸಾವಿರ ರೂ. ದಂಡ ವಿಧಿಸಿದ್ದರು. ಗುತ್ತಿಗೆದಾರರು ಅನ್ಯ ಮಾರ್ಗವಿಲ್ಲದೆ ದಂಡವನ್ನು ಆನ್ಲೈನ್ ಮೂಲಕ ಪಾವತಿಸಿದ್ದರು.
ಸೂಕ್ತ ಹಣ ನನ್ನ ಕೈ ಸೇರಿಲ್ಲ: ‘ನಾನು ಗುತ್ತಿಗೆ ಪಡೆದಿದ್ದ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕ ಕೃಷ್ಣಶಿಲೆಯಲ್ಲಿ ಶ್ರೀರಾಮನ ಮೂರ್ತಿ ಅರಳಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆ ಗೊಳ್ಳುತ್ತಿರುವುದು ಸಂತಸ ತಂದಿದೆ. ಆದರೆ 80 ಸಾವಿರ ರೂ. ದಂಡವೂ ಸೇರಿದಂತೆ ಸಾಕಷ್ಟು ಹಣ ನನಗೆ ನಷ್ಟವಾಗಿ ಸಾಲ ಮಾಡಿಕೊಂಡಿದ್ದೇನೆ. ಶ್ರೀರಾಮಜನ್ಮಭೂಮಿ ಟ್ರಸ್ಟ್ನವರು ನನಗೆ ಈ ನಷ್ಟವನ್ನು ತುಂಬಿಕೊಡಬೇಕು’ ಎನ್ನುತ್ತಾರೆ ಗುತ್ತಿಗೆದಾರ ಶ್ರೀನಿವಾಸ್ ನಟರಾಜ್.
2023ರ ಫೆಬ್ರವರಿಯಲ್ಲಿ ಸುರೇಂದ್ರಚಾರ್ ವಿಶ್ವಕರ್ಮ ಅವರು ನನಗೆ ಕರೆ ಮಾಡಿ, ‘ಮೂರ್ತಿ ತಯಾರಿಸಲು ಕೃಷ್ಣಶಿಲೆ ಬೇಕು. ಚೆನ್ನೈನಿಂದಲೂ ಕೆಲವರು ಬರಲಿದ್ದಾರೆ’ ಎಂದು ತಿಳಿಸಿದ್ದರು. ಅದರಂತೆ ಬಂದ ಕೆಲವರು ‘ಜಮೀನಿನಲ್ಲಿ ಇದ್ದ ಕಲ್ಲುಗಳನ್ನು ನೋಡಿ, ಅಯೋಧ್ಯೆಗೆ ಕಳುಹಿಸಿಕೊಡಬೇಕು. ಆದರೆ ಈ ವಿಷಯವನ್ನು ಯಾರಿಗೂ ಹೇಳದೆ ಗೌಪ್ಯವಾಗಿ ಇಟ್ಟಿರಬೇಕು. ಅದರಂತೆ ಬೆಂಗಳೂರಿನ ಗ್ರಾನೈಟ್ ವ್ಯಾಪಾರಸ್ಥರ ಮೂಲಕ ಅಯೋಧ್ಯೆಗೆ ಕಲ್ಲುಗಳನ್ನು ಕಳುಹಿಸಿಕೊಟ್ಟೆ. ಅಂತಿಮವಾಗಿ ನಾವು ಕಳುಹಿಸಿದ ಶಿಲೆ ರಾಮನ ಮೂರ್ತಿಯಾಗಿ ಅರಳಿ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗುತ್ತಿದೆ. ಈಗ ಮತ್ತೆ ಮೂರು ಶಿಲೆಗಳನ್ನು ಲಕ್ಷ್ಮಣ, ಭರತ ಹಾಗೂ ಶತ್ರುಘ್ನ ಮೂರ್ತಿ ತಯಾರಿಸಲು ತೆಗೆದುಕೊಂಡು ಹೋಗಲಾಗಿದೆ’ ಎಂದರು.
ಆಹ್ವಾನವಿಲ್ಲ: ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ, ಈ ಮೂರ್ತಿ ಮೈದಳೆಯಲು ಶಿಲೆ ಸಿಕ್ಕ ಜಮೀನಿನ ಮಾಲೀಕ ರಾಮದಾಸ್ ಅವರಿಗೆ ಆಹ್ವಾನವಿಲ್ಲ. ‘ನಮ್ಮ ಜಮೀನಿನಲ್ಲಿ ದೊರೆತ ಶಿಲೆ ಮೂರ್ತಿಯಾಗಿ ಪೂಜಿಸಲಾಗುತ್ತದೆ ಎನ್ನುವುದು ಸಂತೋಷ ಹೆಚ್ಚಿಸಿದೆ. ಸಮಾಂಭಕ್ಕೆ ಆಹ್ವಾನವಿಲ್ಲ ಎನ್ನುವ ಬೇಸರವಿದೆ. ಮುಂದೆ ಸಾಧ್ಯವಾದರೆ ಹೋಗಿ ರಾಮನ ದರ್ಶನ ಪಡೆಯುತ್ತೇನೆ’ ಎಂದು ಜಮೀನಿನ ಮಾಲೀಕ ರಾಮದಾಸ್ ಹೇಳುತ್ತಾರೆ.
ಶಿಲೆ ಸಿಕ್ಕ ಜಾಗದಲ್ಲಿ ಮಂದಿರ: ಅಯೋಧ್ಯೆ ಬಾಲರಾಮನ ಮೂರ್ತಿಗಾಗಿ ಬಳಸಿರುವ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ರಾಮಮಂದಿರ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಜಿ.ಟಿ. ದೇವೇಗೌಡ ತಿಳಿಸಿದರು. ವಿಗ್ರಹ ಕೆತ್ತನೆಗಾಗಿ ಬಳಸಿರುವ ಕೃಷ್ಣ ಶಿಲೆಯು ಚಾಮುಂಡೇಶ್ವರಿ ಕ್ಷೇತ್ರದ ಹಾರೋಹಳ್ಳಿಯ ರಾಮದಾಸ್ ಅವರ ಜಮೀನಿನಲ್ಲಿ ಸಿಕ್ಕಿದೆ. ಜ.22ರಂದು ಅಯೋಧ್ಯೆಯಲ್ಲಿ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠೆ ನಡೆಯುವ ಸಂದರ್ಭದಲ್ಲಿ ಕೃಷ್ಣಶಿಲೆ ದೊರೆತ ಸ್ಥಳದಲ್ಲಿ ನಾವು ಭೂಮಿಪೂಜೆ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಗ್ರಾಮಸ್ಥರನ್ನು ಸೇರಿಸಿ ಕೃಷ್ಣಶಿಲೆ ದೊರೆತ ಜಾಗದಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತೇವೆ ಎಂದರು.