ಗುಂಟೂರು: ತಂದೆ-ತಾಯಿ ತಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ನಿಟ್ಟಿನಲ್ಲಿ ಹಗಲಿರುಳು ಕಷ್ಟಪಟ್ಟು ಕೆಲಸ ಮಾಡಿ ಸಾಕಿ ಸಲಹುತ್ತಾರೆ. ಅದೇ ರೀತಿ ಇಲ್ಲೊಬ್ಬ ತಂದೆ ತನ್ನ ಮಕ್ಕಳಿಗೆ ಉತ್ತಮ ಭವಿಷ್ಯ ಒದಗಿಸುವ ನಿಟ್ಟಿನಲ್ಲಿ ತನ್ನ ಕಿಡ್ನಿಯನ್ನು ಮಾರಿ ಮೋಸ ಹೋಗಿರುವ ಘಟನೆ ಬೆಳಕಿಗೆ ಬಂದಿದ್ದು, ಸೈಬರ್ ವಂಚಕರು ಅಮಾಯಕರನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂಬುದಕ್ಕೆ ಈ ಪ್ರಕರಣವೇ ಜೀವಂತ ಸಾಕ್ಷಿಯಾಗಿದೆ.
ಆಂಧ್ರಪ್ರದೇಶ ಮೂಲದ ಆಟೋ ಚಾಲಕ ಮಧುಬಾಬು ಗಾರ್ಲಪಟ್ಟಿ (31) ಎಂಬಾತ ತನ್ನ ಸಾಲವನ್ನು ತೀರಿಸಿ ಮಕ್ಕಳಿಗೆ ಉತ್ತಮ ಭವಿಷ್ಯ ನೀಡುವ ನಿಟ್ಟಿನಲ್ಲಿ ಫೇಸ್ಬುಕ್ನಲ್ಲಿ ಬಂದ ಜಾಹೀರಾತಿನ ಮೇಲೆ ಕ್ಲಿಕ್ ಮಾಡಿ ಮೋಸ ಹೋಗಿದ್ದಾನೆ. ಕಿಡ್ನಿ ಮಾರಾಟ ಮಾಡಿದರೆ 30 ಲಕ್ಷ ರೂಪಾಯಿ ಹಣ ನೀಡುವುದಾಗಿ ಸಂತ್ರಸ್ತನನ್ನು ನಂಬಿಸಿದ ದುರುಳರು ಅಕ್ರಮ ಅಂಗಾಂಗ ಸಾಗಣೆಯ ಭಯಾನಕ ದಂಧೆಗೆ ಮಧುಬಾಬುನನ್ನು ಬಳಸಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗುಂಟೂರು ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಫೇಸ್ಬುಕ್ ಜಾಹೀರಾತಿನ ಮೂಲಕ ಗುಂಟೂರು ನಿವಾಸಿ ಮಧುಬಾಬುಗೆ ವಿಜಯವಾಡ ಮೂಲದ ಬಾಷಾ ಎಂಬ ಏಜೆಂಟ್ ಪರಿಚಯವಾಗಿದ್ದು, ನೇರ ವಹಿವಾಟು ನಡೆಸುವುದಾಗಿ ಹೇಳಿ ವಿಜಯವಾಡದ ವಿಜಯಾ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೇಳಿ ಶಸ್ತ್ರಚಿಕಿತ್ಸೆ ಮೂಲಕ ಕಿಡ್ನಿಯನ್ನು ಹೊರತೆಗೆದಿದ್ದಾರೆ.
ಶಸ್ತ್ರಚಿಕಿತ್ಸೆಗೂ ಮುನ್ನ ಮಧುಬಾಬು ಕುಟುಂಬದೊಂದಿಗೆ ಸಂಪರ್ಕದಲ್ಲಿರುವುದಾಗಿ ನಂಬಿಸಿದ ಆರೋಪಿಗಳು ಆಪರೇಷನ್ ಬಳಿಕ ಹಣ ನಿಮ್ಮ ಮನೆ ತಲುಪುತ್ತದೆ ಎಂದು ನಂಬಿಸಿದ್ದಾರೆ. ಆಪರೇಷನ್ ಬಳಿಕ ಮಧುಬಾಬುಗೆ 50 ಸಾವಿರ ಹಣ ನೀಡಿದ ಆರೋಪಿಗಳು ಬಾಲಿ ಮೊತ್ತವನ್ನು ನೀಡುವುದಾಗಿ ನಂಬಿಸಿ ಕಳುಹಿಸಿದ್ದಾರೆ. ಬಳಿಕ ಆತನಿಗೆ ಹಣ ನೀಡದೆ ಬೆದರಿಕೆ ಹಾಕಲು ಶುರು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಈ ಗ್ಯಾಂಗ್ನ ಮತ್ತಷ್ಟು ಕರಾಳ ಕೃತ್ಯ ಬಯಲಾಗಿದೆ.
