ನವದೆಹಲಿ: ಇತ್ತೀಚೆಗಷ್ಟೇ ಬಿಡುಗಡೆಯಾದ ಜೇಮ್ಸ್ ಕ್ಯಾಮರೂನ್ ನಿರ್ದೇಶನ ಹಾಗೂ ನಿರ್ಮಾಣದ ಅವತಾರ್ ದಿ ವೇ ಆಫ್ ವಾಟರ್ ಸಿನಿಮಾ ಬಾಕ್ಸ್ಆಫೀಸ್ನಲ್ಲಿ ಕಮಾಲ್ ಮಾಡಿದೆ. ಭಾರತದಲ್ಲೂ ಈ ಸಿನಿಮಾ ದಾಖಲೆ ಗಳಿಕೆ ಮಾಡಿದ್ದು, ಬಿಡುಗಡೆಯಾದ ಮೂರೇ ದಿನದಲ್ಲಿ 100 ಕೋಟಿ ರೂ. ಕ್ಲಬ್ ದಾಳಿ 200 ಕೋಟಿ ರೂ. ಕ್ಲಬ್ ಸೇರುವ ಅಂಚಿಗೆ ಬಂದಿದೆ.
ಅವತಾರ್ ಸಿನಿಮಾ ದೃಶ್ಯ ವೈಭವ ಮತ್ತು ಸಾಹಸಗಳನ್ನು ನೋಡಿ ವೀಕ್ಷಕರು ಮಂತ್ರಮುಗ್ಧರಾಗಿದ್ದಾರೆ. ಅವಾತರ್ ಸಿನಿಮಾದ ಕ್ರೇಜ್ ಹೆಚ್ಚಾಗಿದ್ದು, ಇದರಿಂದ ಪ್ರಭಾವಿತನಾದ ವ್ಯಕ್ತಿಯೊಬ್ಬ ಸಮುದ್ರದಲ್ಲಿ ತಿಮಿಂಗಿಲ ಶಾರ್ಕ್ ಏರಿ ಸವಾರಿ ಮಾಡುವ ಮೂಲಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದ್ದಾನೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವತಾರ್ ಸಿನಿಮಾದಲ್ಲಿ ತಿಮಿಂಗಿಲ ಮತ್ತು ತೊರುಕು ( ಡ್ರಾಗನ್ ರೀತಿಯ ಪ್ರಾಣಿ) ಜೀವಿಯ ಮೇಲೆ ಸವಾರಿ ಮಾಡುವ ಚಿತ್ರದ ಪ್ರಮುಖ ಪಾತ್ರಧಾರಿಯಿಂದ ವ್ಯಕ್ತಿ ಪ್ರಭಾವಿತಗೊಂಡು ತಿಮಿಂಗಿಲ ಶಾರ್ಕ್ ಮೇಲೆ ಸವಾರಿ ಮಾಡಿರುವಂತೆ ಕಾಣುತ್ತದೆ.
ವೈರಲ್ ವಿಡಿಯೋ ನೋಡುವುದಾದರೆ, ಅರಬ್ ಮೂಲದ ವ್ಯಕ್ತಿಗಳು ಸಮುದ್ರದ ಮಧ್ಯದಲ್ಲಿ ವಿಹಾರ ನೌಕೆಯಲ್ಲಿದ್ದಾರೆ. ಅವರಲ್ಲಿ ಒಬ್ಬರು ತಿಮಿಂಗಿಲ ಶಾರ್ಕ್ ಮೇಲೆ ಏರಿ ಆಳವಾದ ಸಮುದ್ರಕ್ಕೆ ಸವಾರಿ ಮಾಡುವಾಗ ಆತನ ಸ್ನೇಹಿತರ ಗುಂಪು ವಿಡಿಯೋ ರೆಕಾರ್ಡ್ ಮಾಡಿದ್ದಾರೆ. ಈ ವಿಡಿಯೋವನ್ನು ಪ್ರಖ್ಯಾತ ಮೀಮ್ಸ್ ಇನ್ಸ್ಟಾಗ್ರಾಂ ಹ್ಯಾಂಡಲ್ laughtercolours ನಲ್ಲಿ ಶೇರ್ ಮಾಡಲಾಗಿದ್ದು, ಅವತಾರ್ 2 ನೋಡಿದ ಬಳಿಕ ನಾನು ಎಂಬ ಅಡಿಬರಹ ನೀಡಲಾಗಿದೆ.
ಡ್ಯಾಡಿ ಪರೋಡಿ ಹೆಸರಿನ ಟ್ವಿಟರ್ ಖಾತೆಯಲ್ಲೂ ವಿಡಿಯೋ ಪೋಸ್ಟ್ ಮಾಡಲಾಗಿದ್ದು, 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 9 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಸಾಕಷ್ಟು ಹಾಸ್ಯಭರಿತ ಕಾಮೆಂಟ್ಗಳು ಹರಿದು ಬರುತ್ತಿದೆ. ಈ ವಿಡಿಯೋ ನೋಡಿ ನಿಮಗೆ ಏನನಿಸಿತು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ. (ಏಜೆನ್ಸೀಸ್)