ನ್ಯೂಸ್

ನಿಮ್ಮ ಆಟಿಟ್ಯೂಡ್ ನಿಮ್ಮ ಜೇಬಲ್ಲಿ ಇಟ್ಕೊಳ್ಳಿ! ಆಟೋ ಚಾಲಕನ ರೂಲ್ಸ್​ ನೋಡಿ ಪ್ರಯಾಣಿಕ ಶಾಕ್​ | Auto Driver

ನವದೆಹಲಿ: ನಗರಗಳು, ಪಟ್ಟಣಗಳು ​​ಅಥವಾ ಯಾವುದೇ ಪ್ರದೇಶವಾಗಿರಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪಲು ಬಹು ಬೇಗನೆ ಲಭ್ಯವಾಗುವ ವಾಹನವೆಂದರೆ ಅದು ಆಟೋ. ಆಟೋಗಳನ್ನು ಬಳಸುವುದು ಸಾಮಾನ್ಯವಾಗಿದೆ. ನೀವು ಗಮನಿಸಿರಬಹುದು ಆಟೋದಲ್ಲಿ ಚಾಲಕರು ( Auto Driver ) ತಮ್ಮ ವೈಯಕ್ತಿಕ ಅಭಿರುಚಿಗೆ ತಕ್ಕಂತೆ ಕೆಲವು ಸಾಲುಗಳನ್ನು ಬರೆಸಿರುತ್ತಾರೆ. ಅಲ್ಲದೆ, ಪೇಂಟಿಂಗ್ ಹಾಗೂ ಫೋಟೋಗಳನ್ನು ಸಹ ಆಟೋದಲ್ಲಿ ಇಟ್ಟುಕೊಳ್ಳುತ್ತಾರೆ. ಅದರಲ್ಲೂ ಆಟೋ ಹಿಂದೆ ಬರೆದ ಸಾಲುಗಳು ಆಗಾಗ ವೈರಲ್​ ಆಗುತ್ತಲೇ ಇರುತ್ತವೆ. ಅದೇ ರೀತಿ ಇತ್ತೀಚೆಗೆ ಆಟೋವೊಂದರ ಬರವಣಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಆಟೋ ಚಾಲಕನೊಬ್ಬ ತನ್ನ ಆಟೋ ಹತ್ತುವ ಪ್ರಯಾಣಿಕರಿಗೆ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಸಿದ್ದಪಡಿಸಿ ಅದಕ್ಕೆ ಸಂಬಂಧಿಸಿದ ನೋಟಿಸ್​ ಅನ್ನು ಆಟೋದಲ್ಲಿ ಅಂಟಿಸಿದ್ದಾನೆ. ಆ ಆಟೋ ಹತ್ತಿದ ಪ್ರಯಾಣಿಕರೊಬ್ಬರು ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದು, ಇದೀಗ ಭಾರಿ ವೈರಲ್ ಆಗಿದೆ. ಅಷ್ಟಕ್ಕೂ ಆ ಫೋಟೋದಲ್ಲಿ ಇರುವುದಾದೂ ಏನು ಎಂಬುದನ್ನು ನಾವೀಗ ತಿಳಿಯೋಣ.

ಆಟೋ ಚಾಲಕನು ತನ್ನ ಆಟೋವನ್ನು ಹತ್ತಿದ ಪ್ರತಿಯೊಬ್ಬ ಗ್ರಾಹಕನಿಗೆ ಕೆಲವು ನಿಯಮಗಳನ್ನು ಪಾಲಿಸುವಂತೆ ಆಗ್ರಹಿಸಿದ್ದಾನೆ. ಅವರು ಒಟ್ಟು ಏಳು ಅಂಶಗಳನ್ನು ಉಲ್ಲೇಖಿಸಿದ್ದು, ಅವು ಈ ಕೆಳಕಂಡಂತಿವೆ.

* ನೀವು ಕ್ಯಾಬ್ ಮಾಲೀಕರಲ್ಲ.

* ಕ್ಯಾಬ್ ಓಡಿಸುವ ವ್ಯಕ್ತಿಯೇ ಮಾಲೀಕ.

* ಸೌಜನ್ಯದಿಂದ ಮಾತನಾಡಿ, ಗೌರವವನ್ನು ಪಡೆಯಿರಿ.

* ನಿಧಾನವಾಗಿ ಬಾಗಿಲು ಮುಚ್ಚಿ.

* ನಿಮ್ಮ ಆಟಿಟ್ಯೂಡ್ ಅನ್ನು ನಿಮ್ಮ ಜೇಬಿನಲ್ಲಿ ಇರಿಸಿ, ದಯವಿಟ್ಟು ನಮಗೆ ತೋರಿಸಬೇಡಿ. ನೀವೇನು ನಮಗೆ ಹೆಚ್ಚು ಪಾವತಿಸುತ್ತಿಲ್ಲ.

* ನಮ್ಮನ್ನು ಅಣ್ಣ ಎಂದು ಕರೆಯಬೇಡಿ.

* ಗಮನಿಸಿ: ವೇಗವಾಗಿ ಓಡಿಸಲು ಕೇಳಬೇಡಿ.

ಹೀಗೆ ತಮ್ಮದೇ ಶೈಲಿಯಲ್ಲಿ ನಿಯಮಗಳನ್ನು ಸಿದ್ಧಪಡಿಸಿ ತಮ್ಮ ಸೀಟಿನ ಹಿಂಬದಿಯಲ್ಲಿ ಅಂಟಿಸಿದ್ದಾರು. ವಿಶೇಷವಾಗಿ ಇದರಲ್ಲಿ "ನಿಮ್ಮ ಆಟಿಟ್ಯೂಡ್​ ಅನ್ನು ನಿಮ್ಮ ಜೇಬಿನಲ್ಲಿ ಇರಿಸಿ, ದಯವಿಟ್ಟು ಅದನ್ನು ನಮಗೆ ತೋರಿಸಬೇಡಿ, ನೀವೇನು ನಮಗೆ ಹೆಚ್ಚು ಹಣವನ್ನು ನೀಡುತ್ತಿಲ್ಲ" ಎಂಬ ಸಾಲು ನೆಟ್ಟಿಗರ ಗಮನ ಸೆಳೆದಿದ್ದು, ಪರ-ವಿರೋಧ ಚರ್ಚೆಗೆ ಗ್ರಾಸವಾಗಿದೆ. ಚಾಲಕನ ನಿಯಮಗಳನ್ನು ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮಗೆ ತಿಳಿಸಿ. (ಏಜೆನ್ಸೀಸ್​)