ಆರೋಪಿಗಳು ಮಧುಬಾಬು ಮತ್ತು ಸ್ವೀಕರಿಸುವವರ ಕುಟುಂಬದ ನಡುವೆ ನಕಲಿ ಸಂಬಂಧವನ್ನು ಸ್ಥಾಪಿಸಲು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಒಪ್ಪಿಗೆಯಂತೆ ಎಡಭಾಗದ ಬದಲಿಗೆ ಮಧುಬಾಬು ಅವರ ಬಲ ಕಿಡ್ನಿಯನ್ನು ತೆಗೆದುಕೊಂಡಿದ್ದಾರೆ. ವಿಜಯ ಆಸ್ಪತ್ರೆಯ ವೈದ್ಯನಾದ ಡಾ. ಶರತ್ ಬಾಬು ಮತ್ತು ಗ್ಯಾಂಗ್ ಈ ಕೃತ್ಯವನ್ನು ಎಸಗಿದ್ದು, ಈ ಗ್ಯಾಂಗ್ ಅಂಗಾಂಗ ಸಾಗಣೆಯೇ ಪ್ರಮುಖ ವೃತ್ತಿಯನ್ನಾಗಿಸಿಕೊಂಡಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತಲೆಮಾರಿಸಿಕೊಂಡಿರುವ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧುಬಾಬು ಮಾತನಾಡಿ, ಅವರು ನನ್ನ ಆರ್ಥಿಕ ಸ್ಥಿತಿಯ ಲಾಭ ಪಡೆದು ನಾನು ಅಗತ್ಯವಿರುವವರಿಗೆ ಸಹಾಯ ಮಾಡುತ್ತಿದ್ದೇನೆ ಎಂದು ನಂಬಿಸಿದರು. ನಾನು ಒಪ್ಪಂದಕ್ಕೆ ಸಹಿ ಹಾಕಲು ಮುಖ್ಯ ಕಾರಣವೇನೆಂದರೆ ಬರುವ ಹಣದಿಂದ ನನ್ನ ಸಾಲವನ್ನು ತೀರಿಸಿ ಮಕ್ಕಳಿಗೆ ಉತ್ತಮ ಭವಿಷ್ಯ ನೀಡಲು ಸಹಾಯವಾಗುತ್ತದೆ ಎಂದು ಭಾವಿಸಿದ್ದೆ. ಆದರೆ, ಹೀಗಾಗುತ್ತೆ ಎಂದು ಭಾವಿಸಿರಲಿಲ್ಲ. ದಯವಿಟ್ಟು ನನಗೆ ನ್ಯಾಯ ಕೊಡಿಸಿ ಎಂದು ಮಧುಬಾಬು ಮನವಿ ಮಾಡಿದ್ದಾರೆ.
ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ವಿಜಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವಕ್ತಾರರು ಆ ಶಸ್ತ್ರಚಿಕಿತ್ಸೆಯೊಂದಿಗೆ ಮುಂದುವರಿಯಲು ಕಾನೂನು ದಾಖಲಾತಿಗಳನ್ನು ಆಧಾರವಾಗಿ ಉಲ್ಲೇಖಿಸಿದ್ದಾರೆ. ಆಸ್ಪತ್ರೆಯು ಕಾನೂನಿನ ಪ್ರಕಾರ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿದೆ. ನಮ್ಮ ವೈದ್ಯರ ವಿರುದ್ಧ ಇರುವ ಆರೋಪಗಳು ಆಧಾರರಹಿತವಾಗಿವೆ ಮತ್ತು ಸರಿಯಾದ ಮಾರ್ಗಗಳ ಮೂಲಕ ಪರಿಹರಿಸಲಾಗುವುದು ಎಂದು ವಕ್ತಾರರು ತಿಳಿಸಿದ್ದಾರೆ.